ನಾಳೆಯಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ

11klr3B- akram pasha
Published on

ಕೋಲಾರ: ಭಾರತ ಚುನಾವಣಾ ಆಯೋಗವು ಅರ್ಹತಾ ದಿನ 2025ರ ಜ.1ರಂತೆ ಭಾವಚಿತ್ರ ಸಹಿತ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಆ.20ರಿಂದ ಅಕ್ಟೋಬರ್​ 18ರವರೆಗೆ ಅವಕಾಶ ಕಲ್ಪಿಸಿದ್ದು, ಹೆಸರು ನೋಂದಣಿ, ಮೃತ ಮತ್ತು ಸ್ಥಳಾಂತರಗೊಂಡ ಮತದಾರರ ಹೆಸರು ಸೇರ್ಪಡೆ ಮತ್ತು ತೆಗೆದು ಹಾಕುವಿಕೆಗೆ ಅರ್ಹತಾ ದಿನಕ್ಕೆ 18 ವರ್ಷ ತುಂಬುವ ಯುವ ಮತದಾರರು ಹೆಸರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ತಿಳಿಸಿದ್ದಾರೆ.

ಪೂರ್ವ ಪರಿಷ್ಕರಣೆ ಚಟುವಟಿಕೆಗಳ ಸಮಯದಲ್ಲಿ ಕೋಲಾರ ಜಿಲ್ಲೆಯ ಎಲ್ಲ ಮತಗಟ್ಟೆ ಮಟ್ಟದ ಅಧಿಕಾರಿಗಳು ಪ್ರತಿ ಮನೆಗೂ ಭೇಟಿ ನೀಡಿ ಪರಿಶೀಲನೆ ಕೈಗೊಳ್ಳುತ್ತಾರೆ. ಈ ಸಮಯದಲ್ಲಿ ಜಿಲ್ಲೆಯ ಸಾರ್ವಜನಿಕರು ಯಾವುದೇ ರೀತಿಯ ತಿದ್ದುಪಡಿ ಮತ್ತು ಹೆಸರು ನೋಂದಣಿ, ಸೇರ್ಪಡೆ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಹಕ್ಕು ಮತ್ತು ಆಕ್ಷೇಪಣೆೆಗಳ ಅವಧಿಯಲ್ಲಿ ವಿಶೇಷ ಅಭಿಯಾನ ದಿನಾಂಕ ನಿಗದಿಪಡಿಸಲಾಗಿದೆ. ಸಾರ್ವಜನಿಕರು ವಿಶೇಷ ಅಭಿಯಾನಗಳ ಸೌಲಭ್ಯ ಬಳಸಿಕೊಳ್ಳುವಂತೆ ಹಾಗೂ ಅವಶ್ಯವಿರುವ ತಿದ್ದುಪಡಿ, ಸೇರ್ಪಡೆ ಹಾಗೂ ತೆಗೆದುಹಾಕುವಿಕೆಗಳಿಗೆ ಅರ್ಜಿ ಸಲ್ಲಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಡಿಸಿ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಸಾರ್ವಜನಿಕರು ಅರ್ಜಿ ನಮೂನೆ&6 ಮತ್ತು 8ಅನ್ನು ಸಲ್ಲಿಸುವಾಗ ಸ್ವಯಂ ಪ್ರೇರಿತವಾಗಿ ಆಧಾರ್​ ಸಂಖ್ಯೆಗಳನ್ನು ಒದಗಿಸಬೇಕು. ಎಲ್ಲ ಚುಣಾವಣಾ ಸಂಬಂಧಿತ ಸೇವೆಗಳಿಗಾಗಿ ಸಾರ್ವಜನಿಕರು ಮೊಬೈಲ್​ನಲ್ಲಿ ವೋಟರ್​ ಹೆಲ್ಪ್​ಲೈನ್​ ಅಪ್ಲಿಕೇಷನ್​ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

ಆ.20 ಮಂಗಳವಾರದಿಂದ ಅಕ್ಟೋಬರ್​ 18 ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ ಮನೆ ಮನೆ ಭೇಟಿ ಮತ್ತು ಪರಿಶೀಲನೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಮತಗಟ್ಟೆಗಳ ತರ್ಕಬದ್ಧಗೊಳಿಸುವಿಕೆ ಮತ್ತು ಮರು ಹೊಂದಾಣಿಕೆ ಸೇರಿ ಮತದಾರರ ಪಟ್ಟಿ ಮತ್ತು ಮತದಾರರ ಗುರುತಿನ ಚೀಟಿಗಳಲ್ಲಿನ ಲೋಪದೋಷಗಳನ್ನು ತೆಗೆದುಹಾಕುವುದು, ಅಗತ್ಯವಿರುವ ಕಡೆ ಮತದಾರರ ಪಟ್ಟಿಯಲ್ಲಿನ ಗುಣಮಟ್ಟವಿಲ್ಲದ ಭಾವಚಿತ್ರಗಳನ್ನು ಬದಲಾಯಿಸಿ ಉತ್ತಮ ಗುಣಮಟ್ಟದ ಭಾವಚಿತ್ರಗಳನ್ನು ಖಾತ್ರಿಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ವಿಭಾಗ ಮತ್ತು ಭಾಗಗಳ ಮರುಹೊಂದಾಣಿಕೆ ಹಾಗೂ ಪ್ರಸ್ತಾಪಿತ ವಿಭಾಗ ಮತ್ತು ಭಾಗಗಳ ಮತಗಟ್ಟೆಗಳ ಸ್ಥಳ ಅಂತಿಮಗೊಳಿಸುವಿಕೆ, ಮತಗಟ್ಟೆಗಳ ಪಟ್ಟಿಗಳಿಗೆ ಅನುಮೋದನೆ ಪಡೆದುಕೊಳ್ಳುವುದು. ನ್ಯೂನತೆಗಳ ಗುರುತಿಸುವಿಕೆ ಮತ್ತು ಅಂತಹ ನ್ಯೂನತೆಗಳನ್ನು ನಿವಾರಿಸಲು ಕಾರ್ಯತಂತ್ರ ಮತ್ತು ಕಾಲಾವಧಿಯನ್ನು ಅಂತಿಮಗೊಳಿಸುವುದು, ನಿಯಂತ್ರಣ ಕೋಷ್ಟಕದ ನವೀಕರಣ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net