

ಬೆಂಗಳೂರು:
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿಗಳ ವಿರುದ್ದವೇ ಬಂಡಾಯ ಮೊಳಗಿಸಿ ಸ್ಪರ್ಧೆಗೆ ಸಿದ್ಧವಾಗಿರುವ ಕೆ.ಎಸ್.ಈಶ್ವರಪ್ಪ ಮತ್ತು ದಿಂಗಾಲೇಶ್ವರ ಸ್ವಾಮೀಜಿ ಅವರನ್ನು ನಿಭಾಯಿಸುವುದೇ ಬಿಜೆಪಿಗೆ ಸವಾಲಾಗಿದೆ.
ಬಿಜೆಪಿ ಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರು ಪ್ರಕಟವಾದ ಮೇಲೆ ಎದ್ದಿದ್ದ ಭಿನ್ನಾಭಿಪ್ರಾಯಗಳನ್ನು ಪರಸ್ಪರ ಭೇಟಿ, ಮಾತುಕತೆಯ ಮೂಲಕ ಸಮಧಾನಪಡಿಸುವಲ್ಲಿ ಯಶಸ್ವಿಯಾಗಿರುವ ಬಿಜೆಪಿ ನಾಯಕರು, ಈತನಕ ಕೆ.ಎಸ್.ಈಶ್ವರಪ್ಪ ಮತ್ತು ದಿಂಗಾಲೇಶ್ವರ ಸ್ವಾಮೀಜಿ ಅವರನ್ನು ಸಮಾಧಾನಪಡಿಸಲು ಇನ್ನೂ ಸಾಧ್ಯವಾಗಿಲ್ಲ.
ಗೃಹ ಸಚಿವ ಮಿತ್ ಷಾ ಅವರ ಮಾತುಕತೆಯಿಂದ ಬಹುತೇಕ ಸರಿಯಾಗಬಹುದು ಎಂಬ ನಿರೀಕ್ಷೆ ಲ ನೀಡಿಲ್ಲ. ಮತ್ತೊಂದೆಡೆ ದಿಂಗಾಲೇಶ್ವರ ಸ್ವಾಮಿಜಿಗಳು ಸ್ಪರ್ಧೆಗೆ ಬರಲಾರರು ಎನ್ನುವ ಮಾತುಗಳು ಸಹ ನಿಜವಾಗಿಲ್ಲ.
ಮಾಜಿ ಸಿಎಂ ಯಡಿಯೂರಪ್ಪ ಅವರ ತವರು ಕ್ಷೇತ್ರ ಶಿವಮೊಗ್ಗದಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ರಾಘವೇಂದ್ರ ಅವರ ವಿರುದ್ದವೇ ಬಂಡಾಯವೆದ್ದಿರುವ ಈಶ್ವರಪ್ಪ ಅವರ ಹಿಂದೆ ಬಿಜೆಪಿಯೊಳಗಿರುವ ಅತೃಪ್ತರ ಚಿತಾವಣೆ ಇದೆ ಎನ್ನುವುದು ಪಕ್ಷದ ಆಂತರಿಕ ವೇದಿಕೆಯಲ್ಲಿ ಚರ್ಚೆಯಾಗುತ್ತಿದೆ.
ಮತ್ತೊಂದೆಡೆ, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿ ಪ್ರಹ್ಲಾದ ಜೋಷಿ ಅವರ ವಿರುದ್ದವೇ ಸೆಟೆದು ನಿಂತಿರುವ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆಗೂ ರಾಜಕೀಯ ಹುನ್ನಾರವಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ದಿನದಿಂದ ದಿನಕ್ಕೆ ವೃದ್ಧಿಯಾಗುತ್ತಿರುವ ರಾಜಕೀಯ ವರ್ಚಸ್ಸು ಸಹಿಸಿಕೊಳ್ಳಲಾಗದ ಬಿಜೆಪಿಯಲ್ಲಿಯೇ ಇರುವ ಕಾಣದ ಕೈಗಳು ಈಶ್ವರಪ್ಪ ಅವರನ್ನು ಎತ್ತಿಕಟ್ಟಿವೆ. ಇದಕ್ಕೆ ರಾಜ್ಯದ ಒಬ್ಬರು ಮತ್ತು ದೆಹಲಿ ನಾಯಕರೊಬ್ಬರ ಕುಮ್ಮಕ್ಕು ಇದೆ ಎಂದು ಚರ್ಚೆ ನಡೆಯುತ್ತಿದೆ.
ಈ ಎಲ್ಲಾ ರಾಜಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿಯೇ ದಿಂಗಾಲೇಶ್ವರ ಸ್ವಾಮೀಜಿಗಳ ರಾಜಕೀಯ ಪ್ರವೇಶವಾಗಿದೆ. ಶಿವಮೊಗ್ಗದಲ್ಲಿ ಈಶ್ವರಪ್ಪ ಬಂಡಾಯ ಬಾವುಟ ಇಳಿಸಿದರೆ, ಧಾರವಾಡದ ಸಮಸ್ಯೆಯೂ ಬಗೆಹರಿಸಯಬಹುದು ಎನ್ನುವ ವಿಷಯ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ನಾಮಪತ್ರ ಸಲ್ಲಿಕೆಯ ಬಳಿಕ ವಾಪಸ್ಸು ಪಡೆಯುವ ತನಕವೂ ಸಮಯ ಇರುವುದರಿಂದ ಈ ಎರಡೂ ಕ್ಷೇತ್ರಗಳನ್ನು ಹೈಕಮಾಂಡ್ ಗಂಭಿರವಾಗಿ ಪರಿಗಣಿಸಿ ಸಮಸ್ಯೆ ಬಗೆಹರಿಸಲಿದೆ ಎಂದು ಬಿಜೆಪಿಯ ಉನ್ನತ ಮಟ್ಟದ ನಾಯಕರೊಬ್ಬರು ಖಚಿತಪಡಿಸಿದ್ದಾರೆ. ಹಾಗಾಗಿ ಈ ಎರಡೂ ಕ್ಷೇತ್ರಗಳ ರಾಜಕೀಯ ಬೆಳವಣಿಗೆಗಳು ನಿತ್ಯವೂ ಗಮನ ಸೆಳೆಯುತ್ತಿದ್ದು, ನಿಣಾಯಕ ಕುತೂಹಲದ ಘಟ್ಟಕ್ಕೆ ಬಂದಿರುವುದು ವಿಶೇಷ.