ವೃದ್ಧರು, ಮಕ್ಕಳು ಹೊರಗೆ ಬರುವಂತಿಲ್ಲ

baskar rao
Published on

ಬೆಂಗಳೂರು: ಕರೊನಾ ಸೋಂಕು ತಡೆಯಲು ಕೇಂದ್ರ ಸರ್ಕಾರ ಲಾಕ್​ಡೌನ್-4.0 ವಿಸ್ತರಿಸಿದ ಪರಿಣಾಮ ಮೇ 19ರವರೆಗೆ ನಗರದಲ್ಲಿ ನಿಷೇಧಾಜ್ಞೆ ವಿಧಿಸಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶಿಸಿದ್ದಾರೆ.

65 ವರ್ಷ ಮೇಲ್ಪಟ್ಟ ವ್ಯಕ್ತಿಗಳು, 10 ವರ್ಷ ಒಳಗಿನ ಮಕ್ಕಳು, ಅಸ್ವಸ್ಥಗೊಂಡವರು, ಗರ್ಭಿಣಿಯರು (ಆರೋಗ್ಯ, ತುರ್ತು ಸೇವೆಬಿಟ್ಟು) ಕಡ್ಡಾಯವಾಗಿ ಮನೆಯಲ್ಲಿಯೇ ಇರಬೇಕೆಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಎಂದಿನಂತೆ ರಾತ್ರಿ 7ರಿಂದ ಬೆಳಗ್ಗೆ 7 ಗಂಟೆ ವರೆಗೆ ಅನವಶ್ಯಕ ಚಟುವಟಿಕೆಗಳಿಗೆ ಮತ್ತು ವೈಯಕ್ತಿಕ ಓಡಾಟ ನಿಷೇಧಿಸಲಾಗಿದೆ. ನಿರ್ಬಂಧಿತ ವಲಯ ಒಳಗೆ-ಹೊರಗೆ ಯಾರನ್ನೂ ಬಿಡುವುದಿಲ್ಲ. ಕೆಂಪು ವಲಯದಲ್ಲಿ ದ್ವಿಚಕ್ರ ವಾಹನ, ಆಟೋ, ಟ್ಯಾಕ್ಸಿ, ಕ್ಯಾಬ್ ಸೇವೆ ಇರುವುದಿಲ್ಲ. ಜಿಲ್ಲೆ ಗಳ ಒಳಗಡೆ ಮತ್ತು ಹೊರಗೆ ಬಸ್​ಗಳ ಸಂಚಾರ ಇರುವುದಿಲ್ಲ. ಕ್ಷೌರದ ಅಂಗಡಿ, ಸ್ಪಾ, ಸಲೂನ್​ಗಳು ತೆರೆಯುವಂತಿಲ್ಲ ಎಂದು ತಿಳಿಸಿದ್ದಾರೆ.

ಕಾರುಗಳಲ್ಲಿ ಚಾಲಕ ಸೇರಿ ಮೂವರು ಪ್ರಯಾಣಿಸಬಹುದು. ಬೈಕ್​ನಲ್ಲಿ ಒಬ್ಬರೇ ಹೋಗಬೇಕು. ಕಾರ್ಖಾನೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡಬೇಕು. ಕಟ್ಟಡ ಕಾಮಗಾರಿಗೆ ಹೊರಗಿನಿಂದ ಕಾರ್ವಿುಕರ ಕರೆತರದೆ ಸ್ಥಳದಲ್ಲಿ ಇರುವರನ್ನು ಬಳಸಿ ಕೊಳ್ಳಬೇಕು. ಮಾಲ್, ಮಾರುಕಟ್ಟೆಗಳನ್ನು ಬಂದ್ ಮಾಡಬೇಕು ಎಂದು ಸೂಚಿಸಿದ್ದಾರೆ.

ಥಿಯೇಟರ್, ಮಾಲ್​ಗಳು ಬಂದ್

ಚಿತ್ರಮಂದಿರ, ಶಾಪಿಂಗ್ ಮಾಲ್, ಜಿಮ್ ಕ್ರೀಡಾ ಸಂಕೀರ್ಣ, ಈಜುಕೊಳ, ಮನೋರಂಜನಾ ಕೇಂದ್ರ, ಪಾರ್ಕ್, ರಂಗಮಂದಿರ, ಸಮುದಾಯ ಭವನಗಳಿಗೆ ನಿರ್ಬಂಧ ಮುಂದುವರಿಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net