ಶಾಲಾ ಆವರಣದಲ್ಲಿ ಊಟದ ವೇಳೆ ವಿದ್ಯಾರ್ಥಿಗಳ ಮೇಲೇ ಬಿದ್ದ ವಿದ್ಯುತ್ ಕಂಬ!; ಮೂವರಿಗೆ ಗಂಭೀರ ಗಾಯ..

Electric
Published on

ಕೋಲಾರ: ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ಊಟ ತಿನ್ನುತ್ತಿರುವಾಗಲೇ ವಿದ್ಯುತ್ ಕಂಬ ಬಿದ್ದು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ಘಟನೆ ನಡೆದಿದೆ. ಕೆಇಬಿ ಸಿಬ್ಬಂದಿ ಕಂಬಗಳನ್ನು ಬದಲಾವಣೆ ಮಾಡುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.

ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ಊಟ ಮಾಡುತ್ತಿದ್ದರು. ಅದೇ ಸಂದರ್ಭದಲ್ಲಿ ಕೆಇಬಿ ಸಿಬ್ಬಂದಿ ಮರದ ರೆಂಬೆ ಕಡಿದಿದ್ದು, ಅದು ತಂತಿಗಳ ಮೇಲೆ ಬಿದ್ದು ಎರಡು ವಿದ್ಯುತ್​ ಕಂಬಗಳು ನೆಲಕ್ಕೆ ಬಿದ್ದಿವೆ. ಈ ಘಟನೆಯಲ್ಲಿ ದಿನೇಶ್, ಭರತ್, ಚರಣ್ ಎಂಬ ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆ ಪೈಕಿ ಗಂಭೀರ ಗಾಯಗೊಂಡಿರುವ ದಿನೇಶ್​ನನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಭರತ್​ಗೆ ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ, ಚರಣ್​ಗೆ ಗೌನಿಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net