ತವರು ಜಿಲ್ಲೆಗೆ ನೌಕರರ ವರ್ಗ ಬೇಡ; ಸಿಎಸ್​ಗೆ ಚುನಾವಣಾ ಆಯೋಗದ ಸೂಚನೆ | ಬಡ್ತಿಯಲ್ಲಿದ್ದರೂ ತೆಗೆಯಲು ಆದೇಶ

895623
Published on

ಬೆಂಗಳೂರು: ರಾಜಕೀಯ ಪಕ್ಷಗಳಂತೆಯೇ ಚುನಾವಣಾ ಆಯೋಗವೂ 2023ರ ವಿಧಾನಸಭೆ ಚುನಾವಣೆಗೆ ಭರದ ಸಿದ್ಧತೆ ಆರಂಭಿಸಿದ್ದು, ಚುನಾವಣೆ ಕರ್ತವ್ಯಕ್ಕೆ ನಿಯೋಜನೆ ಆಗುವ ಅಧಿಕಾರಿಗಳ ಮೇಲೆ ಹದ್ದಿನ ಕಣ್ಣಿಟ್ಟು ತವರು ಜಿಲ್ಲೆಯಲ್ಲಿ ಇರುವವರನ್ನು ಕೂಡಲೇ ಎತ್ತಂಗಡಿ ಮಾಡುವುದು ಸೇರಿ ಕೆಲವೊಂದು ಸಲಹೆಯನ್ನು ಸರ್ಕಾರಕ್ಕೆ ನೀಡಿದೆ.

ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಚಿಲುಮೆ ಸಂಸ್ಥೆ ಪ್ರಕರಣದ ಬಳಿಕ ಚುನಾವಣಾ ಆಯೋಗ ಪ್ರತಿಯೊಂದು ಹೆಜ್ಜೆಯನ್ನು ಅಳೆದೂ ತೂಗಿ ಇಡುತ್ತಿದೆ. ಮತದಾರರ ಪಟ್ಟಿ ಪರಿಷ್ಕರಣೆ, ಅಧಿಕಾರಿ/ಸಿಬ್ಬಂದಿ ನೇಮಕ, ತವರು ಜಿಲ್ಲೆಯಲ್ಲಿರುವ ಅಧಿಕಾರಿ, ನೌಕರರ ಎತ್ತಂಗಡಿ ಮತ್ತಿತರ ಉಪಕ್ರಮಗಳನ್ನು ಕೈಗೆತ್ತಿಕೊಂಡಿದೆ.

ಈಗಿರುವ ಕರ್ನಾಟಕ ವಿಧಾನಸಭೆಯ ಅವಧಿ 2023ರ ಮೇ 24ರಂದು ಮುಕ್ತಾಯಗೊಳ್ಳಲಿದ್ದು, ಚುನಾವಣೆ ಕಣ ಕಾವೇರತೊಡಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತವರು ಜಿಲ್ಲೆಯಲ್ಲಿ ಅಥವಾ ದೀರ್ಘಾವಧಿವರೆಗೆ ಸೇವೆ ಸಲ್ಲಿಸಿದ ಸ್ಥಳಗಳಿಂದ ಎತ್ತಂಗಡಿ ಮಾಡುವಂತೆ ಮತ್ತು ಬಡ್ತಿ ಹೆಸರಿನಲ್ಲಿ ತವರು ಜಿಲ್ಲೆಯಲ್ಲಿದ್ದರೆ ಕೂಡಲೇ ತೆಗೆಯುವಂತೆ ಮುಖ್ಯ ಕಾರ್ಯದರ್ಶಿಗೆ ಚುನಾವಣಾ ಆಯೋಗ ಸೂಚಿಸಿದೆ.

