

ಬೆಂಗಳೂರು: ಬಜೆಟ್ ಅಧಿವೇಶನದ ಬಳಿಕ ಮತ್ತೆರಡು ಮಿನಿ ಮಹಾಸಮರಕ್ಕೆ ರಾಜ್ಯ ಅಣಿಯಾಗುವ ಲಕ್ಷಣ ಗೋಚರಿಸಿದೆ. ಸರ್ಕಾರದ ಜತೆಗೆ ರಾಜಕೀಯ ಪಕ್ಷಗಳೂ ಚುನಾವಣೆ ಗುಂಗಿನಲ್ಲಿದ್ದು, ವಿಧಾನಸಭಾ ಚುನಾವಣೆಗೆ ಮೊದಲು ಎರಡು ಸೆಮಿಫೈನಲ್ನಂತೆ ತಾಪಂ, ಜಿಪಂ ಹಾಗೂ ಬಿಬಿಎಂಪಿ ಮತ ಸಮರ ಏರ್ಪಡಲಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಂತೂ ಪಕ್ಷದೊಳಗಿನ ಅನಪೇಕ್ಷಿತ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಇದೇ ಸೂಕ್ತ ಮಾರ್ಗವೆಂದು ನಂಬಿದ್ದಾರೆ. ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಈ ಬಾರಿಯದು ‘ಚುನಾವಣಾ ವರ್ಷದ ಮುಂಗಡಪತ್ರ’ವೆಂದು ಹೇಳುವ ಮೂಲಕ ಬೊಮ್ಮಾಯಿ ಅವರೇ ಸೂಕ್ಷ್ಮ ಸುಳಿವು ಬಿಟ್ಟುಕೊಟ್ಟಿದ್ದಾರೆ. ಬಜೆಟ್ ಮಂಡನೆ, ಅಂಗೀಕಾರ ಪ್ರಕ್ರಿಯೆ ಗಳು ಮುಗಿಯುತ್ತಿದ್ದಂತೆ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗೆ ಹೋಗಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದು ಇದಕ್ಕೆ ಪಕ್ಷದ ರಾಜ್ಯ ನಾಯಕರು ತಥಾಸ್ತು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಾ.ಪಂ., ಜಿ.ಪಂ., ಬಿಬಿಎಂಪಿ ಚುನಾವಣೆ ಬಳಿಕ 2023ರ ವಿಧಾನಸಭೆ ಚುನಾವಣೆಗೆ ತಯಾರಾಗಲು 6 ತಿಂಗಳು ಕಾಲಾವಕಾಶ ಸಿಗಲಿದೆ.
ಲಭ್ಯ ಅವಧಿಯ ಪ್ರಯೋಜನ ಪಡೆದು ತಾ.ಪಂ., ಜಿ.ಪಂ., ಬಿಬಿಎಂಪಿ ಚುನಾವಣೆಯಲ್ಲಿ ಕಂಡು ಬರುಬಹುದಾದ ಲೋಪ-ದೋಷ ತಿದ್ದಿಕೊಂಡು, ಪಕ್ಷದ ಪರ ವಾತಾವರಣ ಸೃಷ್ಟಿಸಿಕೊಳ್ಳಬಹುದು ಎನ್ನುವುದು ಕಮಲಪಡೆ ಲೆಕ್ಕಾಚಾರವಾಗಿದೆ. ವಿಧಾನಸಭೆ ಉಪಚುನಾವಣೆ, ವಿಧಾನ ಪರಿಷತ್, ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ಇತ್ತೀಚಿನ ಚುನಾವಣೆಯಲ್ಲಿ ಪಕ್ಷಕ್ಕೆ ನಿರೀಕ್ಷಿಸಿದಷ್ಟು ಸ್ಥಾನ ಗಳಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಪಾಲಿಗೆ ಮೂರು ಚುನಾವಣೆಗಳು ಸೆಮಿಫೈನಲ್ ಪಂದ್ಯ ಎಂದೇ ಪಕ್ಷದೊಳಗೆ ಬಿಂಬಿತವಾಗಿದೆ ಎಂದು ಮೂಲಗಳು ತಿಳಿಸಿವೆ.
ಅವಧಿ ಅಂತ್ಯ?: ತಾಲೂಕು, ಜಿಲ್ಲಾ ಪಂಚಾಯಿತಿ ಮಂಡಳಿ ಅಧಿಕಾರಾವಧಿ 2021ರ ಮೇ/ಜೂನ್ನಲ್ಲಿ ಮುಕ್ತಾಯವಾಗಲಿದೆ
ಸೀಮಾ ಆಯೋಗಕ್ಕೆ ಸಲಹೆ?: ತಾಲೂಕು, ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪುನರ್ವಿಂಗಡಣೆ ರಚಿತ ಐಎಎಸ್ ನಿವೃತ್ತ ಅಧಿಕಾರಿ ಎಸ್. ಲಕ್ಷ್ಮೀನಾರಾಯಣ ನೇತೃತ್ವದ ಸೀಮಾ ನಿರ್ಣಯ ಆಯೋಗ ಮಾರ್ಚ್ ಅಂತ್ಯಕ್ಕೆ ವರದಿ ನೀಡುವ ಚಿಂತನೆಯಲ್ಲಿದೆ. ಕಮಲಪಡೆ ನಾಯಕರು ಮಾರ್ಚ್ ಒಳಗೆ ಚುನಾವಣೆ ಪೂರ್ಣಗೊಳಿಸುವ ಉತ್ಸಾಹದಲ್ಲಿದ್ದಾರೆ. ಈ ಕಾರಣಕ್ಕೆ ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಮೊದಲ ವಾರದೊಳಗೆ ವರದಿ ಸಲ್ಲಿಸಬೇಕೆಂದು ಆಯೋಗಕ್ಕೆ ಸರ್ಕಾರದ ಮುಖೇನ ಫರ್ವನು ಹೊರಡಿಸುವ ಸಾಧ್ಯತೆಗಳಿವೆ.
