

ಶಿವಮೊಗ್ಗ: ಅಕ್ರಮ, ಸಕ್ರಮ, ಗಂಗಾ ಕಲ್ಯಾಣ, ಕುಡಿಯುವ ನೀರಿನ ಯೋಜನೆ, ರೀ ಕಂಡಕ್ಟರಿಂಗ್ ಲಿಂಕ್‌ಲೈನ್ ಹಾಗೂ ಮುರಿದಿರುವ ಕಂಬಗಳ ಕಾಮಗಾರಿಗಳನ್ನು ಕ್ರೋಡೀಕರಿಸಿ ಕರೆದಿರುವ ಬೃಹತ್ ಮೊತ್ತದ ದರ ಒಪ್ಪಂದ ಮತ್ತು ಟೆಂಡರ್‌ಗಳನ್ನು ಕೂಡಲೆ ರದ್ದುಪಡಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೆಸ್ಕಾಂನ ವಿದ್ಯುತ್ ಗುತ್ತಿಗೆದಾರರ ಸಂಘದ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಪದಾಧಿಕಾರಿಗಳು ಬುಧವಾರ ಹರಿಗೆಯ ವಿದ್ಯುತ್ ಭವನದ ಎದುರು ಧರಣಿ ನಡೆಸಿದರು.
ಒಂದು ಲಕ್ಷದಿಂದ 5 ಲಕ್ಷ ರೂ.ವರೆಗಿನ ಕಾಮಗಾರಿಗಳನ್ನು ಸ್ಥಳೀಯ ವಿದ್ಯುತ್ ಗುತ್ತಿಗೆದಾರರಿಗೆ ಎಸ್.ಆರ್.ದರದಲ್ಲಿ ನೇರವಾಗಿ ಪೂರ್ಣ ಅಥವಾ ಆಂಶಿಕ ಗುತ್ತಿಗೆ ನೀಡುವ ಆದೇಶವಿದ್ದರೂ ಸ್ಥಳೀಯ ಗುತ್ತಿಗೆದಾರರನ್ನು ಕಡೆಗಣಿಸಿ ಟೆಂಡರ್ ಕರೆಯಲಾಗಿದೆ. ಕಂಪನಿ ಹಾಗೂ ಗ್ರಾಹಕರ ನಡುವೆ ನಿಂತು ಕಂಪನಿಗೂ ನಷ್ಟವಾಗದಂತೆ ಹಾಗೂ ಕಾಲಕಾಲಕ್ಕೆ ಆಗುವ ಸರ್ಕಾರದ ಆದೇಶಗಳನ್ನು ಪಾಲಿಸಿಕೊಂಡು ಬರುತ್ತಿದ್ದರೂ ನಮ್ಮನ್ನು ನಿರ್ಲಕ್ಷೃ ಮಾಡಲಾಗಿದೆ ಎಂದು ಕಿಡಿಕಾರಿದರು.
ನೀರಾವರಿ ಪಂಪ್‌ಸೆಟ್‌ಗಳಿಗೆ ಸ್ವಯಂ ಆರ್ಥಿಕ ಯೋಜನೆಯಡಿಯಲ್ಲಿ ಮಾಡುವ ಕಾಮಗಾರಿಗಳ ವಿದ್ಯುತ್ ಮಂಜೂರಾತಿಗಳನ್ನು ವಿದ್ಯುತ್ ಜಾಲದಿಂದ 500 ಮೀಟರ್ ಒಳಗೆ ಮಿತಿಗೊಳಿಸಲಾಗುತ್ತಿದೆ. ಇದರಿಂದ 25 ಸಾವಿರ ರೂ. ಮೇಲ್ವಿಚಾರಣಾ ಶುಲ್ಕ, ಜಿಎಸ್‌ಟಿ ಮತ್ತು ಠೇವಣಿ ಸೇರಿ 40 ಸಾವಿರ ರೂ. ಆಗುವುದರಿಂದ ರೈತರಿಗೆ ಹೊರೆ ಆಗಲಿದೆ. ಹಾಗಾಗಿ ಮೇಲ್ವಿಚಾರಣಾ ಶುಲ್ಕವನ್ನು ತೆಗೆಯಬೇಕಿದೆ ಎಂದು ಒತ್ತಾಯಿಸಿದರು.
ಸಂಘದ ಶಿವಮೊಗ್ಗ ಜಿಲ್ಲಾಧ್ಯಕ್ಷ ಕೆ.ಮಹಾಲಿಂಗಪ್ಪ, ಕಾರ್ಯದರ್ಶಿ ಎನ್.ಕುಮಾರ್, ಉಪಾಧ್ಯಕ್ಷರಾದ ಎಂ.ಎನ್.ರುದ್ರಮುನಿ, ಶ್ರೀನಿವಾಸ್, ಎನ್.ವಿಜಯ್‌ಕುಮಾರ್, ಕೆ.ಸಿ.ಪ್ರಭಾಕರ್, ಶಶಿಕಾಂತ್, ಮಂಜುನಾಥ್, ಕೆ.ವ್ನಿೇಶ್ವರ್, ಎಸ್.ಕೆ.ಲೋಕೇಶ್, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಆರ್.ಹರೀಶ್, ಉಪಾಧ್ಯಕ್ಷರಾದ ಯು.ನರೇಶ್, ಕೆ.ಟಿ.ಪ್ರಸನ್ನ, ಪ್ರಧಾನ ಕಾರ್ಯದರ್ಶಿ ಮರಿಯಾರಾಜ್, ಸಹ ಕಾರ್ಯದರ್ಶಿ ಎಚ್.ಇ.ಹರೀಶ್‌ಕುಮಾರ್, ಸಂಘಟನಾ ಕಾರ್ಯದರ್ಶಿ ಕೆ.ಎಸ್.ಕಾಂತಕುಮಾರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.