ಚುನಾವಣೆಯೊಂದಿಗೆ ನೇರ ಸಂಪರ್ಕ ಹೊಂದಿದ ಯಾವುದೇ ಅಧಿಕಾರಿಯನ್ನು ತವರು ಜಿಲ್ಲೆ ಅಥವಾ ದೀರ್ಘಾವಧಿ ಸೇವೆ ಸಲ್ಲಿಸಿದ ಜಿಲ್ಲೆಗೆ ವರ್ಗಾವಣೆ ಮಾಡುವಂತಿಲ್ಲ. ಹಾಲಿ ಇರುವ ಅಧಿಕಾರಿ/ನೌಕರರು ಕಳೆದ ನಾಲ್ಕು ವರ್ಷದಲ್ಲಿ ಒಂದೇ ಜಿಲ್ಲೆಯಲ್ಲಿ ಮೂರು ವರ್ಷಗಳನ್ನು ಪೂರ್ಣಗೊಳಿಸಿದ್ದರೆ ಅಥವಾ ಮೇ 31, 2023ರಂದು ಅಥವಾ ಮೊದಲು 3 ವರ್ಷಗಳನ್ನು ಪೂರ್ಣಗೊಳಿಸುತ್ತಿದ್ದರೆ ಅಂತಹವರನ್ನು ಮುಂದುವರಿಸುವಂತಿಲ್ಲ ಎಂದು ಹೇಳಿದೆ.

ಪೊಲೀಸ್ ಅಧಿಕಾರಿಗಳು:
ಪಿಎಸ್​ಐ, ಮೇಲ್ಪಟ್ಟವರನ್ನು ತವರು ಜಿಲ್ಲೆಯಲ್ಲಿ ನಿಯೋಜಿಸಬಾರದು. ಪೊಲೀಸ್ ಉಪ-ವಿಭಾಗದಲ್ಲಿ ನಿರ್ದಿಷ್ಟ ದಿನಾಂಕದಂದು ಅಥವಾ ಅದಕ್ಕಿಂತ ಮೊದಲು ನಾಲ್ಕು ವರ್ಷಗಳಲ್ಲಿ 3 ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದರೆ ಅವರನ್ನು ಜಿಲ್ಲೆಯಿಂದ ಹೊರಗೆ ವರ್ಗಾಯಿಸಬೇಕು ಎಂದು ಹೇಳಲಾಗಿದೆ. ಸಬ್ ಇನ್ಸ್​ಸ್ಪೆಕ್ಟರ್ ಹುದ್ದೆಯ ಮೇಲ್ಪಟ್ಟವರನ್ನೂ ತವರು ಜಿಲ್ಲೆಗೆ ವರ್ಗ ಮಾಡುವಂತಿಲ್ಲ.

ಇವರಿಗೆ ಅನ್ವಯಿಸಲ್ಲ:
ವಿವಿಧ ಇಲಾಖೆಗಳ ರಾಜ್ಯ ಪ್ರಧಾನ ಕಚೇರಿಯಲ್ಲಿ ನಿಯೋಜಿಸಲಾದ ಅಧಿಕಾರಿಗಳು, ವೈದ್ಯರಂತಹ ಚುನಾವಣೆಗಳೊಂದಿಗೆ ನೇರಸಂಪರ್ಕ ಹೊಂದಿಲ್ಲದ ಅಧಿಕಾರಿಗಳು, ಇಂಜಿನಿಯರ್​ಗಳು, ಶಿಕ್ಷಕರು, ಪ್ರಾಂಶುಪಾಲರಿಗೆ ಈ ಸೂಚನೆ ಅನ್ವಯವಾಗುವುದಿಲ್ಲ. ಯಾವುದೇ ನೌಕರರ ವಿರುದ್ಧ ರಾಜಕೀಯ ಪಕ್ಷಪಾತ ಅಥವಾ ಪೂರ್ವಾಗ್ರಹದ ನಿರ್ದಿಷ್ಟ ದೂರುಗಳಿದ್ದರೆ, ವಿಚಾರಣೆಯಲ್ಲಿ ರುಜುವಾತಾದರೆ ವರ್ಗಾವಣೆ ಹಾಗೂ ಇಲಾಖೆ ಸೂಕ್ತ ಕ್ರಮ ಜರುಗಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net