ಪಕ್ಷಗಳಲ್ಲಿ ಸಿದ್ಧತೆ: ಯಾವುದೇ ಕ್ಷಣದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಬಹುದೆಂಬ ಸುಳಿವು ಇರುವುದರಿಂದಲೇ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಸಹ ಸಿದ್ಧತೆ ನಡೆಸಿವೆ. ನಗರ ಘಟಕ ಹಾಗೂ ಎಲ್ಲ ಜಿಲ್ಲಾ ಮಟ್ಟದಲ್ಲಿ ಸಂಘಟನೆಗೆ ಪಕ್ಷಗಳು ಒತ್ತು ನೀಡಿವೆ. ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಈ ಚುನಾವಣೆಗಳು ಎಲ್ಲ ಪಕ್ಷಗಳ ಪಾಲಿಗೂ ಅತ್ಯಂತ ಮಹತ್ವವಾಗಿವೆ.
ಈ ಹಿಂದೆ ಜಿಪಂ, ತಾಪಂ ಚುನಾವಣೆ ನಿಗದಿ ಮಾಡಿದ್ದ ಮೀಸಲಾತಿಗೆ ಆಕ್ಷೇಪ ವ್ಯಕ್ತಪಡಿಸಿ 780ಕ್ಕೂ ಅಧಿಕ ತಕರಾರು ಅರ್ಜಿ ಬಂದಿದ್ದು , ಈ ಬಗ್ಗೆ ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ ನೇತೃತ್ವದ ಸಮಿತಿ ರಚಿಸಲಾಗಿದೆ. ಈ ಸಮಿತಿ ಎಲ್ಲ ಜಿಲ್ಲೆಗಳಿಂದ ಕ್ಷೇತ್ರ ವಿಂಗಡಣೆ ವರದಿ ಪಡೆದು ಕೊಳ್ಳುತ್ತಿದೆ. ವರದಿ ಸಲ್ಲಿಕೆ ಬಳಿಕ ಮೀಸಲು ನಿಗದಿಪಡಿಸಿ ಚುನಾವಣೆ ನಡೆಸುವ ಕುರಿತು ಚುನಾವಣಾ ಆಯೋಗ ನಿರ್ಧಾರ ಕೈಗೊಳ್ಳಲಿದೆ. | ಕೆ.ಎಸ್.ಈಶ್ವರಪ್ಪ ಗ್ರಾಮೀಣಾಭಿವೃದ್ಧಿ,ಪಂಚಾಯತ್ ರಾಜ್ ಸಚಿವ
ಪಕ್ಷದ ಅಧಿಕೃತ ತಯಾರಿ, ಹಲವು ನಾಯಕರ ಪ್ರಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಮೊದಲು ಚುನಾವಣೆ ನಡೆಯುತ್ತದೆ ಎಂದೇ ಭಾವಿಸಲಾಗಿತ್ತು. ವರಿಷ್ಠರ ಕಾರ್ಯತಂತ್ರ, ರಾಜ್ಯ ನಾಯಕರ ಆಂತರಿಕ ಚರ್ಚೆಯು ರಣಕಹಳೆ ಮೊಳಗಿಸುವತ್ತ ಗಮನ ನೆಟ್ಟಿದ್ದರೂ ಸರ್ಕಾರ ಮೊದಲಿಗೆ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗೆ ಪ್ರಾಶಸ್ಱ ನೀಡಲು ಯೋಚಿಸಿದೆ. ಆ ಮೂಲಕ ಗ್ರಾಮೀಣ ಭಾಗದಲ್ಲಿ ಪಕ್ಷವನ್ನು ಬಲವಾಗಿ ಬೇರೂರಿಸುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಬಜೆಟ್ ಬಳಿಕ ಮಾರ್ಚ್ನಲ್ಲಿ ತಾ.ಪಂ., ಜಿ.ಪಂ.ಗೆ ಚುನಾವಣೆ ನಡೆಸುವುದು. ಇದಾದ ಬಳಿಕ ಏಪ್ರಿಲ್ ಕೊನೆಯ ಅಥವಾ ಮೇ ಮೊದಲ ವಾರದಲ್ಲಿ ಬಿಬಿಎಂಪಿ ಚುನಾವಣೆ ನಡೆಸಬೇಕೆಂಬ ಇರಾದೆ ಹೊಂದಿದೆ. ಸುಪ್ರೀಂಕೋರ್ಟ್ ಅಂಗಳದಲ್ಲಿರುವ ಬಿಬಿಎಂಪಿ ವ್ಯಾಜ್ಯ ಮಾರ್ಚ್ನಲ್ಲಿ ವಿಚಾರಣೆಗೆ ಬರಲಿದೆ. ಅದಕ್ಕೂ ಮುನ್ನ 243 ವಾರ್ಡ್ಗಳಿಗೆ ಚುನಾವಣೆ ನಡೆಸಲು ಸಿದ್ಧವೆಂದು ಅಫಿಡವಿಟ್ ಸಲ್ಲಿಸಲು ಸರ್ಕಾರ ಯೋಚಿಸಿದೆ.