ಲೋಕಸಭೆ ಚುನಾವಣೆ; ಕಡಿಮೆ ಸ್ಥಾನ ಪಡೆದರೆ ನಾಯಕತ್ವಕ್ಕೆ ಸವಾಲು

Published on

ಬೆಂಗಳೂರು:
ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲಿಯೇ ಥರಾವರಿ ರಾಜಕೀಯ ಏರಿಳಿತದ ಲೆಕ್ಕಾಚಾರಗಳು ಶುರುವಾಗಿದೆ.
ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ ಎಷ್ಟು ಸ್ಥಾನ ಪಡೆಯಲಿದೆ? ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕೂಟ ಎಷ್ಟು ಸ್ಥಾನಗಳನ್ನು ಗೆಲ್ಲಲಿದೆ? ಎನ್ನುವುದೇ ಚರ್ಚೆಯಲ್ಲಿರುವ ಸಂಗತಿ.
ಕಳೆದ ಬಾರಿ ಲೋಕಸಭೆಯಲ್ಲಿ ಚುನಾವಣೆಯಲ್ಲಿ ಬಿಜೆಪಿ ಪಡೆದಿದ್ದಷ್ಟು ಸ್ಥಾನಗಳನ್ನು ಈ ಬಾರಿ ಪಡೆಯುವುದು ಕಷ್ಟ ಎನ್ನುವ ಸ್ಪಷ್ಟ ಅಭಿಪ್ರಾಯವ್ಯಕ್ತವಾಗಿದೆ. ಬಿಜೆಪಿ ಎಷ್ಟು ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಕಾಂಗ್ರೆಸ್‌ಗೆ ಎಷ್ಟು ಸ್ಥಾನ ್ಲಸ್ ಆಗಲಿದೆ ಎನ್ನುವುದು ಎನ್ನುವುದು ಕೂಡ ಬಿಸಿ ಚರ್ಚೆಗೆ ಗ್ರಾಸವಾಗಿದೆ.
ಬಿಜೆಪಿ ಕನಿಷ್ಠ 18 ರಿಂದ 20 ಸ್ಥಾನಗಳನ್ನು ಪಡೆಯುವ ಅಚಲ ವಿಶ್ವಾಸದಲ್ಲಿದೆ. ಇಷ್ಟು ಸ್ಥಾನಗಳನ್ನು ಪಡೆದರೆ, ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವದ ಮೇಲೆ ಕೇಂದ್ರ ವರಿಷ್ಠರ ವಿಶ್ವಾಸ ಇನ್ನಷ್ಟು ಹೆಚ್ಚಾಗಲಿದೆ. ಒಂದು ವೇಳೆ ಇಷ್ಟು ಸಂಖ್ಯೆಯಲ್ಲಿ ಗೆಲುವು ಸಾಧಿಸದೆ ಹೋದರೆ, 15ಕ್ಕಿಂತ ಕಡಿಮೆ ಸ್ಥಾನ ಬಂದರೆ, ಅದರ ಪರಿಣಾಮ ರಾಜ್ಯದಲ್ಲಿ ಬಿಜೆಪಿ ಚುಕ್ಕಾಣಿ ಹಿಡಿದಿರುವ ಬಿ.ವೈ.ವಿಜಯೇಂದ್ರ ಅವರ ಮೇಲೆ ಬೀರಲಿದೆ ಎಂದು ಬಿಜೆಪಿ ಆಂತರಿಕ ಚರ್ಚೆಗಳ ಬಿಸಿ ಏರಿದೆ.
ಇನ್ನು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಯ ಕಾರಣಕ್ಕಾಗಿ ಮತ್ತು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿರುವ ಹಿನ್ನೆಲೆಯಲ್ಲಿ ಕನಿಷ್ಠ 12 ರಿಂದ 15 ಸ್ಥಾನ ಗೆಲ್ಲುವ ವಿಶ್ವಾಸದಲ್ಲಿ ಕಾಂಗ್ರೆಸ್ ಇದೆ. ಇಷ್ಟು ಸ್ಥಾನಗಳು ಕಾಂಗ್ರೆಸ್‌ಗೆ ಲಭ್ಯವಾದರೆ, ವಿಧಾನಸಭೆ ಚುನಾವಣೆಯಲ್ಲಿ ಜನರಿಟ್ಟಿದ್ದ ವಿಶ್ವಾಸವನ್ನು ಉಳಿಸಿಕೊಂಡು ಜನಪ್ರಿಯ ಸರ್ಕಾರವಾಗಿಯೇ ಮುನ್ನೆಡೆಯಲಿದೆ. ಒಂದು ವೇಳೆ 8 ಸ್ಥಾನಕ್ಕಿಂತ ಕಡಿಮೆ ಪಡೆದರೆ ಅದು ಕಾಂಗ್ರೆಸ್ ಸರ್ಕಾರದ ಜನಪ್ರಿಯತೆ ಮಂಕಾಗುವ ಸಂಕೇತವಾಗಲಿದೆ ಎಂದು ಅರ್ಥೈಯಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net