ಪೊಲೀಸ್ ಠಾಣೆ ಮೆಟ್ಟಿಲೇರಿದ ವೃದ್ದ ಜೋಡಿಯ ಪ್ರೇಮ ಪ್ರಕರಣ

Love
Published on

ಬೆಂಗಳೂರು: 7೦ ವರ್ಷದ ವೃದ್ದನೊಬ್ಬ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ, ನಂತರ ನಿರಾಕರಿಸಿದ್ದಲ್ಲದೇ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ 63 ವರ್ಷದ ವೃದ್ದೆಯೊಬ್ಬರು ಪೊಲೀಸ್ ಠಾಣಾ ಮೆಟ್ಟಿಲೇರಿರುವ ವಿಚಿತ್ರ ಪ್ರಕರಣ ನಗರದಲ್ಲಿ ನಡೆದಿದೆ.
ವೃದ್ದೆ ನೀಡಿರುವ ದೂರಿನನ್ವಯ ಪೂರ್ವ ವಿಭಾಗದ ಶಿವಾಜಿನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರೆಯ ಪತಿ ಹಾಗೂ ಆರೋಪಿ ಲೋಕನಾಥನ್ ಪತ್ನಿ ಸಾವನ್ನಪ್ಪಿದ್ದು, ಐದು ವರ್ಷಗಳ ಹಿಂದೆ ಇಬ್ಬರಿಗೂ ಪರಿಚಯವಾಗಿತ್ತು. ಆರೋಪಿ ತನ್ನ ಮಗನ ಮದುವೆಗೆ ವಧು ಹುಡುಕುತ್ತಿದ್ದಾಗ ವೃದ್ಧೆಯ ಪರಿಚಯವಾಗಿತ್ತು. ಮದುವೆಯನ್ನು ಇಬ್ಬರೂ ಸಹ ಜತೆ ನಿಂತು ಮಾಡಿದ್ದರು. ನಂತರ ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ಇಬ್ಬರೂ ಸಹ ಮೈಸೂರು, ದಾವಣೆಗೆರೆ, ಬೆಳಗಾವಿ ಅಂತಾ ಪ್ರವಾಸಕ್ಕೂ ಹೋಗಿದ್ದರು. ಅದೇ ಸಂದರ್ಭದಲ್ಲಿ ತನ್ನನ್ನು ಮದುವೆಯಾಗುವಂತೆ ದೂರುದಾರೆ ಆರೋಪಿಗೆ ಕೇಳಿದ್ದರು. ಆರಂಭದಲ್ಲಿ ಸಮ್ಮತಿಸಿದ್ದ ಆರೋಪಿ, ನಂತರ ಆಕೆಯನ್ನು ನಿರ್ಲಕ್ಷ್ಯಿಸಲಾರಂಭಿಸಿದ್ದ. ಅಲ್ಲದೇ ತಾನು ಕರೆದಾಗ ಮಾತ್ರ ಬರಬೇಕು ಇಲ್ಲವಾದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ವೃದ್ದ ಮಹಿಳೆ ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net