ಗದ್ದಲದ ನಡುವೆ ಸ್ಥಾಯಿಸಮಿತಿಗೆ ಆಯ್ಕೆ

sgr (4)
ಸಾಗರ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಮೈತ್ರಿ ಪಾಟೀಲ್, ಶಾಸಕ ಗೋಪಾಲಕೃಷ್ಣ ಬೇಳೂರು, ಉಪಾಧ್ಯಕ್ಷೆ ಸವಿತಾ ವಾಸು, ಪೌರಾಯುಕ್ತ ನಾಗಪ್ಪ ಇದ್ದರು.
Published on

ಸಾಗರ: ನಗರಸಭೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತ ಬಿಜೆಪಿ ಸದಸ್ಯರು ಮತ್ತು ವಿಪಕ್ಷ ಕಾಂಗ್ರೆಸ್ ಸದಸ್ಯರ ಗೌಜು ಗದ್ದಲದ ನಡುವೆ ಸ್ಥಾಯಿ ಸಮಿತಿ ಸದಸ್ಯರ ಹೆಸರನ್ನು ಘೋಷಿಸಲಾಯಿತು.

ವಿಪಕ್ಷ ಕಾಂಗ್ರೆಸ್ ಸದಸ್ಯರು ನಮಗೇ ಬಹುಮತ ಇದೆ. ನಾವು ಘೋಷಿಸುವ ಸ್ಥಾಯಿ ಸಮಿತಿಯನ್ನು ಅಂತಿಮಗೊಳಿಸಿ ಎಂದು ಪಟ್ಟುಹಿಡಿದರು. ಇದರಿಂದ ಕೆಲಕಾಲ ಗೊಂದಲ ವಾತಾವರಣ ನಿರ್ಮಾಣವಾಗಿತ್ತು.

ಬಿಜೆಪಿ ಸದಸ್ಯ ಟಿ.ಡಿ.ಮೇಘರಾಜ್ ಮಾತನಾಡಿ, ಕಾನೂನು ಪ್ರಕಾರವಾಗಿ ಸ್ಥಾಯಿ ಸಮಿತಿ ಸದಸ್ಯರನ್ನು ನೇಮಕ ಮಾಡುವಂತೆ ಮನವಿ ಮಾಡಿದರು. ಬಿಜೆಪಿ ಸದಸ್ಯ ಕೆ.ಆರ್.ಗಣೇಶ್‌ಪ್ರಸಾದ್ ಆಡಳಿತ ಮತ್ತು ವಿಪಕ್ಷ ಸದಸ್ಯರನ್ನು ಒಳಗೊಂಡ 11 ಸದಸ್ಯರ ಹೆಸರನ್ನು ಸೂಚಿಸಿದರು. ಆಗ ಅಧ್ಯಕ್ಷೆ ಮೈತ್ರಿ ಪಾಟೀಲ್ ಹೆಸರನ್ನು ಘೋಷಿಸಿದರು. ಇದಕ್ಕೆ ವಿಪಕ್ಷ ಸದಸ್ಯರಾದ ಗಣಪತಿ ಮಂಡಗಳಲೆ, ಮಧುಮಾಲತಿ, ಸೈಯದ್ ಜಾಕೀರ್, ತಸ್ರ್ೀ, ರವಿಕುಮಾರ್ ಇನ್ನಿತರರು ತೀವ್ರ ವಿರೋಧ ವ್ಯಕ್ತಪಡಿಸಿ, ಬಹುಮತದ ಮೂಲಕ ಆಯ್ಕೆ ನಡೆಸಿ ಎಂದು ಒತ್ತಾಯಿಸಿದರು.

