

ಕೋಲಾರ: ಎಲ್ಲರೂ ಒಮ್ಮತದಿಂದ ತೀರ್ಮಾನಿಸಿಯೇ ಕೋಲಾರ ನಗರಸಭೆಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಮಾಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರಸಭೆ ಸದಸ್ಯ ಮುಬಾರಕ್‌ನನ್ನು ಈಗಾಗಲೇ ಕಾಂಗ್ರೆಸ್‌ನಿಂದ ಉಚ್ಚಾಟನೆ ಮಾಡಲಾಗಿದ್ದು, ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ ಎಂದರು.
ಮುಬಾರಕ್ ಕಾಂಗ್ರೆಸ್ ಚಿಹ್ನೆಯಡಿ ನಗರಸಭೆ ಸದಸ್ಯರಾಗಿ ಗೆದಿದ್ದಾರೆ. ಆದ್ದರಿಂದಲೇ ವಿಪ್ ಜಾರಿ ಮಾಡಲಾಗಿದೆ. ಪ್ರಚಾರ ಸಮಿತಿ ಸದಸ್ಯರನ್ನಾಗಿ ಮಾಡಿದ್ದೆವು. ಆದರೆ, ವಿಧಾನಸಭೆ ಚುನಾವಣೆಗೆ ವಾರ ಇದ್ದಾಗ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾಗಿ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಆದ್ದರಿಂದ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಜೆಡಿಎಸ್ ಸೇರಿದ್ದರೂ ಅಲ್ಲಿಯೂ ಮೋಸ ಮಾಡಿದ್ದಾರೆ ಎಂದ ಅವರು, ಎಸ್‌ಡಿಪಿಐ, ಜೆಡಿಎಸ್, ಪಕ್ಷೇತರು, ಬಿಜೆಪಿಯಿಂದ ಗೆದ್ದವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದರೆ ಇದಕ್ಕೆಲ್ಲ ಅಭಿವೃದ್ಧಿ ಕೆಲಸಗಳೇ ಕಾರಣ ಎಂದರು.
*60 ಕೋಟಿ ಅನುದಾನವನ್ನು ಕೋಲಾರಕ್ಕೆ ತಂದಿದ್ದು, ಯುಜಿಡಿ, ಸ್ಟ್ರಾರ್ ವಾಟರ್ ರೇಸ್, ಪಾರ್ಕ್, ಹಳೇ ಬಸ್ ನಿಲ್ದಾಣ ನವೀಕರಣಕ್ಕೆ ವೆಚ್ಚ ಮಾಡಲಾಗುತ್ತಿದೆ. ಜತೆಗೆ ಎಂಎಲ್ಸಿ ನಜೀರ್ ಅಹಮದ್ ಹಾಗೂ ಶಾಸಕ ಕೊತ್ತೂರು ಮಂಜುನಾಥ್ ಅವರು ತಲಾ 5 ಕೋಟಿ ರೂ. ಅನುದಾನ ನೀಡಿದ್ದಾರೆ, ಇದೆಲ್ಲ ಜನತೆ, ಸದಸ್ಯರ ಗಮನಕ್ಕಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ, ಪಕ್ಷದವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಅಭಿವೃದ್ಧಿಗೆ ಸಂಪೂರ್ಣ ಸಹಕಾರ ಸಿಗುತ್ತದೆ ಎಂಬ ವಿಶ್ವಾಸದಿಂದಿದ್ದೇವೆ ಎಂದರು.