ಚುನಾವಣಾ ಗಿಫ್ಟ್ ಬಜೆಟ್: ಕರೊನೋತ್ತರ ಬದುಕಿಗೆ ಉತ್ತೇಜನ; ಆರ್ಥಿಕತೆಗೂ ಟಾನಿಕ್

Nirmala
Published on

ಮಹಾಮಾರಿ ಕೋವಿಡ್-19 ಸಂಕಷ್ಟದ ಹೊಡೆತದಿಂದ ದೇಶದ ಅರ್ಥವ್ಯವಸ್ಥೆ ಚೇತರಿಸಿಕೊಳ್ಳುತ್ತಿರುವಾಗಲೇ ಕೇಂದ್ರ ಬಜೆಟ್-2022 ಎದುರಾಗಿರುವುದು ಸಹಜವಾಗಿಯೇ ನಿರೀಕ್ಷೆಗಳನ್ನು ಇಮ್ಮಡಿಗೊಳಿಸಿದೆ. ಉತ್ತರ ಪ್ರದೇಶ ಒಳಗೊಂಡಂತೆ ಪಂಚರಾಜ್ಯ ಚುನಾವಣೆ, 2024ರ ಲೋಕಸಭೆ ಸಮರಕ್ಕೂ ಮುಂಚಿನ ಪೂರ್ಣಪ್ರಮಾಣದ ಬಜೆಟ್ ಇದಾಗಿರುವುದರಿಂದ ಮಂಗಳವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್​ನಲ್ಲಿ ಮಂಡಿಸಲಿರುವ ಬಜೆಟ್​ನಲ್ಲಿ ಜನಪರ ಘೋಷಣೆಗಳ ಮಹಾಪೂರವೇ ಹರಿಯುವ ನಿರೀಕ್ಷೆ ಇದೆ. ಇನ್ನು 2023ರಲ್ಲಿ ಜಿಡಿಪಿ ದರವನ್ನು ಶೇ.8-8.5ರಲ್ಲಿ ಕಾಯ್ದುಕೊಳ್ಳುವುದಕ್ಕೆ ದಾರಿ ಯಾವುದೆಂಬ ಕುತೂಹಲವೂ ಇಮ್ಮಡಿಗೊಂಡಿದೆ. ಈ ಎಲ್ಲ ಮಾಹಿತಿ ಜತೆ ಜತೆಯಲ್ಲೇ ಬಜೆಟ್​ನ ನಿರೀಕ್ಷೆ, ಸಾಧ್ಯಾಸಾಧ್ಯತೆಗಳ ಸಂಕ್ಷಿಪ್ತ ಅವಲೋಕನ ಇಲ್ಲಿದೆ.

