ರಿಮೋಟ್ ಮತದಾನಕ್ಕೆ ಸಜ್ಜು: ಸದ್ಯದಲ್ಲೇ ತಾಲೀಮು ನಡೆಸಲಿರುವ ಚುನಾವಣಾ ಆಯೋಗ

Vote
Published on

ನವದೆಹಲಿ: ಮತದಾರರು ತಾವಿರುವ ಸ್ಥಳದಿಂದಲೇ ಮತದಾನ ಮಾಡುವ ರಿಮೋಟ್ ವೋಟಿಂಗ್ ಸೌಲಭ್ಯದ ತಾಲೀಮು ಶೀಘ್ರವೇ ಆರಂಭವಾಗಲಿದೆ. ಇದಕ್ಕೆ ಚುನಾವಣಾ ಆಯೋಗ ಸರ್ವ ಸನ್ನದ್ಧಗೊಂಡಿದೆ.

11ನೇ ರಾಷ್ಟ್ರೀಯ ಮತದಾರರ ದಿನದ ಸಂದೇಶದಲ್ಲಿ ಈ ಮಾಹಿತಿ ಬಹಿರಂಗಪಡಿಸಿದ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ, ಈ ಯೋಜನೆಗಾಗಿ ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗುತ್ತದೆ ಎಂದಿದ್ದಾರೆ. ಕಾರ್ಯ ಪ್ರಗತಿಯಲ್ಲಿದ್ದು ರಿಮೋಟ್ ತಾಲೀಮು ಮತದಾನವನ್ನು ಇಷ್ಟರಲ್ಲೇ ಆರಂಭಿಸಲಾಗುವುದೆಂದರು. ವಿದೇಶಗಳಲ್ಲಿರುವ ಭಾರತೀಯ ಮತದಾರರಿಗೆ ಅಂಚೆ ಮತಪತ್ರ ಸೌಲಭ್ಯ ವಿಸ್ತರಿಸುವ ಪ್ರಸ್ತಾಪನೆ ಕಾನೂನು ಸಚಿವಾಲಯದ ಪರಿಶೀಲನೆಯಲ್ಲಿದೆ ಎಂದರು.

ಮನೆಯಿಂದಲೇ ಮತದಾನ ಅಲ್ಲ: ರಿಮೋಟ್ ವೋಟಿಂಗ್ ಎಂದರೆ ಮನೆಯಿಂದಲೇ ಮತದಾನ ಎಂದು ಅರ್ಥವಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ. ಲೋಕಸಭೆ ಚುನಾವಣೆಯಲ್ಲಿ ಮತದಾರರಾಗಿರುವ ಚೆನ್ನೈನ ಒಬ್ಬ ಮತದಾರ ದೆಹಲಿಯಲ್ಲಿ ಇದ್ದಾರೆ ಎಂದಿಟ್ಟುಕೊಳ್ಳಿ. ಆತ ಅಥವಾ ಆಕೆ ಮತದಾನ ಮಾಡಲು ತನ್ನ ಕ್ಷೇತ್ರಕ್ಕೇ ಮರಳಬೇಕಿಲ್ಲ ಅಥವಾ ಅವರು ಮತದಾನ ಸೌಲಭ್ಯದಿಂದ ವಂಚಿತರಾಗಬೇಕಾಗಿಯೂ ಇಲ್ಲ. ಅಂಥ ಮತದಾರರು ಚುನಾವಣಾ ಆಯೋಗ ಸ್ಥಾಪಿಸಿದ ಕೇಂದ್ರಕ್ಕೆ ನಿರ್ದಿಷ್ಟ ಸಮಯದಲ್ಲಿ ಹೋಗಿ ಮತದಾನ ಮಾಡಬಹುದು. ಈ ಸೌಲಭ್ಯ ಬಳಸಿಕೊಳ್ಳುವ ಬಗ್ಗೆ ಅವರು ತಮ್ಮ ಕ್ಷೇತ್ರದ ಚುನಾವಣಾಧಿಕಾರಿಗೆ ಮೊದಲೇ ಅರ್ಜಿ ಸಲ್ಲಿಸಬೇಕು.

