

ಬೆಂಗಳೂರು: ಸಮಾಜದಲ್ಲಿರುವ ಜಾತಿ, ಧರ್ಮವನ್ನೂ ಮೀರಿ ಕನ್ನಡ ಬೆಳವಣಿಗೆಯನ್ನು ಸಾಧಿಸಿರುವುದರ ಪರಿಣಾಮ ಶಾಸ್ತ್ರೀಯ ಭಾಷೆಯಾಗಿ ಗುರುತಿಸಿಕೊಂಡಿದೆ. ಕನ್ನಡಕ್ಕೆ ಸಂದಿರುವ ಈ ಗೌರವವನ್ನು ಉಳಿಸಿ ಬೆಳಸುವತ್ತ ಎಲ್ಲರೂ ಕೈಜೋಡಿಸಬೇಕಿದೆ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ ವೆಂಕಟೇಶ್ ಅಭಿಪ್ರಾಯಪಟ್ಟರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಕರುನಾಡ ವಿಜಯಸೇನೆ ಆಯೋಜಿಸಿದ್ದ ‘ಕದಂಬ ಕನ್ನಡಿಗ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಧಕರನ್ನು ಗೌರವಿಸಿ ಅವರು ಮಾತನಾಡಿದರು.
ಭಾರತೀಯ ಭಾಷೆಗಳಲ್ಲಿ ಕನ್ನಡಕ್ಕೆ ತನ್ನದೇ ಆದ ವಿಶೇಷ ಸ್ಥಾನವಿದೆ. ಕನ್ನಡದ ಭಾಷೆ ಹಾಗೂ ಸಾಹಿತ್ಯ ಕ್ಷೇತ್ರ ಈ ಮಟ್ಟಕ್ಕೆ ಬರಲು ಹಲವರ ಪರಿಶ್ರಮ ಇದೆ. ಭವಿಷ್ಯದಲ್ಲೂ ನಮ್ಮ ಭಾಷೆಯನ್ನು ದೊಡ್ಡ ಮಟ್ಟಕ್ಕೆ ಏರಬೇಕಿದೆ. ಈ ಮುನ್ನೋಟವನ್ನು ಗ್ರಹಿಸಿ ಭಾಷೆ ಬೆಳವಣಿಗೆಯಲ್ಲಿ ಎಲ್ಲರು ಪಾಲ್ಗೊಳ್ಳುವ ಅವಶ್ಯಕತೆ ಇದೆ ಎಂದರು.
ಗಡಿನಾಡು ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಸಿ.ಸೋಮಶೇಖರ್ ಮಾತನಾಡಿ, ಆದಿಕವಿ ಪಂಪ, ರನ್ನ, ಜನ್ನ ಸೇರಿದಂತೆ ಸಂತರು, ರಾಜ ಮಹಾರಾಜರು ಕನ್ನಡ ಭಾಷಾ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಈ ಪರಂಪರೆ ಮುಂದುವರಿಯಲು ನಮ್ಮ ಹಿರಿಯರು ಹಾಕಿಕೊಟ್ಟಿರುವ ಹಾದಿಯಲ್ಲಿ ಸಾಗಬೇಕಿದೆ ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ಕನ್ನಡಪರ ಹೋರಾಟಗಾರರಾದ ಆರ್.ಚಂದ್ರಪ್ಪ, ಎನ್.ರಾಮಚಂದ್ರಯ್ಯ, ಕೆ.ವಿ.ರವಿದಾಸ್, ರಘುನಾರಾಯಣಗೌಡ, ಆಂಜನಪ್ಪ ದಾಪಿ, ರಮೇಶ್‌ಗೌಡ, ಕೃಷ್ಣೇಗೌಡ, ಕನ್ನಡದ ಕೃಷ್ಣ, ಸಾರಿಕಾ, ಶೋಭಾ ವಿನಾಯಕ್ ಅವರಿಗೆ ಕದಂಬ ಪ್ರಶಸ್ತಿ ವಿತರಿಸಿ ಗೌರವಿಸಲಾಯಿತು.
ಕನ್ನಡದ ಪರವಾಗಿ ಧ್ವನಿ ಎತ್ತುವವರನ್ನು ಹತ್ತಿಕ್ಕುವ, ಕ್ರಿಮಿನಲ್ ಪ್ರಕರಣ ದಾಖಲು ಮಾಡುವುದು ಸರಿಯಲ್ಲ. ಅನ್ಯಭಾಷಿಕ ಐಎಎಸ್ ಅಧಿಕಾರಿಗಳು ಕಾನೂನು, ಆಡಳಿತಾತ್ಮಕ ವಿಚಾರಗಳಲ್ಲಿ ಸರ್ಕಾರವನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಸರ್ಕಾರ ಮಣೆ ಹಾಕದೆ ಕನ್ನಡ ಪರವಾದ ನಿಲುವು ಕೈಗೊಳ್ಳಬೇಕು.
- ದೀಪಕ್ ಎಚ್ ಎನ್, ರಾಜ್ಯಾಧ್ಯಕ್ಷ, ಕರುನಾಡ ವಿಜಯಸೇನೆ