ಮತಗಳ್ಳತನ ಆರೋಪ: ರಾಹುಲ್ ಗಾಂಧಿ ಹೇಳಿಕೆ ಆಧಾರರಹಿತ ಎಂದ ಆಯೋಗ| Election Commission

Election Commission
Published on

Election Commission: ಭಾರತದ ಚುನಾವಣೆಗಳಲ್ಲಿ ಬಿಜೆಪಿಗೆ ಸಹಾಯ ಮಾಡಲು ಚುನಾವಣಾ ಆಯೋಗ ಮತಗಳ್ಳತನದಲ್ಲಿ ಭಾಗಿಯಾಗಿದೆ, ಅದಕ್ಕೆ ಪುರಾವೆ ಇದೆ ಎಂಬ ರಾಹುಲ್ ಗಾಂಧಿ ಆರೋಪವನ್ನು ಭಾರತೀಯ ಚುನಾವಣಾ ಆಯೋಗ ತಳ್ಳಿ ಹಾಕಿದೆ ಎಂದು ವರದಿಯಾಗಿದೆ.

ಲೋಕಸಭಾ ವಿರೋಧ ಪಕ್ಷದ ನಾಯಕರ ಆರೋಪ ಆಧಾರರಹಿವಾದದ್ದು, ಎಲ್ಲಾ ಚುನಾವಣಾ ಅಧಿಕಾರಿಗಳು ಇಂತಹ ಬೇಜಾಬ್ದಾರಿ ಹೇಳಿಕೆಗಳನ್ನು ನಿರ್ಲಕ್ಷಿಸಬೇಕು ಎಂದು ಹೇಳಿದೆ ಎಂದು ವರದಿಗಳು ಉಲ್ಲೇಖಿಸಿವೆ.

ರಾಹುಲ್ ಗಾಂಧಿ ಹೇಳಿದ್ದೇನು?

ಚುನಾವಣಾ ಆಯೋಗದ ವಿರುದ್ಧ ಮತಗಳ್ಳತನ ಆರೋಪವನ್ನು ಪುನರುಚ್ಚರಿಸಿದ್ದ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಇಂದು ಶುಕ್ರವಾರ(ಆಗಸ್ಟ್ 1) ಬೆಳಗ್ಗೆ ದೆಹಲಿಯಲ್ಲಿ ಸಂಸತ್​ ಬಳಿ ಮಾತನಾಡಿ, "ಬಿಜೆಪಿ ಜೊತೆ ಸೇರಿ ಆಯೋಗ ದುಷ್ಕೃತ್ಯದಲ್ಲಿ ಭಾಗಿಯಾಗಿದೆ ಎಂಬುದಕ್ಕೆ ನಮ್ಮಲ್ಲಿ ಪುರಾವೆ ಇದೆ" ಎಂದು ಹೇಳಿದ್ದರು.

"ದೇಶದಲ್ಲಿ ಚುನಾವಣೆಗಳಲ್ಲಿ ಮತಗಳ್ಳತನ ನಡೆಯುತ್ತಿದೆ ಎಂದು ಹೇಳಿದ್ದೆವು. ಈಗ ಚುನಾವಣಾ ಆಯೋಗವು ಮತಗಳ ಕಳ್ಳತನದಲ್ಲಿ ಭಾಗಿಯಾಗಿದೆ ಎಂಬುದಕ್ಕೆ ನಮ್ಮ ಬಳಿ ಮುಕ್ತ ಮತ್ತು ಮುಚ್ಚಿದ ಪುರಾವೆಗಳಿವೆ. ನಾನು ಇದನ್ನು ಹಗುರವಾಗಿ ಹೇಳುತ್ತಿಲ್ಲ, 100% ದಾಖಲೆಯ ಪುರಾವೆಯೊಂದಿಗೆ ಹೇಳುತ್ತಿದ್ದೇನೆ. ಅದನ್ನು ಬಿಡುಗಡೆ ಮಾಡಿದ ಬಳಿಕ ಆಯೋಗ ಬಿಜೆಪಿಗೆ ಸಹಾಯ ಮಾಡಲು ಹೇಗೆ ಕೆಲಸ ಮಾಡ್ತಿದೆ ಎಂದು ಇಡೀ ದೇಶಕ್ಕೆ ತಿಳಿಯುತ್ತದೆ" ಎಂದು ಹೇಳಿದರು.

"ಮತಗಳ್ಳತನದಲ್ಲಿ ತೊಡಗಿದ ಆಯೋಗದ ಈ ದುಷ್ಕೃತ್ಯವು ದೇಶದ್ರೋಹಕ್ಕೆ ಸಮ. ಕಾಂಗ್ರೆಸ್​ ಈ ಕುರಿತು ತನಿಖೆ ನಡೆಸಿದ್ದು, "ಅಣುಬಾಂಬ್​" ನಂತಹ ಪ್ರಮುಖ ಸಾಕ್ಷ್ಯವನ್ನು ಬಹಿರಂಗಪಡಿಸಲಿದೆ" ಎಂದು ತಿಳಿಸಿದರು.

"ಮಧ್ಯಪ್ರದೇಶದ ವಿಧಾನಸಭೆ ಚುನಾವಣೆ, ಲೋಕಸಭಾ ಚುನಾವಣೆಗಳಲ್ಲಿ ನಮಗೆ ಕೇವಲ ಅನುಮಾನವಿತ್ತು. ಆದರೆ ಮಹಾರಾಷ್ಟ್ರ ಚುನಾವಣೆಯ ಸಮಯದಲ್ಲಿ ನಮ್ಮ ಅನುಮಾನ ನಿಜವಾಯಿತು. ನಾವು 6 ತಿಂಗಳು ಕಾಲ ಸ್ವತಂತ್ರವಾಗಿ ತನಿಖೆ ನಡೆಸಿದ್ದು, ಅದರ ಫಲವಾಗಿ ನಮಗೆ 'ಅಣುಬಾಂಬ್' ಸಿಕ್ಕಿದೆ. ಈ ಅಣುಬಾಂಬ್ ಸಿಡಿದಾಗ ಚುನಾವಣಾ ಆಯೋಗ ಈ ದೇಶದಲ್ಲಿ ಕಾಣೆಯೇ ಆಗುತ್ತದೆ. ಈ ಅಕ್ರಮದಲ್ಲಿ ಚುನಾವಣಾ ಆಯೋಗದ ಮೇಲಿಂದ ಕೆಳಗಿನವರೆಗೆ ಯಾರ್ಯಾರೂ ಭಾಗಿಯಾಗಿದ್ದಾರೋ, ಅವರನ್ನು ನಾವು ಬಿಡಲಾರೆವು. ಇದು ದೇಶದ್ರೋಹಕ್ಕಿಂತ ಕಡಿಮೆ ಏನೂ ಅಲ್ಲ" ಎಂದು ಹೇಳಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net