ಡಿಜಿಟಲ್ ವೋಟರ್ ಐಡಿ ಕಾರ್ಡ್​ಗೆ ಚಾಲನೆ: ರಾಷ್ಟ್ರೀಯ ಮತದಾರರ ದಿನವಾದ ಸೋಮವಾರ, ಇಲೆಕ್ಟ್ರಾನಿಕ್ ಮತದಾರರ ಭಾವಚಿತ್ರ ಗುರುತು ಚೀಟಿ (ಇ-ಎಪಿಕ್) ನೀಡುವ ಚುನಾವಣಾ ಆಯೋಗದ ಯೋಜನೆಗೆ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಚಾಲನೆ ನೀಡಿದರು. ಸಚಿವರು ಹೊಸ ಮತದಾರರಿಗೆ ಐದು ಇ-ಎಪಿಕ್ ಮತ್ತು ಎಪಿಕ್ ಕಾರ್ಡ್​ಗಳನ್ನು ಸಾಂಕೇತಿಕವಾಗಿ ವಿತರಿಸುವ ಮೂಲಕ ಈ ಯೋಜನೆಯನ್ನು ಉದ್ಘಾಟಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ರಾಷ್ಟ್ರಪತಿ ರಾಮನಾಥ ಕೋವಿಂದ, ಆಯೋಗದ ವೆಬ್ ರೇಡಿಯೊ ‘ಹಲೋ ವೋಟರ್ಸ್’ಗೆ ಚಾಲನೆ ಕೊಟ್ಟರು. ಇಲೆಕ್ಟ್ರಾನಿಕ್ ಗುರುತಿನ ಚೀಟಿ ಪಿಡಿಎಫ್ ರೂಪವಾಗಿದ್ದು ಯಾವುದೇ ರೀತಿಯ ತಿದ್ದುಪಡಿ ಮಾಡಲು ಸಾಧ್ಯವಾಗುವುದಿಲ್ಲ. ಸುರಕ್ಷಿತವಾದ ಕ್ಯೂಆರ್ ಕೋಡ್ ಕೂಡ ಇರಲಿದ್ದು ಅದರಲ್ಲಿ ಮತದಾರರ ಭಾವಚಿತ್ರ, ಸಿರಿಯಲ್ ನಂಬರ್ ಮೊದಲಾದ ವಿವರಗಳಿರುತ್ತವೆ. ಅದನ್ನು ಮೊಬೈಲ್ ಫೋನ್ ಅಥವಾ ಕಂಪ್ಯೂಟರ್​ನಲ್ಲಿ ಡೌನ್​ಲೋಡ್ ಮಾಡಿ ಸಂಗ್ರಹಿಸಿಟ್ಟು ಕೊಳ್ಳಬಹುದಾಗಿದೆ. ಹೊಸದಾಗಿ ನೋಂದಣಿ ಮಾಡಿಕೊಂಡವರಿಗೆ ಭೌತಿಕ ಐಡಿ ಕಾರ್ಡ್ ಜೊತೆಗೆ ಇ-ಎಪಿಕ್ ಕೂಡ ಕೊಡಲಾಗುತ್ತದೆ.

ಏನಿದು ಹೊಸ ವ್ಯವಸ್ಥೆ?

