ಇಳೆಖಾನ್ ಭಾಗದಲ್ಲಿ ಹೆಚ್ಚಾದ ಕಾಡಾನೆ ಹಾವಳಿ

3 ckm 3 elephant
ಚಿಕ್ಕಮಗಳೂರು ತಾಲೂಕು ಇಳೆಖಾನ್ ಬಳಿ ಕಾಣಿಸಿಕೊಂಡ ಕಾಡಾನೆಗಳು.
Published on

ನಿತ್ಯಾನಂದ ಶಿವಗಂಗೆ ಚಿಕ್ಕಮಗಳೂರು
ಕಾಫಿನಾಡಿನಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿ ಮುಂದುವರಿದಿದೆ. ಮಳೆಗಾಲದ ಅವಧಿಯಲ್ಲಿ ಮಲೆನಾಡಿನಲ್ಲಿ ದಟ್ಟವಾದ ಮಂಜು ಕವಿದ ವಾತಾವರಣವಿರುವುದರಿಂದ ಆನೆ ಕೆಲವೇ ಮೀಟರ್‌ಗಳ ಅಂತರದಲ್ಲಿದ್ದರೂ ಕಾಣದ ಸ್ಥಿತಿಯಿದೆ. ಹೀಗಾಗಿ ಇಳೆಖಾನ್, ಕಠಾರದಹಳ್ಳಿ, ಗುಡದೂರು ಭಾಗದ ಜನ ಜೀವಭಯದಲ್ಲೇ ಓಡಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.
ಇಳೆಖಾನ್, ಕಠಾರದಹಳ್ಳಿ, ಗುಡದೂರು ಭಾಗದಲ್ಲಿ ಆನೆಗಳು ಹಿಂದಿನಿಂದಲೂ ಕಾಣಿಸಿಕೊಳ್ಳುತ್ತಿವೆ. ಈ ಹಿಂದೆ ರೈತರ ಬೆಳೆಯೂ ಆನೆ ದಾಳಿಯಿಂದ ನಾಶವಾಗಿತ್ತು. ಹೀಗಾಗಿ ಈ ಭಾಗದ ರೈತರು ಆನೆ ಹಾವಳಿ ನಿಯಂತ್ರಿಸುವಂತೆ ಡಿಎಫ್‌ಒ ರಮೇಶ್ ಬಾಬು ಅವರಿಗೆ ಮನವಿ ಸಲ್ಲಿಸಿದ್ದರು. ಅಂದಿನಿಂದಲೂ ನಿರಂತರವಾಗಿ ಆನೆ ಓಡಿಸುವ ಕಾರ್ಯಾಚರಣೆ ನಡೆಸುತ್ತಿರುವ ಅರಣ್ಯ ಸಿಬ್ಬಂದಿ ಬೆಳೆಹಾನಿಯನ್ನು ಒಂದಷ್ಟು ಮಟ್ಟಿಗೆ ತಡೆದಿದ್ದಾರೆ. ಆದರೆ ಆನೆಗಳನ್ನು ಈ ಭಾಗದಿಂದ ಓಡಿಸಲು ಮಾತ್ರ ಸಾಧ್ಯವಾಗಿಲ್ಲ.
ಇಳೆಖಾನ್ ಭಾಗದಲ್ಲಿಯೇ ಬೀಡುಬಿಟ್ಟಿರುವ ಆನೆಗಳು ಬೇರೆಡೆಗೆ ತೆರಳುತ್ತಿಲ್ಲ. ಕಾಫಿತೋಟ ಹಾಗೂ ತೋಟದ ಪಕ್ಕದ ಕಾಡುಗಳಲ್ಲಿ ಆಶ್ರಯಪಡೆದಿರುವ ಕಾಡಾನೆಗಳು ಆಗಾಗ ಮನೆಗಳತ್ತಲೂ ಆಗಮಿಸುತ್ತಿವೆ. ಇದರಿಂದಾಗಿ ಮನೆಯಿಂದ ಹೊರಬರಲೂ ಜನ ಹೆದರುತ್ತಿದ್ದಾರೆ.
ಮಳೆಗಾಲವಾಗಿರುವುದರಿಂದ ದಟ್ಟ ಮಂಜು ಇಳೆಖಾನ್ ಸೇರಿದಂತೆ ಮಲೆನಾಡು ಭಾಗದಲ್ಲಿ ಆವರಿಸಿದೆ. ಮಂಜಿನಲ್ಲಿ ಕೆಲವೇ ಅಡಿಗಳ ದೂರದಲ್ಲೇ ಆನೆಗಳು ನಿಂತಿದ್ದರೂ ಕಾಣದ ಪರಿಸ್ಥಿತಿಯಿದೆ. ಕೆಲವೊಮ್ಮೆ ಆನೆಗಳು ಮನೆ ಸಮೀಪದ ಕಣಗಳಿಗೆ ಬಂದರೂ ಅವು ಕಾಣಿಸುತ್ತಿಲ್ಲ. ಆನೆ ಸಮೀಪ ಬಂದಾಗ ಮಾತ್ರ ಕಾಣಿಸುತ್ತಿರುವುದರಿಂದ ಜನರಲ್ಲಿ ಭಯ ಹೆಚ್ಚಾಗಿದೆ. ವಾಹನಗಳಲ್ಲಿ ಹೋಗುವಾಗ ಆನೆಗಳು ಹತ್ತಿರ ಬಂದಾಗಲೇ ಗೋಚರವಾಗುವುದರಿಂದ ಅಪಘಾತವಾಗುವ ಸಾಧ್ಯತೆಗಳೂ ಹೆಚ್ಚಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net