

ಶಿವಮೊಗ್ಗ: ನಮ್ಮಲ್ಲಿರುವ ಸೇವಾ ಮನೋಭಾವದಿಂದ ಸಮಾಜದಲ್ಲಿ ಉನ್ನತ ಸ್ಥಾನಗಳ ಪ್ರತಿಫಲತೆ ಪಡೆಯಲು ಸಾಧ್ಯ ಎಂದು ಎನ್‌ಇಎಸ್ (ರಾಷ್ಟ್ರೀಯ ಶಿಕ್ಷಣ ಸಮಿತಿ) ಕಾರ್ಯದರ್ಶಿ ಎಸ್.ಎನ್.ನಾಗರಾಜ ಅಭಿಪ್ರಾಯಪಟ್ಟರು.
ತಾಲೂಕಿನ ಹರಮಘಟ್ಟ ಗ್ರಾಮದಲ್ಲಿ ಎನ್‌ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ಎನ್‌ಎಸ್‌ಎಸ್ 1 ಮತ್ತು 2 ಘಟಕಗಳಿಂದ ಎನ್‌ಎಸ್‌ಎಸ್ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸೇವೆಗಾಗಿ ಬಾಳು ಎಂದು ನಮ್ಮ ಹಿರಿಯರು ಬಾಳಿ ಬದುಕಿ ತೋರಿಸಿದ್ದಾರೆ. ವೈಯಕ್ತಿಕ ಉನ್ನತಿಕರಣದ ಜತೆಗೆ ಸಮಾಜದ ಸ್ವಾಸ್ಥ್ಯ ಕಾಪಾಡುವುದು ನಮ್ಮ ಕರ್ತವ್ಯವಾಗಿದ್ದು, ಸಾಮಾಜಿಕ ಸೇವೆ ನಮ್ಮೆಲ್ಲರ ಹೊಣೆ ಎಂದು ಹೇಳಿದರು.
ಕುವೆಂಪು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಪರಿಸರ ನಾಗರಾಜ ಮಾತನಾಡಿ, ಪ್ಲಾಸ್ಟಿಕ್ ಮುಕ್ತ ಸಮಾಜ ನಮ್ಮದಾಗಬೇಕಿದೆ. ನಮಗೆ ಬೇಕಾದ ಜೀವ ಜಲ, ಆಮ್ಲಜನಕ ನೀಡುವ ಪರಿಸರವನ್ನು ಸ್ವಚ್ಛಂದವಾಗಿ ಸಂರಕ್ಷಿಸೋಣ ಎಂದು ಹೇಳಿದರು.
ಇನ್‌ಇಎಸ್ ಅಜೀವ ಸದಸ್ಯ ಕೆ.ವಿ.ರವೀಂದ್ರ, ಗ್ರಾಮದ ಮುಖಂಡ ಹನುಮಂತಪ್ಪ, ಪ್ರಾಚಾರ್ಯ ಪ್ರೊ. ಬಿ.ಎಸ್.ಶಿವಪ್ರಸಾದ್, ಎನ್‌ಎಸ್‌ಎಸ್ ಘಟಕಗಳ ಕಾರ್ಯಕ್ರಮಾಧಿಕಾರಿ ಯು.ಎ.ಚಂದನ್, ಎನ್.ಗುರುರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.