ವಕ್ಫ್​ ಮಸೂದೆಯನ್ನು ಬೆಂಬಲಿಸಿದ್ದಕ್ಕೆ ಹಿರಿಯ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ: ಮೂವರ ಬಂಧನ! Waqf Bill

Waqf Bill
Published on

Waqf Bill : ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರವಾದ ವಕ್ಫ್ ತಿದ್ದುಪಡಿ ಮಸೂದೆಗೆ ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಹಿರಿಯ ಮುಸ್ಲಿಂ ವ್ಯಕ್ತಿಯೊಬ್ಬರನ್ನು ಮಸೀದಿಯ ಹೊರಗಡೆ ಕಿಡಿಗೇಡಿಗಳ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿರುವ ಆರೋಪ ಕೇಳಿಬಂದಿದೆ. ಈ ಘಟನೆ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಗುರುವಾರ (ಏಪ್ರಿಲ್​ 03) ಸಂಜೆ ನಡೆದಿದೆ ಎನ್ನಲಾಗಿದೆ.

ಬಿಜೆಪಿ ಬೆಂಬಲಿಗ ಮತ್ತು ಉತ್ತರ ಪ್ರದೇಶದ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅಶ್ಫಾಕ್ ಸೈಫಿ ಅವರ ಸೋದರ ಮಾವ ಜಾಹಿದ್ ಸೈಫಿ ಅವರ ಮೇಲೆ ಹಲ್ಲೆ ನಡೆದಿದೆ. ಅಬು ಬಕರ್ ಮಸೀದಿಯಲ್ಲಿ ನಮಾಜ್ ಮಾಡಿ ಹೊರಬಂದ ಬಳಿಕ ಕಿಡಿಗೇಡಿಗಳು ಅವರನ್ನು ನಿಂದಿಸಿ, ದಾಳಿ ಮಾಡಿದ್ದಾರೆ.

ಜಾಹಿದ್​ ಸೈಫಿ ಹೇಳಿಕೆ ಪ್ರಕಾರ, ವಕ್ಫ್ ತಿದ್ದುಪಡಿ ಮಸೂದೆಯ ಬಗ್ಗೆ ಚರ್ಚೆ ನಡೆಯುವಾಗ ಅವರು ಮಸೀದಿಯಿಂದ ಹೊರಬರುತ್ತಿದ್ದರು. ಈ ವೇಳೆ ಕೆಲವರು ಮಸೂದೆಯನ್ನು ಟೀಕಿಸಿದಾಗ, ಸೈಫಿ ಅವರು ಅದನ್ನು ಸಮರ್ಥಿಸಿಕೊಂಡರು. ಕೇಂದ್ರದ ಮಂಡಿಸಿರುವ ಮಸೂದೆ ಸರಿಯಾಗಿಯೇ ಇದೆ ಎಂದು ಹೇಳಿದರು. ಬಳಿಕ ಜನರ ಗುಂಪು ಸೈಫಿ ಅವರನ್ನು ನಿಂದಿಸಿತು. ಇದಾದ ಬಳಿಕ ಅವರ ಮೇಲೆ ಹಲ್ಲೆ ಮಾಡಿದೆ.

ದಾಳಿಕೋರರನ್ನು ರಿಜ್ವಾನ್, ನೌಶಾದ್ ಮತ್ತು ಶೋಯೆಬ್ ಎಂದು ಗುರುತಿಸಲಾಗಿದ್ದು, ಇತರರೊಂದಿಗೆ ಸೇರಿ ದೊಣ್ಣೆ ಮತ್ತು ಹರಿತವಾದ ಆಯುಧದಿಂದ ತನ್ನ ಕಿವಿಗೆ ಗಾಯಗೊಳಿಸಿದ್ದಾರೆ ಎಂದು ಸೈಫಿ ಹೇಳಿದ್ದಾರೆ. ದಾಳಿಯ ನಂತರ ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ.

ನನ್ನನ್ನು ಕೋಲಿನಿಂದ ಥಳಿಸಲಾಗಿದೆ ಮತ್ತು ನನ್ನ ಕಿವಿಯನ್ನು ಹರಿತವಾದ ವಸ್ತುವಿನಿಂದ ಗಾಯಗೊಳಿಸಿದ್ದಾರೆ. ಇದರಿಂದಾಗಿ ನಾನು ಯಾವುದೇ ಶಬ್ದಗಳನ್ನು ಕೇಳಲು ಸಾಧ್ಯವಾಗುತ್ತಿಲ್ಲ ಮತ್ತು ನನ್ನ ಕಿವಿ ಸ್ತಬ್ಧಗೊಂಡಿದೆ ಎಂದು ಸೈಫಿ ಹೇಳಿದರು. ನೆರೆಹೊರೆಯವರು ಗಾಯಗೊಂಡ ಸೈಫಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ದೂರು ದಾಖಲಿಸಲು ಸಹಾಯ ಮಾಡಿದ ಬಳಿಕ ವೈದ್ಯಕೀಯ ಚಿಕಿತ್ಸೆಗಾಗಿ ಕರೆದೊಯ್ದರು.

ಸೈಫಿ ಅವರು ಈ ದಾಳಿಯನ್ನು ತಮ್ಮ ರಾಜಕೀಯ ನಿಲುವು ಮತ್ತು ಕೌಟುಂಬಿಕ ಸಂಬಂಧಗಳಿಗೆ ಸಂಪರ್ಕ ಕಲ್ಪಿಸಿದ್ದಾರೆ. ಮಸೂದೆ ಮಂಡನೆಯಿಂದ ನಮಗೆ ತುಂಬಾ ಸಂತೋಷವಾಗಿದೆ. ಮಾಫಿಯಾ ಮತ್ತು ವಕ್ಫ್ ಬೋರ್ಡ್ ಹಣವನ್ನು ತಿನ್ನುವವರಿಗೆ ಸಮಸ್ಯೆಗಳು ಎದುರಾಗುತ್ತವೆ ಮತ್ತು ಬಡವರಿಗೆ ಅವರ ಹಕ್ಕುಗಳು ಸಿಗುತ್ತವೆ. ಈ ಬಗ್ಗೆ ಮಾತನಾಡಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದರು.

ದಾಳಿಯ ನಂತರ, ಅವರ ಸೋದರ ಮಾವ ಅಶ್ಫಾಕ್ ಸೈಫಿ, ನಮ್ಮ ಕುಟುಂಬಕ್ಕೆ ಬೆದರಿಕೆ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ಅಲ್ಲದೆ, ನಮ್ಮನ್ನು ನಿಂದಿಸಲು ಮತ್ತು ಕೆಟ್ಟದಾಗಿ ಬೆದರಿಕೆ ಹಾಕಲು ನಾನು ಮತ್ತು ನನ್ನ ಕುಟುಂಬ ಅಂತಹ ಅಪರಾಧವಾದರೂ ಏನು ಮಾಡಿದೆ? ಎಂದು ಪ್ರಶ್ನಿಸಿದ್ದಾರೆ.

ಹಲ್ಲೆ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net