27ಕ್ಕೆ ಅಧ್ಯಕ್ಷ, ಉಪಾಧ್ಯಕ್ಷ ಗಾದಿಗೆ ಎಲೆಕ್ಷನ್

klr cmc
ಕೋಲಾರ ನಗರಸಭೆ ಕಚೇರಿ
Published on

ಕಿರುವಾರ ಎಸ್.ಸುದರ್ಶನ್ ಕೋಲಾರ
ಕೋಲಾರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯು ಆ.27ಕ್ಕೆ ನಿಗದಿಯಾಗಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ತೀವ್ರ ಪೈಪೋಟಿಗೆ ಇಳಿದಿವೆ.

ನಗರಸಭೆಯಲ್ಲಿ 35 ಮಂದಿ ಸದಸ್ಯರಿದ್ದು, ಕಾಂಗ್ರೆಸ್ 12, ಜೆಡಿಎಸ್ 8, ಬಿಜೆಪಿ 3, ಎಸ್‌ಡಿಪಿಐ 4 ಹಾಗೂ ಪಕ್ಷೇತರ 8 ಮಂದಿ ಸದಸ್ಯರಿದ್ದು, ಯಾವುದೇ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಒಂದು ಪಕ್ಷ ಇನ್ನೊಂದು ಪಕ್ಷದೊಂದಿಗೆ ಮೈತ್ರಿಯಾಗಬೇಕು ಅಥವಾ ಪಕ್ಷೇತರರ ಬೆಂಬಲ ಅಗತ್ಯವಿದೆ.
ಕಾಂಗ್ರೆಸ್ ಶತಾಯಗತಾಯ ಅಽಕಾರದ ಚುಕ್ಕಾಣಿ ಹಿಡಿಯಲೇಬೇಕು ಎಂಬ ಹಠಕ್ಕೆ ಬಿದ್ದಿದ್ದು, ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಜೆಡಿಎಸ್‌ನ ಅಸಮಾಧಾನಿತ ಸದಸ್ಯರನ್ನು ಸಂಪರ್ಕಿಸಿ ಬೆಂಬಲ ಕೋರುತ್ತಿದ್ದು, ಎಸ್‌ಡಿಪಿಐ ಸದಸ್ಯರು ಈಗಾಗಲೇ ಶಾಸಕ ಕೊತ್ತೂರು ಜಿ.ಮಂಜುನಾಥ್ ಅವರೊಂದಿಗೆ ಗುರುತಿಸಿಕೊಂಡಿರುವುದರಿAದ ಬೆಂಬಲ ಸಿಗುತ್ತದೆ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್ ಇದೆ.
ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಎಂಎಲ್ಸಿ ನಜೀರ್ ಅಹ್ಮದ್, ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಎಂಎಲ್ಸಿ ಎಂ.ಎಲ್.ಅನಿಲ್‌ಕುಮಾರ್ ಅವರು ನಗರಸಭೆಯನ್ನು ಪಕ್ಷದ ತೆಕ್ಕೆಗೆ ಪಡೆದುಕೊಳ್ಳಲು ಕಸರತ್ತು ನಡೆಸುತ್ತಿದ್ದು, ಕೊತ್ತೂರು ಮಂಜುನಾಥ್ ಬಣದಲ್ಲಿ ಗುರುತಿಸಿಕೊಂಡಿರುವ ಸದಸ್ಯರಾದ ಅಪ್ಸರ್, ರಮೇಶ್ ಹಾಗೂ ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಸದಸ್ಯ ಮಂಜುನಾಥ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾದ್ದಾರೆ.
ಇದರ ನಡುವೆ, ಕೈ ಸದಸ್ಯ ಬಿ.ಎಂ.ಮುಬಾರಕ್ 11 ಸದಸ್ಯರನ್ನು ಜತೆಗೆಟ್ಟುಕೊಂಡು ಅಧ್ಯಕ್ಷನಾಗಬೇಕು ಎಂದು ಕಾಂಗ್ರೆಸ್, ಜೆಡಿಎಸ್ ಮುಖಂಡರ ಮೊರೆಹೋಗಿರುವುದು ಗುಟ್ಟಾಗೇನು ಉಳಿದಿಲ್ಲ. ಅಂತೆಯೇ, ಬಿ.ಎಂ.ಮುಬಾರಕ್ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಕೆಲ ಮುಖಂಡರು ನಜೀರ್ ಅಹ್ಮದ್‌ಗೆ ಮನವಿ ಮಾಡಿದ್ದು, ಇದಕ್ಕೆ ಅವರು ಯಾವುದೇ ಸ್ಪಂದನೆ ನೀಡಿಲ್ಲ. ಅಧ್ಯಕ್ಷ, ಉಪಾಧ್ಯಕ್ಷರಾಗಿ ಯಾರನ್ನು ಆಯ್ಕೆ ಮಾಡಬೇಕು ಎಂದು ಚರ್ಚೆ ಮಾಡುವ ಸಮಯದಲ್ಲಿ ಮುಬಾರಕ್ ವಿರುದ್ಧ ಹಲವು ಸದಸ್ಯರು ಧ್ವನಿ ಎತ್ತಿದ್ದಾರೆ ಎನ್ನಲಾಗಿದೆ.
ಮೈತ್ರಿಯಲ್ಲೂ ನಿರೀಕ್ಷೆ
ಬಿಜೆಪಿ-3, ಜೆಡಿಎಸ್ 8 ಹಾಗೂ ಪಕ್ಷೇತರರು 8 ಮಂದಿ ಸದಸ್ಯರ ಪೈಕಿ ಮಾಜಿ ಸಚಿವ ವರ್ತೂರು ಆರ್.ಪ್ರಕಾಶ್ ಬೆಂಬಲಿಗರು ನಾಲ್ವರಿದ್ದು, ಮೈತ್ರಿ ಪಾಲನೆಯನ್ನು ಪ್ರಾಮಾಣಿಕವಾಗಿ ಬಿಜೆಪಿ-ಜೆಡಿಎಸ್ ಮುಖಂಡರು ಮಾಡಿದರೆ ನಾವೇ ಅಽಕಾರ ಪಡೆದುಕೊಳ್ಳಬಹುದು ಎಂಬುದು ಮೈತ್ರಿ ಸದಸ್ಯರ ನಿರೀಕ್ಷೆಯಾಗಿದೆ.