ಜಾರಿ ಸಾಧ್ಯತೆಗಳು

  • ಆರೋಗ್ಯ ವಿಮೆಗೆ ನೀಡಿರುವ ತೆರಿಗೆ ವಿನಾಯಿತಿ ಇನ್ನಷ್ಟು ಹೆಚ್ಚಳ, ಮಕ್ಕಳ ಶಿಕ್ಷಣಕ್ಕಾಗಿ ಪಾಲಕರು ಮಾಡುವ ಉಳಿತಾಯಕ್ಕೆ ವಿನಾಯಿತಿ
  • ಪ್ರತಿವರ್ಷದಂತೆ ಈ ವರ್ಷವೂ ವೈಯಕ್ತಿಕ ಹಣಕಾಸು ಪ್ರಯೋಜನಗಳು, ತೆರಿಗೆ ವಿನಾಯಿತಿ
  • ತೆರಿಗೆ ವಿನಾಯಿತಿಯ ಆದಾಯ ಮಿತಿ 2.5 ಲಕ್ಷ ರೂಪಾಯಿಯಿಂದ 3 ಲಕ್ಷ ರೂಪಾಯಿಗೆ ಏರಿಕೆ, ಹಿರಿಯ ನಾಗರಿಕರಿಗೆ 3.5 ಲಕ್ಷ ರೂ.ಗೆ ಏರಿಕೆ
  • ಗರಿಷ್ಠ ತೆರಿಗೆಯ ಆದಾಯ ಸ್ಥರ 10 ಲಕ್ಷ ರೂ.ನಿಂದ 15 ಲಕ್ಷ ರೂ.ಗೆ ಹೆಚ್ಚಳ
  • ನಗದು ರಹಿತ ಅರ್ಥವ್ಯವಸ್ಥೆ ಉತ್ತೇಜಿಸಲು ಫಿನ್​ಟೆಕ್ ಕ್ಷೇತ್ರಕ್ಕೆ ಇನ್​ಸೆಂಟಿವ್ಸ್, ಪ್ರಯೋಜನಗಳು
  • ಉತ್ಪಾದನಾ ವಲಯದಲ್ಲಿ ಪ್ರೊಡಕ್ಷನ್ ಲಿಂಕ್ಡ್ ಇನ್​ಸೆಂಟಿವ್ಸ್ ಯೋಜನೆಯಲ್ಲಿ ಹೆಚ್ಚುವರಿ ಕೊಡುಗೆಗಳ ನಿರೀಕ್ಷೆ , ಆರೋಗ್ಯ, ಕೃಷಿ, ಶಿಕ್ಷಣ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆ, ಹೊಸ ಹೊಸ ಉಪಕ್ರಮಗಳು, ಮೂಲಸೌಕರ್ಯ ವೃದ್ಧಿಗೆ ಕ್ರಮ
  • ಕೃಷಿಕರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ರಸಗೊಬ್ಬರ ಸಬ್ಸಿಡಿ ಇನ್ನಷ್ಟು ಹೆಚ್ಚಳ, ಕೃಷಿ ನವೋದ್ಯಮಗಳಿಗೆ ಉತ್ತೇಜನ
  • ಪ್ರವಾಸೋದ್ಯಮ ಮತ್ತು ಪೂರಕ ಕ್ಷೇತ್ರಗಳ ಬೆಳವಣಿಗೆಗೆ ಹೊಸ ಉಪಕ್ರಮಗಳು, ಯೋಜನೆ
  • ಪಿಎಫ್ ಹೂಡಿಕೆ ಮಿತಿ 4 ಲಕ್ಷ ರೂ.ಗೆ ಹೆಚ್ಚಳ
  • ವರ್ಕ್ ಫ್ರಂ ಹೋಮ್ ಭತ್ಯೆ, ತೆರಿಗೆ ವಿನಾಯಿತಿ
  • ರಿಯಲ್ ಎಸ್ಟೇಟ್ ಉತ್ತೇಜನಕ್ಕಾಗಿ ತೆರಿಗೆಯಲ್ಲಿ ಹೋಮ್ೋನ್ ಕಡಿತ ಮಿತಿ 2 ಲಕ್ಷ ರೂ.ಗೆ ಹೆಚ್ಚಿಸುವುದು
  • ಚಿಲ್ಲರೆ ವ್ಯಾಪಾರೋದ್ಯಮಕ್ಕೆ ನೆರವಾಗಬಲ್ಲ ರಾಷ್ಟ್ರೀಯ ಚಿಲ್ಲರೆ ವ್ಯಾಪಾರ ನೀತಿ ಅನುಷ್ಠಾನ

ರಾಜ್ಯದ ನಿರೀಕ್ಷೆಗಳು

  • ಜಿಎಸ್​ಟಿ ಪರಿಹಾರ 2023ಕ್ಕೆ ಸ್ಥಗಿತ, ಇನ್ನೂ 5 ವರ್ಷ ವಿಸ್ತರಿಸಬೇಕು
  • ಚೆನ್ನೈ-ಬೆಂಗಳೂರು-ಮುಂಬೈ ಆರ್ಥಿಕ ಕಾರಿಡಾರ್ ಜಾರಿಗೆ ಆರ್ಥಿಕ ನೆರವು
  • ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ
  • ಸಣ್ಣ, ಅತಿ ಸಣ್ಣ ಕೈಗಾರಿಕೆಗಳಿಗೆ ಕಚ್ಚಾವಸ್ತುಗಳ ಮೇಲಿನ ಕಸ್ಟಮ್ ಡ್ಯೂಟಿ, ಆಮದು ಸುಂಕ ಕಡಿತ
  • ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿಗೆ 25 ಸಾವಿರ ಕೋಟಿ ರೂ.ಅನುದಾನದ ಬೇಡಿಕೆ
  • ನೀರಾವರಿ ಯೋಜನೆಗಳಿಗೆ ಅಗತ್ಯವಿರುವ 2.50 ಲಕ್ಷ ಕೋಟಿ ರೂ. ನೆರವು
  • ಕುಂಟುತ್ತ ಸಾಗುತ್ತಿರುವ ರೈಲ್ವೆ ಯೋಜನೆಗಳಿಗೆ ಟೇಕಾಫ್ ನೀಡಲು ಅನುದಾನ ಒದಗಿಸುವುದು

