ಕ್ರಿಕೆಟರ್​ ರಿಂಕು ಸಿಂಗ್​ರನ್ನು ಮತದಾರರ ಜಾಗೃತಿ ಅಭಿಯಾನದಿಂದ ತೆಗೆದ ಚುನಾವಣಾ ಆಯೋಗ; ಏನು ಕಾರಣ?| Rinku Singh

Rinku Singh
Published on

Rinku Singh: ಭಾರತೀಯ ಚುನಾವಣಾ ಆಯೋಗವು ತನ್ನ ಮತದಾರರ ಜಾಗೃತಿ ಅಭಿಯಾನದ ಬ್ರಾಂಡ್ ರಾಯಭಾರಿ ಸ್ಥಾನದಿಂದ ಕ್ರಿಕೆಟರ್ ರಿಂಕು ಸಿಂಗ್​ ಅವರನ್ನು ಕೈ ಬಿಟ್ಟಿದ್ದು, ಅವರ ಹೆಸರಿನ ಚಿತ್ರಗಳು, ಪೋಸ್ಟರ್‌ಗಳು, ಬ್ಯಾನರ್‌ಗಳು, ವೀಡಿಯೊಗಳು ಮತ್ತು ಡಿಜಿಟಲ್ ಕಂಟೆಂಟ್​ ಅನ್ನು ತೆಗೆದು ಹಾಕುವಂತೆ ಉತ್ತರ ಪ್ರದೇಶದ ಎಲ್ಲಾ ಜಿಲ್ಲೆಯ ಚುನಾವಣಾಧಿಕಾರಿಗಳಿಗೆ ಆದೇಶ ನೀಡಿದೆ.

ಸಮಾಜವಾದಿ ಪಕ್ಷದ (SP) ಸಂಸದೆ ಪ್ರಿಯಾ ಸರೋಜ್ ಅವರೊಂದಿಗೆ ಸಿಂಗ್ ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ರಿಂಕ್ ಸಿಂಗ್​ರನ್ನು ಈಗ ರಾಜಕೀಯ ಕುಟುಂಬದ ಭಾಗವಾಗಿ ನೋಡಬಹುದು. ಹೀಗಾಗಿ ಇದು ಜಾಗೃತಿ ಅಭಿಯಾನದ ನಿಷ್ಪಕ್ಷಪಾತತೆಗೆ ಧಕ್ಕೆ ತರುವ ಸಾಧ್ಯತೆಯಿದೆ. ಎಲ್ಲಾ ಸಾರ್ವಜನಿಕ ಪ್ರಚಾರಗಳಲ್ಲಿ ತಟಸ್ಥತೆ ಮತ್ತು ವಸ್ತುನಿಷ್ಠತೆಯನ್ನು ಕಾಪಾಡಿಕೊಳ್ಳುವುದು ಪ್ರಮುಖ ಆದ್ಯತೆಯಾಗಿದೆ. ಹೀಗಾಗಿ ಹೆಸರನ್ನು ಕೈಬಿಡಲಾಗಿದೆ ಎಂದು ಆಯೋಗ ಹೇಳಿದೆ.

ಮಚ್ಲಿಶಹರ್ ಲೋಕಸಭಾ ಕ್ಷೇತ್ರದ ಎಸ್​ಪಿ ಸಂಸದೆ ಪ್ರಿಯಾ ಸರೋಜ್​ ಅವರ ಜೂನ್ 8ರಂದು ಕ್ರಿಕೆಟರ್ ರಿಂಕು ಸಿಂಗ್ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸಮಾರಂಭದಲ್ಲಿ ಎಸ್​ಪಿ ಮುಖ್ಯಸ್ಥ, ಮಾಜಿ ಸಿಎಂ ಅಖಿಲೇಶ್ ಯಾದವ್, ಡಿಂಪಲ್ ಯಾದವ್, ಶಿವಪಾಲ್ ಯಾದವ್, ಜಯಾ ಬಚ್ಚನ್ ಸೇರಿ ಅನೇಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನವೆಂಬರ್ ತಿಂಗಳಲ್ಲಿ ಇಬ್ಬರ ವಿವಾಹ ನಡೆಯಲಿದೆ ಎನ್ನಲಾಗಿದೆ.

ಚುನಾವಣಾ ಆಯೋಗದ ನಿರ್ಧಾರಕ್ಕೆ ರಿಂಕು ಸಿಂಗ್ ಅಥವಾ ಪ್ರಿಯಾ ಸರೋಜ್ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಏತನ್ಮಧ್ಯೆ ಸಾಮಾಜಿಕ ತಾಣಗಳಲ್ಲಿ ಈ ವಿಷಯದ ಬಗ್ಗೆ ಚರ್ಚೆಗಳಾಗುತ್ತಿವೆ. ಮುಂಬರುವ ಚುನಾವಣೆಗೆ ಮುಂಚಿತವಾಗಿ ಆಯೋಗವು ತೆಗೆದುಕೊಂಡ ದೃಢ ನಿಲುವು ಎಂದು ಹಲವರು ವ್ಯಾಖ್ಯಾನಿಸಿದ್ದಾರೆ. ಇನ್ನು ಕೆಲವರು ಈ ನಿರ್ಧಾರವನ್ನು 'ಅತಿಯಾದ ಎಚ್ಚರಿಕೆ' ಎಂದು ಕರೆದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net