

ಅಹಮಾದಾಬಾದ್: ಇವಿಎಂ ತಿರುಚಿದ್ದಾರೆ ಎಂದು ಆರೋಪಿಸಿ ಗುಜರಾತಿನ ಕಾಂಗ್ರೆಸ್ ಅಭ್ಯರ್ಥಿಯೊಬ್ಬ ಶಾಲಿನಿಂದ ಕುತ್ತಿಗೆ ಬಿಗಿದುಕೊಂಡು ಪ್ರತಿಭಟಿಸಿದ್ದಾರೆ. ಮತಎಣಿಕೆಯ ಮಧ್ಯೆಯೇ ಈ ಹೈಡ್ರಾಮ ಸೃಷ್ಟಿಸುವ ಮೂಲಕ ಕೆಲ ಕಾಲ ಮತಎಣಿಕೆ ಕೇಂದ್ರದಲ್ಲಿ ಗೊಂದಲದ ವಾತವರಣವನ್ನು ನಿರ್ಮಿಸಿದರು.
ಗಾಂಧಿಧಾಮ್ ಅಭ್ಯರ್ಥಿ ವೆಲ್ಜಿಭಾಯ್ ಸೊಲಂಕಿ ಎಂಬುವರಿಂದ ಈ ಹೈಡ್ರಾಮ ನಡೆದಿದೆ. ಬಿಜೆಪಿ ಅಭ್ಯರ್ಥಿ ಮಾಲ್ತಿ ಕಿಶೋರ್ ಮಹೇಶ್ವರಿ ಎದುರು 12 ಸಾವಿರ ಮತಗಳ ಅಂತರದಲ್ಲಿ ಸೋಲಂಕಿ ಅವರು ಹಿನ್ನಡೆ ಅನುಭವಿಸಿದ್ದಾರೆ. ಕೆಲವೊಂದು ಇವಿಎಂಗಳನ್ನು ಸರಿಯಾಗಿ ಸೀಲ್ ಮಾಡಿರಲಿಲ್ಲ ಎಂದು ಸೋಲಂಕಿ ಆರೋಪ ಮಾಡಿದ್ದಾರೆ.
ತುಂಬಾ ಅಸಮಾಧಾನಗೊಂಡಂತೆ ಕಾಣುವ ಸೋಲಂಕಿ, ಇವಿಎಂ ತಿರುಚಲಾಗಿದೆ ಎಂದು ಆರೋಪಿಸಿ, ಶಾಲಿನಿಂದ ಕುತ್ತಿಗೆ ಬಿಗಿದುಕೊಂಡು ಧರಣಿ ಮಾಡಿದರು. ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಿದರೂ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಆರೋಪ ಮಾಡಿದರು. ಸೋಲಂಕಿ ಅವರ ಪ್ರತಿಭಟನೆಯಿಂದ ಕೆಲ ಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಯಿತು.
ಮತ ಎಣಿಕೆಯ ಸದ್ಯದ ಟ್ರೆಂಡ್ ಪ್ರಕಾರ ಗುಜರಾತ್ನಲ್ಲಿ ಆಡಳಿತಾರೂಢ ಬಿಜೆಪಿ 158 ಸ್ಥಾನಗಳಲ್ಲಿ ಮುಂದಿದ್ದರೆ, ಕಾಂಗ್ರೆಸ್ 16, ಎಎಪಿ 5 ಮತ್ತು ಇತರೆ 3 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸಿದೆ. ಒಟ್ಟು 182 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಗುಜರಾತ್ನಲ್ಲಿ ಅಧಿಕಾರ ರಚನೆಗೆ 92 ಮ್ಯಾಜಿಕ್ ನಂಬರ್ ಬೇಕಿದೆ. ಆದರೆ, ಬಿಜೆಪಿ ಈಗಾಗಲೇ ಮ್ಯಾಜಿಕ್ ನಂಬರ್ ದಾಟಿ ಮುಂದೆ ಸಾಗಿದ್ದು, ಅಧಿಕಾರ ಹಿಡಿಯುವುದು ಖಚಿತವಾಗಿದೆ. (ಏಜೆನ್ಸೀಸ್)