ಅವಿಶ್ವಾಸದ ಅಸಮಾಧಾನ
ಮೊದಲ ಅವಧಿಯಲ್ಲಿ ಜೆಡಿಎಸ್, ಎಸ್‌ಡಿಪಿಐ ಹಾಗೂ ಪಕ್ಷೇತರ ಸದಸ್ಯರು ಸೇರಿ ಜೆಡಿಎಸ್‌ನ ಶ್ವೇತಾ ಶಬರೀಶ್ ಅಧ್ಯಕ್ಷರಾಗಿ ಹಾಗೂ ಪ್ರವೀಣ್‌ಗೌಡ ಉಪಾಧ್ಯಕ್ಷರಾಗಿದ್ದರು. ಈ ವೇಳೆ, ಪ್ರವೀಣ್‌ಗೌಡ ಅವರು ನಗರಸಭೆಯ ಕೆಲ ಹಗರಣ ಬಯಲಿಗೆಳೆದರು. ಇದು ಕಾಂಗ್ರೆಸ್ ಹಾಗೂ ಕೆಲ ಹಿರಿಯ ಸದಸ್ಯರ ಅಸಮಾಧಾನಕ್ಕೆ ಕಾರಣವಾಯಿತು. ನಂತರ ಬೆಳವಣಿಗೆಯಲ್ಲಿ ಶ್ವೇತಾ ಶಬರೀಶ್, ಕಾಂಗ್ರೆಸ್‌ನೊಂದಿಗೆ ಶಾಮೀಲಾಗಿ ಪ್ರವೀಣ್ ಗೌಡರ ವಿರುದ್ಧ ಅವಿಶ್ವಾಸ ಮಂಡನೆ ಮಾಡಿ ಉಪಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದರು. ಆದರೆ ಅವಿಶ್ವಾಸ ಮಂಡನೆಯಂದು ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ಸಭೆಗೆ ಹಾಜರಾಗಿ ಪ್ರವೀಣ್‌ಗೌಡ ಅವರಿಗೆ ಬೆಂಬಲ ನೀಡಿದ್ದರೆ ಅಧಿಕಾರದಲ್ಲಿ ಮುಂದುವರಿಯಬಹುದಿತ್ತು. ಆದರೆ ಅವರ ಗೈರು ಜೆಡಿಎಸ್ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದ್ದು, ಈ ಎಲ್ಲ ಬೆಳವಣಿಗೆಗಳಿಂದ ಪ್ರವೀಣ್‌ಗೌಡ ಬಿಜೆಪಿ ಬಾಗಿಲು ಬಡಿದಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಬಂಡಾಯ ಮತ್ತು ಜೆಡಿಎಸ್ ಜತೆಯಾದರೆ ಪ್ರವೀಣ್‌ಗೌಡ ಹಾಗೂ ಮತ್ತಿತರ ಸದಸ್ಯರು ಮತಹಾಕುವುದು ಅನುಮಾನ ಮೂಡಿಸಿದೆ.