ಅಧ್ಯಕ್ಷೆ ಮೈತ್ರಿ ಪಾಟೀಲ್ ಸಭೆಯಲ್ಲಿ ಬಹುಮತದ ತೀರ್ಮಾನದಂತೆ ಸ್ಥಾಯಿ ಸಮಿತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿಪಕ್ಷ ಸದಸ್ಯರು ಹೆಸರು ಘೋಷಣೆಗೆ ಅಡ್ಡಿಪಡಿಸಿದರು. ಆದರೂ ಅಧ್ಯಕ್ಷೆ ಹೆಸರು ಘೋಷಿಸಿ ಸಭೆಯಿಂದ ಹೊರನಡೆದರು. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್‌ನ ಸದಸ್ಯರು ನಗರಸಭೆ ಆಡಳಿತದ ವಿರುದ್ಧ ಧಿಕ್ಕಾರ ಕೂಗಿದರು. ಸದಸ್ಯರ ಅಭಿಪ್ರಾಯ ಕೇಳದೆ ಅಧ್ಯಕ್ಷರು ಹೊರನಡೆದರು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಕೂಡ ಆಕ್ರೋಶ ವ್ಯಕ್ತಪಡಿಸಿದರು.

ಪೌರಾಯುಕ್ತ ಎಚ್.ಕೆ.ನಾಗಪ್ಪ ಅವರನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಸದಸ್ಯರು, ಆಯ್ಕೆ ಮಾಡಿರುವುದು ಕಾನೂನು ಬದ್ಧವಾಗಿಲ್ಲ. ಸಭೆಯಲ್ಲಿ ಅವರಿಗೆ ಬಹುಮತ ಇಲ್ಲ. ಸಭೆಯನ್ನು ಅಸಿಂಧುಗೊಳಿಸಿ, ಘೋಷಿತ ಹೆಸರುಗಳನ್ನು ಮಾನ್ಯ ಮಾಡಬಾರದು ಎಂದು ಪೌರಾಯುಕ್ತರಿಗೆ ಆಗ್ರಹಿಸಿದರು.

ಪೌರಾಯುಕ್ತ ಎಚ್.ಕೆ.ನಾಗಪ್ಪ ಮಾತನಾಡಿ, ಸ್ಥಾಯಿ ಸಮಿತಿ ಸದಸ್ಯರ ಹೆಸರು ಘೋಷಿಸುವುದು ಅಧ್ಯಕ್ಷರ ಪರಮಾಧಿಕಾರ. ಇದಕ್ಕೆ ನಾನು ಆಕ್ಷೇಪಣೆ ವ್ಯಕ್ತಪಡಿಸಲು ಬರುವುದಿಲ್ಲ. ಈ ಮೊದಲು ಕಾನೂನಿನ ಬಗ್ಗೆ ಅವರಿಗೆ ತಿಳಿಸಿದ್ದೇನೆ. ನೀವು ಅಧ್ಯಕ್ಷರ ನಿರ್ಣಯಕ್ಕೆ ಆಕ್ಷೇಪಣೆ ಸಲ್ಲಿಸಿದರೆ ನಾನು ಅದನ್ನು ಜಿಲ್ಲಾಧಿಕಾರಿಗೆ ಕಳುಹಿಸುತ್ತೇನೆ ಎಂದು ಸ್ಪಷ್ಟನೆ ನೀಡಿದರು.

ರೂಲಿಂಗ್ ನೀಡಿ ನಾವು ಹೊರಬಂದ ನಂತರ ಸಭೆ ಮುಕ್ತಾಯವಾಗಿದೆ. ಸಭೆ ಮುಕ್ತಾಯವಾದರೂ ವಿಪಕ್ಷದವರು ಮತ್ತೆ ಸಭೆ ನಡೆಸಿರುವುದು ಎಷ್ಟು ಸರಿ? ನಿಯಮಾನುಸಾರ ಆಡಳಿತ ನಡೆಸಲು ಬಿಡುತ್ತಿಲ್ಲ. ಆಯುಕ್ತರು, ಅಧಿಕಾರಿಗಳನ್ನು ಬೆದರಿಸಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮಹಿಳಾ ಅಧ್ಯಕ್ಷ- ಉಪಾಧ್ಯಕ್ಷರು ಅಧಿಕಾರ ನಡೆಸುತ್ತಿರುವ ಸಂದರ್ಭದಲ್ಲಿ ಇಂತಹ ದಬ್ಬಾಳಿಕೆ ನಡೆಸುತ್ತಿರುವುದು ಕಾಂಗ್ರೆಸ್ ಮಹಿಳಾ ವಿರೋಧಿ ಧೋರಣೆಗೆ ಸಾಕ್ಷಿ ಎಂದು ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಖಂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net