ನಾಗರಹೊಳೆಯಲ್ಲಿ ಆನೆ ಗಣತಿ ಯಶಸ್ವಿ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕೆರೆಯ ಬಳಿ ನೀರು ಕುಡಿಯಲು ಬಂದಿರುವ ಮರಿಯಾನೆಯ ಛಾಯಾಚಿತ್ರವನ್ನು ಗಣತಿಸಿಬ್ಬಂದಿ ಕ್ಲಿಕ್ಕಿಸಿದರು.
Published on

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ 2024ನೇ ಸಾಲಿನ ಆನೆಗಣತಿಯ ಅಂತಿಮ ದಿನವಾದ ಶುಕ್ರವಾರ ಮೂರನೇ ಹಂತವಾದ ಕೆರೆಗಳ ಬಳಿ ಗಣತಿ ಯಶಸ್ವಿಯಾಗುವ ಮೂಲಕ ಗಣತಿ ಕಾರ್ಯ ಸಂಪನ್ನಗೊಂಡಿತು.

ಶುಕ್ರವಾರ ಉದ್ಯಾನವನದ 91 ಗಸ್ತು ವ್ಯಾಪ್ತಿಯಲ್ಲಿ ಗಣತಿ ಕಾರ್ಯದ ತರಬೇತಿ ಪಡೆದಿದ್ದ 300ಕ್ಕೂ ಹೆಚ್ಚು ಸಿಬ್ಬಂದಿ ಬೆಳಗ್ಗೆ 6 ಗಂಟೆಯಿಂದ ಉದ್ಯಾನವನದ ಆಯ್ದ ಕೆರೆಗಳ ಬಳಿ ಕುಳಿತು ನೀರು ಕುಡಿಯಲು ಬರುವ ಆನೆಗಳನ್ನು ಗುರುತಿಸಿ ಛಾಯಾಚಿತ್ರಗಳನ್ನು ತೆಗೆದುಕೊಂಡು ಗುಂಪುಗಳಲ್ಲಿರುವ ಆನೆಗಳ ಸಂಖ್ಯೆ, ಗಂಡು, ಹೆಣ್ಣಾನೆ, ಮರಿಗಳು ಮುಂತಾದ ಮಾಹಿತಿಗಳನ್ನು ಕಲೆಹಾಕಿದರು. ಸಂಜೆ 6ವರೆಗೂ ಅಲ್ಲೇ ಕುಳಿತು ಸಂಜೆ ವೇಳೆ ಕೂಡ ನೀರಡಿಕೆಯಿಂದ ಬರುವ ಆನೆಗಳ ಮಾಹಿತಿ ಮತ್ತು ಛಾಯಾಚಿತ್ರಗಳನ್ನು ತೆಗೆದುಕೊಂಡರು.

ಮೇ 23ರಿಂದ ಆರಂಭಗೊಂಡ ಆನೆ ಗಣತಿ ಮೂರು ದಿನಗಳ ಕಾಲ ಯಶಸ್ವಿಯಾಗಿ ಸಂಪನ್ನಗೊಂಡಿತು. ಮೊದಲೆರಡು ದಿನ ಮಳೆ ಸುರಿದ ಕಾರಣದಿಂದ ಗಣತಿಕಾರ್ಯಕ್ಕೆ ಅಲ್ಪಪ್ರಮಾಣದ ಅಡೆತಡೆಯುಂಟಾದರೂ ಸಿಬ್ಬಂದಿ ಮಳೆಯನ್ನು ಲೆಕ್ಕಿಸದೇ ಗಣತಿಕಾರ್ಯವನ್ನು ಯಶಸ್ವಿಗೊಳಿಸಿದ್ದರು.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವು ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಹಬ್ಬಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ಪ್ರದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಶಾಲವಾದ ಆನೆ ಕಾರಿಡಾರ್ ಹೊಂದಿದೆ. ಈಗಾಗಲೇ ಆಧುನಿಕ ತಂತ್ರಜ್ಞಾನವಾದ ಕ್ಯಾಮರಾ ಟ್ರ್ಯಾಪಿಂಗ್ ಮೂಲಕ 15 ದಿನಗಳ ಕಾಲ ಟ್ರ್ಯಾಪಿಂಗ್ ಗಣತಿ ಮಾಡಿ ಮಾಹಿತಿ ಸಂಗ್ರಹಿಸಲಾಗಿದೆ. ಮೂರು ದಿನಗಳ ಗಣತಿಕಾರ್ಯದ ಸಮಗ್ರ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು.
* ಹರ್ಷಕುಮಾರ್ ಚಿಕ್ಕನರಗುಂದ, ಡಿಸಿಎಫ್, ಹುಣಸೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net