ರಿಮೋಟ್ ಮತದಾನ ತಂತ್ರಜ್ಞಾನ ರೂಪಿಸಲು ಚುನಾವಣಾ ಆಯೋಗ ಐಐಟಿ-ಮದ್ರಾಸ್​ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ರಿಮೋಟ್ ವೋಟಿಂಗ್​ಗೆ ಬ್ಲಾಕ್ ಚೇಯ್್ನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಹಿರಿಯ ಉಪ ಮುಖ್ಯ ಚುನಾವಣಾ ಆಯುಕ್ತ ಸಂದೀಪ್ ಸಕ್ಸೇನಾ ವಿವರಿಸಿದ್ದಾರೆ. ಇದೊಂದು ಟೂ-ವೇ ಇಲೆಕ್ಟ್ರಾನಿಕ್ ವೋಟಿಂಗ್ ವ್ಯವಸ್ಥೆಯಾಗಿದೆ. ಇದಕ್ಕೆಂದೇ ಮೀಸಲಾದ ಇಂಟರ್​ನೆಟ್ ಲೈನ್ ನೆರವಿನ ವೈಟ್-ಲಿಸ್ಟೆಡ್ ಐಪಿ ಸಾಧನಗಳನ್ನು ಬಳಸಲಾಗುತ್ತದೆ. ಬಯೋಮೆಟ್ರಿಕ್ ಸಾಧನ ಹಾಗೂ ವೆಬ್ ಕ್ಯಾಮರಾ ಈ ಜಾಲದಲ್ಲಿ ಇರುತ್ತದೆ. ಈ ವ್ಯವಸ್ಥೆಯ ಪ್ರಯೋಜನ ಪಡೆಯುವ ಇಚ್ಛೆಯುಳ್ಳ ಮತದಾರರು ಮುಂಚಿತವಾಗಿಯೇ ನಿಗದಿಯಾದ ಸ್ಥಳಕ್ಕೆ ನಿಗದಿತ ಸಮಯದಲ್ಲಿ ಹೋಗಿರಬೇಕು. ಆಗ ಮಾತ್ರವೇ ರಿಮೋಟ್ ಮತದಾನ ಮಾಡಲು ಸಾಧ್ಯ.

ಇ-ಎಪಿಕ್ ವಿಶೇಷ

  • ಜನವರಿ 25-31ರ ವರೆಗೆ ಮೊದಲ ಹಂತ ಹಾಗೂ ಫೆಬ್ರವರಿ 1ರಿಂದ 2ನೇ ಹಂತದಲ್ಲಿ ಇ-ಎಪಿಕ್ ಕಾರ್ಡ್ ನೀಡಲಾಗುತ್ತದೆ.
  • ವೋಟರ್ ಐಡಿ ಕಾರ್ಡ್ ಪಡೆಯುವಲ್ಲಿ ವಿಳಂಬ, ಕಳೆದು ಹೋಗುವುದು, ಮೊದಲಾದ ಸಮಸ್ಯೆಗಳು ಈ ವ್ಯವಸ್ಥೆಯಿಂದ ನಿವಾರಣೆಯಾಗಲಿವೆ.
  • ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಅರ್ಜಿ ಸಲ್ಲಿಸಿದವರಿಗೆ ಆಯೋಗದ ಅನುಮೋದನೆ ಸಿಕ್ಕ ತಕ್ಷಣವೇ ಲಭ್ಯವಾಗುವ ಎಪಿಕ್ ಕಾರ್ಡ್ ನ್ನು ಡೌನ್​ಲೋಡ್ ಮಾಡಿಕೊಳ್ಳಬಹುದು.
  • ಮತದಾರರೇ ಸ್ವತಃ ಅದನ್ನು ಪ್ರಿಂಟ್, ಲ್ಯಾಮಿನೇಟ್ ಮಾಡಿಕೊಳ್ಳಬಹುದು ಅಥವಾ ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದಾಗಿದೆ.
  • ಇ-ಎಪಿಕ್ ಕಾರ್ಡ್​ನ್ನು ಮತದಾರರು ಡಿಜಿಲಾಕರ್​ಗೆ ಅಪ್​ಲೋಡ್ ಮಾಡಿ ಇತರ ದಾಖಲೆಪತ್ರಗಳೊಂದಿಗೆ ಸುರಕ್ಷಿತವಾಗಿ ಸಂಗ್ರಹಿಸಿಟ್ಟುಕೊಳ್ಳಬಹುದು.
  • ಮತದಾರರು ಎಲ್ಲೇ ಹೋದರೂ ಇ-ಎಪಿಕ್ ಕಾರ್ಡ್ ಬಳಸಬಹುದು. ವಿಳಾಸ ಬದಲಾವಣೆಯಾದಲ್ಲಿ ಕಾರ್ಡ್​ನಲ್ಲಿರುವ ಕ್ಯೂಆರ್ ಕೋಡ್ ನೆರವಿನಿಂದ ಅದನ್ನು ನೋಂದಾಯಿಸಬಹುದು.
  • ಸದ್ಯ ಇ-ಎಪಿಕ್ ಕಾರ್ಡ್ ಸೌಲಭ್ಯ ಪಡೆಯಲು -ಠಿ;25 ಶುಲ್ಕ ನಿಗದಿಪಡಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net