ಸಕ್ರೆಬೈಲ್ ಬಿಡಾರದಲ್ಲಿ ಆನೆಗಳ ಸಂಭ್ರಮ; ಪ್ರವಾಸಿಗರು ಫಿದಾ

World Elephant Day in sakrebail
ಸಕ್ರೆಬೈಲ್ ಬಿಡಾರದಲ್ಲಿ ಆನೆಗಳ ಕಣ್ತುಂಬಿಕೊಂಡ ಪ್ರವಾಸಿಗರು.
Published on

ಶಿವಮೊಗ್ಗ: ಗಾಜನೂರು ಸಮೀಪದ ಸಕ್ರೆಬೈಲ್ ಆನೆ ಬಿಡಾರದಲ್ಲಿ ಶನಿವಾರ ಗಜಪಡೆಯ ಸಂಭ್ರಮ ಮನೆ ಮಾಡಿತ್ತು. ನಾನಾ ಬಣ್ಣಗಳಿಂದ ಅಲಂಕಾರಗೊಂಡಿದ್ದ ಆನೆಗಳು ನೋಡುಗರ ಕಣ್ಮನ ಸೆಳೆದವು. ಇಡೀ ದಿನ ಬಿಡಾರದಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು.

ಶಿವಮೊಗ್ಗ ವನ್ಯಜೀವಿ ವಿಭಾಗ, ಶಿವಮೊಗ್ಗ ವನ್ಯಜೀವಿ ಉಪ ವಿಭಾಗ ಹಾಗೂ ಸಕ್ರೆಬೈಲ್ ವನ್ಯಜೀವಿ ವಲಯದ ಆಶ್ರಯದಲ್ಲಿ ವಿಶ್ವ ಆನೆ ದಿನವನ್ನು ಆಚರಿಸಲಾಯಿತು. ನಾನಾ ಬಣ್ಣಗಳಿಂದ ಅಲಂಕಾರಗೊಂಡಿದ್ದ ಗಜಪಡೆಯನ್ನು ಕಂಡು ಪ್ರವಾಸಿಗರು ಫಿದಾ ಆದರು. ಆನೆ ದಿನಾಚರಣೆ ನಿಮಿತ್ತ ಗಜಪಡೆಗೆ ವಿಶೇಷ ಪೂಜೆ ಮತ್ತು ಆಹಾರ ವಿತರಣೆ ಮಾಡಲಾಯಿತು.
ಸಕ್ರೆಬೈಲ್ ಬಿಡಾರದ ಎಂದಿನಂತೆ ಇರಲಿಲ್ಲ. ಅದರಲ್ಲೂ ವಿಶ್ವ ಆನೆ ದಿನ ಆದ ಕಾರಣ ಹಲವು ವಿಶೇಷತೆಗಳಿಂದ ಕೂಡಿತ್ತು. ಸಾಗರ್, ಅಭಿಮನ್ಯು, ನೇತ್ರಾವತಿ, ರಾಘವೇಂದ್ರ, ಕೃಷ್ಣ, ಧನುಷ್ ಸೇರಿ 20 ಆನೆಗಳನ್ನು ಸಿಂಗಾರಗೊಳಿಸಲಾಗಿತ್ತು. ಸಕ್ರೆಬೈಲಿನ ಮೊರಾರ್ಜಿ ಶಾಲೆಯಿಂದ ಆನೆ ಬಿಡಾರದವರೆಗೆ ಶಾಲಾ ವಿದ್ಯಾರ್ಥಿಗಳು ಮತ್ತು ಅಧಿಕಾರಿ ಮತ್ತು ಸಿಬ್ಬಂದಿ ವರ್ಗದಿಂದ ಅರಣ್ಯ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಜಾಥಾ ಕಾರ್ಯಕ್ರಮ ನಡೆಯಿತು. ಆನೆಗಳಿಗೆ ವಿಶೇಷ ಪೂಜೆ ನಡೆಸಿದ ಬಳಿಕ ಕಬ್ಬು, ಬಾಳೆಹಣ್ಣು, ತರಕಾರಿ ಸೇರಿ ನಾನಾ ಬಗೆಯ ಆಹಾರವನ್ನು ನೀಡಲಾಯಿತು.
ಶಿವಮೊಗ್ಗ ವೃತ್ತದ ಸಿಸಿಎಫ್ ಡಾ. ಹನುಮಂತಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಐಯುಸಿಎನ್ ಎಸ್‌ಎಸ್‌ಸಿ ಏಷಿಯನ್ ಎಲಿಫೆಂಟ್ ಸ್ಟೆಷಲಿಸ್ಟ್ ಗ್ರೂಪ್‌ನ ಉಪಾಧ್ಯಕ್ಷೆ ಅಮೆರಿಕಾದ ಹೈಡಿ ರಿಡಲ್ ಅವರು ವೆಬಿನಾರ್ ಮೂಲಕ ಮಾಹಿತಿ ನೀಡಿದರು. ಮೈಸೂರಿನ ಎನ್‌ಜಿಓ ಜೀವ್(ಜೆಐವಿ)ನ ಡಾ. ಮಮತಾ ಅವರು ಆನೆ ಮತ್ತು ಮಾನವನ ಸಹ ಅಸ್ತಿತ್ವದ ಕುರಿತು ಉಪನ್ಯಾಸ ನೀಡಿದರು. ಕುವೆಂಪು ವಿವಿ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ಪರಿಸರ ನಾಗರಾಜ್ ಆನೆಗಳ ಆವಾಸಸ್ಥಳಗಳು ಮತ್ತು ಅವುಗಳ ಪ್ರಾಮುಖ್ಯತೆ ಕುರಿತು ಮಾತನಾಡಿದರು.
ಪಶು ವೈದ್ಯಾಧಿಕಾರಿಗಳಾದ ಡಾ. ವಿನಯ್, ಡಾ. ಮುರಳಿ ಮನೋಹರ್ ಮತ್ತು ಡಾ. ಕಲ್ಲಪ್ಪ, ಆನೆ ಬಿಡಾರದ ಸಿಬ್ಬಂದಿ ಸೋಮಣ್ಣ, ಮಾವುತರಾದ ಬಿ.ಬಸವರಾಜು ಹಾಗೂ ಕಾವಾಡಿಗ ಸಿದ್ದಿಕ್ ಪಾಷಾ ಅವರನ್ನು ಸನ್ಮಾನಿಸಲಾಯಿತು. ಗಾಜನೂರು ಗ್ರಾಪಂ ಅಧ್ಯಕ್ಷ ನಾಗರಾಜ್, ಎಸಿಎಫ್‌ಗಳಾದ ಎಸಿಎಫ್ ಯೋಗೇಶ್, ಬಿ.ಸುರೇಶ್, ಮೊರಾರ್ಜಿ ಶಾಲೆಯ ಪ್ರಾಚಾರ್ಯ ಲೋಕೇಶ್ ದಳವಾಯಿ, ತುಂಗಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ವೀರಭದ್ರ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net