

ಬೆಂಗಳೂರು: ಲೋಕಸಭಾ ಚುನಾವಣೆಯ ಆರ್ಭಟ ಶುರುವಾಗಿದೆ. ಚುನಾವಣಾ ಆಯೋಗ ಕಳೆದ ಶನಿವಾರ ಎಲೆಕ್ಷನ್ ಡೇಟ್ ಪ್ರಕಟ ಮಾಡಿದ್ದೇ ತಡ ಮಾದರಿ ನೀತಿ ಸಂಹಿತೆ ಕೂಡಾ ಜಾರಿ ಆಗಿದೆ. ಚುನಾವಣಾ ನೀತಿ ಸಂಹಿತೆ ರಾಜಕಾರಣಿಗಳು, ಅಧಿಕಾರಿಗಳಿಗೆ ಮಾತ್ರವಲ್ಲ ಜನ ಸಾಮಾನ್ಯರಿಗೂ ಅನ್ವಯ ಆಗುತ್ತದೆ.
ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಸಭೆ-ಸಮಾರಂಭ ಅಥವಾ ಮದುವೆ ಕಾರ್ಯಕ್ರಮ ನಡೆಸಬೇಕಿದ್ದರೆ ಸರ್ಕಾರದಿಂದ ಅನುಮತಿ ಪಡೆಯೋದು ಕಡ್ಡಾಯವಾಗಿದೆ ಎಂದು ಮುಖ್ಯಮಂತ್ರಿ ಕಾರ್ಯಾಲಯ ತಿಳಿಸಿದೆ.
ಮದುವೆ ಮಾತ್ರವಲ್ಲ ಯಾವುದೇ ಜಾತ್ರೆ, ಸಮಾರಂಭ, ನಡೆಸೋದಕ್ಕೆ ತಹಶೀಲ್ದಾರ್ ಕಚೇರಿಯಲ್ಲಿ ಇರುವ ಎಆರ್‌ಒಗಳ ಬಳಿ ಮೊದಲೇ ಅನುಮತಿ ಪಡೆಯಬೇಕಿದೆ. ಇನ್ನು ಈ ಕಾರ್ಯಕ್ರಮಗಳಿಗೆ ರಾಜಕಾರಣಿಗಳನ್ನು ಆಹ್ವನಿಸಬಾರದು.
ಕಾರ್ಯಕ್ರಮಗಳಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸುವುದು, ರಾಜಕೀಯ ಪಕ್ಷಗಳ ಬಾವುಟ, ಚಿಹ್ನೆಗಳನ್ನು ಬಳಸುವುದು, ಮತಯಾಚಿಸುವುದು ಕಾನೂನು ಬಾಹಿರವಾಗಿದೆ. ಮತದಾರರಿಗೆ ಭರವಸೆ, ಆಮಿಷ ಒಡ್ಡುವ ಕುರಿತು ದೂರು ಬಂದರೆ ಅಂತಹವರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.