

ನವದೆಹಲಿ: ಚೀನಾದಿಂದ ರೇರ್ ಅರ್ಥ್ ಮ್ಯಾಗ್ನೆಟ್ ಬರುವುದು ಸ್ಥಗಿತವಾಗಿರುವ ಬೆನ್ನಲ್ಲೇ ಇನ್ನೊಂದು ಪ್ರಮುಖ ಕಚ್ಚಾ ವಸ್ತುವಾದ ಗೋಲ್ಡ್ ಕಾಂಪೌಂಡ್ (ಚಿನ್ನದ ಸಂಯುಕ್ತ ಪದಾರ್ಥ) ಆಮದಿನ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿರುವುದು ಎಲೆಕ್ಟ್ರಾನಿಕ್ಸ್ ತಯಾರಿಕಾ ವಲಯಕ್ಕೆ ಸಂಕಷ್ಟ ತಂದೊಡ್ಡಿದೆ. ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ (ಡಿಜಿಎಫ್ಟಿ) ಜೂ. 17ರಂದು ಹೊರಡಿಸಿದ ಆದೇಶದಲ್ಲಿ, ಕೊಲಾಯ್ಡಲ್ ಪ್ರಿಶಿಯಸ್ ಮೆಟಲ್ಸ್ ಮತ್ತು ಕಾಂಪೌಂಡ್ಗಳ ಆಮದನ್ನು ಮುಕ್ತ ವರ್ಗದಿಂದ ನಿರ್ಬಂಧಿತ ವರ್ಗಕ್ಕೆ ಮರುವರ್ಗೀಕರಣ ಮಾಡಿರುವುದು ಈ ಸಮಸ್ಯೆಗೆ ಕಾರಣವಾಗಿದೆ. ರೇರ್ ಅರ್ಥ್ ಮ್ಯಾಗ್ನೆಟ್ಗಳು ಮತ್ತು ವಿಶೇಷ ಬಂಡವಾಳ ಸರಕುಗಳ ರಫ್ತಿನ ಮೇಲೆ ಚೀನಾ ನಿರ್ಬಂಧ ಹೇರಿದ್ದನ್ನು ಅನುಸರಿಸಿ ಈ ಬೆಳವಣಿಗೆ ನಡೆದಿದೆ.
‘ಪ್ರಿಂಟೆಡ್ ರ್ಸಟ್ ಬೋರ್ಡ್, ಕ್ಯಾಮೆರಾ ಮಾಡ್ಯೂಲ್, ಯಾಂತ್ರಿಕ ಭಾಗ ಮತ್ತು ಕನೆಕ್ಟರ್ಗಳಂತಹ ಪ್ರಮುಖ ಘಟಕಗಳ ತಯಾರಿಕೆಯಲ್ಲಿ ಚಿನ್ನ-ಆಧಾರಿತ ಲೇಪನ ವಸ್ತುಗಳು ಅತ್ಯಗತ್ಯ. ಆಮದು ನಿರ್ಬಂಧದಿಂದ ದೇಶೀಯ ಎಲೆಕ್ಟ್ರಾನಿಕ್ಸ್ ತಯಾರಿಕೆಗೆ ಕಚ್ಚಾವಸ್ತುಗಳ ಲಭ್ಯತೆ ತೊಂದರೆ ತಂದೊಡ್ಡಿದೆ’ ಎಂದು ಇಂಡಿಯಾ ಸೆಲ್ಯುಲಾರ್ ಆಂಡ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ಐಸಿಇಎ) ಅಧ್ಯಕ್ಷ ಪಂಕಜ್ ಮೊಹಿಂದ್ರೂ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಎಲೆಕ್ಟ್ರಾನಿಕ್ ಘಟಕ ತಯಾರಕರ ಸಂಸ್ಥೆ ಎಲ್ಸಿನಾದ ಮಹಾಕಾರ್ಯದರ್ಶಿ ರಾಜೂ ಗೋಯಲ್ ಕೂಡ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಪೊಟಾಸಿಯಮ್ ಗೋಲ್ಡ್ ಸಯನೈಡ್ (ಜಿಪಿಸಿ) ಮತ್ತು ಈ ರೀತಿಯ ವಸ್ತುಗಳ ರವಾನೆಯನ್ನು ಕಸ್ಟಮ್ಸ್ ಅಧಿಕಾರಿಗಳು ತಡೆಹಿಡಿಯಲು ಆರಂಭಿಸಿದ್ದಾರೆ. ಇದರಿಂದ ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಉತ್ಪಾದನೆ ವಿಳಂಬವಾಗುತ್ತಿದೆ. ಪೂರೈಕೆ ಸರಪಳಿಗೂ ಅಡ್ಡಿಯಾಗಿದೆ. ಇದರಿಂದ ಮೇಕ್ ಇನ್ ಇಂಡಿಯಾದಂತಹ ಮಹತ್ವಾಕಾಂಕ್ಷಿ ಯೋಜನೆಯ ಉದ್ದೇಶಕ್ಕೆ ಕೂಡ ಧಕ್ಕೆ ಆಗುತ್ತದೆ ಎಂದು ತಿಳಿಸಿದ್ದಾರೆ. 2024ರ ಏಪ್ರಿಲ್ನಲ್ಲಿ ಚೀನಾ ಟರ್ಬಿಯಮ್ ಮತ್ತು ಡಿಸ್ಪ್ರೋಸಿಯಮ್ಂತಹ ರೇರ್ ಅರ್ಥ್ ಎಲಿಮೆಂಟ್ಗಳ ರಫ್ತಿನ ಮೇಲೆ ನಿರ್ಬಂಧ ಜಾರಿಗೊಳಿಸಿದೆ. ಇದರಿಂದಾಗಿ ದೇಶದ ಆಡಿಯೊ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ನೊಯ್ಡಾ ಮತ್ತು ದಕ್ಷಿಣ ಭಾರತದಲ್ಲಿ 21,000ಕ್ಕಿಂತ ಹೆಚ್ಚು ಉದ್ಯೋಗಗಳು ಅಪಾಯದಲ್ಲಿವೆ ಎಂದು ಅವರು ವಿವರಿಸಿದ್ದಾರೆ.