ಜೆಡಿಎಸ್ ಸದಸ್ಯರಿಂದ ತಿರಸ್ಕಾರ
ಕಾಂಗ್ರೆಸ್‌ನಿಂದ ಬೆಂಬಲ ದೊರೆಯುತ್ತಿಲ್ಲ ಎಂಬದನ್ನು ಮನಗಂಡ ಬಿ.ಎಂ.ಮುಬಾರಕ್ 11 ಮಂದಿ ಸದಸ್ಯರ ಬೆಂಬಲದೊMದಿಗೆ ಅಧ್ಯಕ್ಷ ಸ್ಥಾನಕ್ಕೇರಲು ಕಸರತ್ತು ಆರಂಭಿಸಿದ್ದಾರೆ. ಮತ್ತೊಂದು ಕಡೆ ಜೆಡಿಎಸ್‌ನ ಹಿರಿಯ ಮುಖಂಡರನ್ನು ಭೇಟಿಯಾಗಿ ಸದಸ್ಯರಾದ ಪ್ರವೀಣ್‌ಗೌಡ ಹಾಗೂ ರಾಕೇಶ್ ಗೌಡರಿಗೆ ದೂರವಾಣಿ ಕರೆ ಮಾಡಿಸಿ ಬೆಂಬಲ ನೀಡುವಂತೆ ಸೂಚಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿದ್ದರೂ ತಾಲೂಕು ಜೆಡಿಎಸ್ ಅಧ್ಯಕ್ಷರಾಗಲಿ ಅಥವಾ ಮುಖಂಡರಾಗಲಿ ಸದಸ್ಯರನ್ನು ಇದುವರೆಗೂ ಪರಿಗಣನೆಗೆ ತೆಗೆದುಕೊಂಡಿಲ್ಲ. ಇದರಿಂದಾಗಿ ಜೆಡಿಎಸ್ ಮುಖಂಡರಿಗೂ ಮುಬಾರಕ್ ಮೇಲೆ ಒಲವು ಹೆಚ್ಚಾಗಿದೆ ಎನ್ನಲಾಗುತ್ತಿದೆ. ಆದರೆ, ಮುಬಾರಕ್ ಕಾಂಗ್ರೆಸ್ ಸದಸ್ಯರಾಗಿರುವುದರಿಂದ ಬೆಂಬಲ ನೀಡಲು ಜೆಡಿಎಸ್ ಸದಸ್ಯರು ತಿರಸ್ಕರಿಸಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಕೋಟ್…
ನಾನು ಉಪಾಧ್ಯಕ್ಷನಾಗಿದ್ದಾಗ ಸ್ವಪಕ್ಷದವರೇ ಪ್ರತಿ ಪಕ್ಷದೊಂದಿಗೆ ಶಾಮೀಲಾಗಿ ಅವಿಶ್ವಾಸ ಮಂಡಿಸಿದ್ದರು. ಆದರೆ, ಜೆಡಿಎಸ್‌ನ ಹಿರಿಯರು ನನಗೆ ಬೆಂಬಲ ನೀಡಲಿಲ್ಲ. ಈಗ, ಆತ್ಮಗೌರಕ್ಕೆ ಧಕ್ಕೆ ಬರುವಂತೆ ಬೆಂಬಲ ಕೋರಿದರೆ ಸಹಿಸುವುದಿಲ್ಲ.
| ಪ್ರವೀಣ್‌ಗೌಡ, ನಗರಸಭೆ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net