ಬೆಳವಣಿಗೆ ಮುನ್ನೋಟ

  • 2021-22ರ ನೈಜ ಜಿಡಿಪಿ ಬೆಳವಣಿಗೆ 9.2%
  • 2022-23ರ ಜಿಡಿಪಿ ಬೆಳವಣಿಗೆ ಮುನ್ನೋಟ ಶೇಕಡ 8 ರಿಂದ 8.5, 2021-22ರಲ್ಲಿ ಸರ್ಕಾರದ ವೆಚ್ಚಕ್ಕೆ ಸಂಬಂಧಿಸಿ ಒಟ್ಟು ಬಳಕೆ ಪ್ರಮಾಣ ಶೇಕಡ 7 ಬೆಳವಣಿಗೆ
  • 2021-22ರಲ್ಲಿ ಕೃಷಿ ಮತ್ತು ಪೂರಕ ಕ್ಷೇತ್ರಗಳ ಬೆಳವಣಿಗೆ ಶೇಕಡ 3.9 ಹೆಚ್ಚಳ
  • 2021-22ರಲ್ಲಿ ಸೇವಾ ವಲಯದ ಬೆಳವಣಿಗೆ ಶೇಕಡ 8.2ರ ಪ್ರಗತಿ ದಾಖಲಿಸುವ ನಿರೀಕ್ಷೆ
  • 2022-23ರಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಅರ್ಥವ್ಯವಸ್ಥೆ ಸಜ್ಜಾಗಿದೆ
  • ಖಾಸಗಿ ವಲಯದಲ್ಲಿ ಹೂಡಿಕೆ ಪ್ರಮಾಣ ಹೆಚ್ಚಿದ ಕಾರಣ ಹಣಕಾಸು ವ್ಯವಸ್ಥೆ ಉತ್ತಮ ಸ್ಥಿತಿಯಲ್ಲಿ ಮುಂದುವರಿದು, ಅರ್ಥವ್ಯವಸ್ಥೆಯ ಪುನಶ್ಚೇತನಕ್ಕೆ ನೆರವಾಗಿದೆ.
  • ವಿಸ್ತೃತ ಪ್ರಮಾಣದಲ್ಲಿ ಲಸಿಕೆ ಅಭಿಯಾನ ಮತ್ತು ಪೂರೈಕೆ ಭಾಗದ ಸುಧಾರಣೆ ಮತ್ತು ನಿಯಮಗಳಲ್ಲಿ ಸುಧಾರಣೆ ತಂದಿರುವ ಕಾರಣ 2023ರಲ್ಲಿ ಬೆಳವಣಿಗೆ ಹೆಚ್ಚಿನ ಪ್ರಗತಿ ದಾಖಲಿಸಲಿದೆ.

ಶೇ.8-8.5 ಜಿಡಿಪಿ

ನವದೆಹಲಿ: ಕ್ಷಿಪ್ರವೇಗದ ಆರ್ಥಿಕತೆಯಾಗಿ ಉಳಿಯಲಿರುವ ಭಾರತ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡ 9.2 ಜಿಡಿಪಿ ಬೆಳವಣಿಗೆ ದಾಖಲಿಸಲಿದ್ದು, ಮುಂದಿನ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ದರ ಶೇಕಡ 8 ರಿಂದ 8.5ರ ನಡುವೆ ಇರಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಲೋಕಸಭೆಯಲ್ಲಿ ಸೋಮವಾರ ದೇಶದ ಆರ್ಥಿಕ ಸಮೀಕ್ಷೆ 2021-22ರ ವರದಿ ಮಂಡಿಸುತ್ತ ಈ ವಿವರ ನೀಡಿದರು. 2025ರ ಹಣಕಾಸು ವರ್ಷದ ವೇಳೆ ಭಾರತ 5 ಲಕ್ಷ ಕೋಟಿ ಡಾಲರ್​ನ ಅರ್ಥವ್ಯವಸ್ಥೆಯಾಗಿ ರೂಪುಗೊಳ್ಳಬೇಕಾದರೆ ಅಂದಾಜು 1.4 ಲಕ್ಷ ಕೋಟಿ ಡಾಲರ್ ಅನ್ನು ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆ ಮಾಡಬೇಕಾದ ಅವಶ್ಯಕತೆ ಇದೆ. ಆದಾಗ್ಯೂ, ಜಾಗತಿಕ ಹಣದುಬ್ಬರ ಮತ್ತು ಸಾಂಕ್ರಾಮಿಕ ಸಂಬಂಧಿತ ತೊಂದರೆಗಳನ್ನು ಎದುರಿಸ ಬೇಕಾಗಬಹುದು ಎಂದು ಸಚಿವೆ ನಿರ್ಮಲಾ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net