ಏ.27ರಂದು ರಾಮನಗರ, ಚನ್ನಪಟ್ಟಣ ನಗರಸಭೆಗೆ ಚುನಾವಣೆ

Ramanagara Nagarasabhe building
Published on

 ರಾಮನಗರ :  ಜಿಲ್ಲೆಯಲ್ಲಿ ಬಾಕಿ ಉಳಿದಿದ್ದ ರಾಮನಗರ ಮತ್ತು ಚನ್ನಪಟ್ಟಣ ನಗರಸಭೆಗಳಿಗೆ ಏ.27ರಂದು ಮತದಾನ ನಡೆಸಲು ಚುನಾವಣೆ ಘೋಷಣೆಯಾಗಿದೆ.

2019ರ ನವೆಂಬರ್ 14ರಲ್ಲಿಯೇ ಮಾಗಡಿ ಪುರಸಭೆ ಮತ್ತು ಕನಕಪುರ ನಗರಸಭೆಗೆ ಚುನಾವಣೆ ನಡೆದಿತ್ತು. ಅವಧಿ ಮುಗಿದರೂ ವಾರ್ಡ್‌ಗಳ ಮೀಸಲಾತಿ ಗೊಂದಲ ಕೋರ್ಟ್ ಮೆಟ್ಟಿಲೇರಿದ್ದ ಕಾರಣ ರಾಮನಗರ ಮತ್ತು ಚನ್ನಪಟ್ಟಣ ನಗರಸಭೆಗಳ ತಲಾ 31 ವಾರ್ಡ್‌ಗಳಿಗೆ ಚುನಾವಣೆ ೋಷಣೆ ಆಗಿರಲಿಲ್ಲ.

ಇದೀಗ ಎರಡೂ ನಗರಸಭೆಗಳಿಗೆ ಘೋಷಣೆಯಾಗಿದ್ದು, ಜಿಲ್ಲೆಯ ಚುನಾವಣಾಧಿಕಾರಿ ಏ.8ರಂದು ಚುನಾವಣೆ ಅಧಿಸೂಚನೆ ಹೊರಡಿಸುವ ಮೂಲಕ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ.

ಒಟ್ಟಾರೆಯಾಗಿ ರಾಮನಗರ-ಚನ್ನಪಟ್ಟಣ ಸ್ಥಳೀಯ ಸಂಸ್ಥೆಗಳ ಚುನಾವಣೆ ೋಷಣೆ ಆಗುತ್ತಿದ್ದಂತೆ ರಾಜಕೀಯ ಮುಖಂಡರು ಮತ್ತು ಆಕಾಂಕ್ಷಿಗಳ ನಿದ್ದೆಗೆಡಿಸಿದೆ.

ಕಮಲ ಅರಳಿಸುವ ತಂತ್ರ : 

ಕಾಂಗ್ರೆಸ್-ಜೆಡಿಎಸ್ ನಡುವಿನ ಹೋರಾಟದ ಲಾಭ ಪಡೆದುಕೊಳ್ಳಲು ಬಿಜೆಪಿ ಸಹ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಕನಕಪುರ, ಮಾಗಡಿಯಲ್ಲಿ ತಲಾ ಒಂದು ಸ್ಥಾನ ಗೆದ್ದಿರುವ ಬಿಜೆಪಿ, ಒಂದು ವೇಳೆ ಜೆಡಿಎಸ್ - ಕಾಂಗ್ರೆಸ್‌ನಲ್ಲಿ ತಲ್ಲಣಗಳು ಉಂಟಾದರೆ, ಈ ಮೂಲಕ ಪ್ರಬಲ ಅಭ್ಯರ್ಥಿಗಳನ್ನು ಪಕ್ಷಕ್ಕೆ ಸೆಳೆದು ಗೆಲ್ಲುವ ಮಾಸ್ಟರ್ ಪ್ಲಾನ್ ಯೋಜಿಸಿದೆ. ಇದರ ಜತೆಗೆ ಗ್ರಾಪಂ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಗೆಲುವು ಕಂಡು ಹುಮ್ಮಸ್ಸಿನಲ್ಲಿರುವ ಬಿಜೆಪಿ ಎರಡೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತ್ತಷ್ಟು ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಸ್ವಾಮ್ಯ ಸ್ಥಾಪಿಸುವ ಹವಣಿಕೆಯಲ್ಲಿದೆ.

2013ರಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ರಾಮನಗರದಲ್ಲಿ ಎರಡು ಸ್ಥಾನ ಪಡೆದಿದ್ದ ಬಿಜೆಪಿ ಈ ಬಾರಿ ಈ ಸಂಖ್ಯೆಯನ್ನು 15ಕ್ಕೆ ಹೆಚ್ಚಿಸಿಕೊಂಡು 31 ಸದಸ್ಯ ಬಲದ ನಗರಸಭೆಯಲ್ಲಿ ಪ್ರಾಬಲ್ಯ ಹೆಚ್ಚಿಸಿಕೊಳ್ಳಬೇಕೆನ್ನುವ ಲೆಕ್ಕಾಚಾರದಲ್ಲಿದೆ. ಅತ್ತ ಚನ್ನಪಟ್ಟಣದಲ್ಲಿ ನಗರಸಭೆಯನ್ನು ಬಿಜೆಪಿ ತೆಕ್ಕೆಗೆ ಪಡೆದುಕೊಳ್ಳುವ ಮೂಲಕ ಗ್ರಾಮ ಪಂಚಾಯಿತಿಯಲ್ಲಿ ಕಳೆದುಕೊಂಡದ್ದನ್ನು ನಗರಸಭೆಯಲ್ಲಿ ಗಳಿಸುವ ಲೆಕ್ಕಾಚಾರ ಸಚಿವ ಸಿ.ಪಿ.ಯೋಗೇಶ್ವರ್ ತಲೆಯಲ್ಲಿ ಇದೆ.

ಕಾಂಗ್ರೆಸ್ ನಡೆ ನಿಗೂಢ : ಜೆಡಿಎಸ್, ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿವೆಯಾದರೂ ಸ್ಥಳೀಯ ಸಂಸ್ಥೆ ಚುನಾವಣೆ ಸಂಬಂಧ ಕಾಂಗ್ರೆಸ್ ನಡೆ ನಿಗೂಢವಾಗಿಯೇ ಇದೆ. ಇದುವರೆಗೂ ತನ್ನ ನಡೆ ಬಗ್ಗೆ ಕಾಂಗ್ರೆಸ್ ಎಲ್ಲಿಯೂ ಬಹಿರಂಗವಾಗಿ ಹೇಳಿಕೊಳ್ಳದಿರುವುದೂ ಅಚ್ಚರಿಗೆ ಕಾರಣವಾಗಿದೆ. ಆದರೆ ಇದೀಗ ಚುನಾವಣೆ ೋಷಣೆಯಾಗಿರುವುದು ಕಾಂಗ್ರೆಸ್‌ನಲ್ಲೂ ಚಟುವಟಿಕೆ ಗರಿಗೆದರಿದೆ.

ಸಾರ್ವಜನಿಕರ ಸಂತಸ : ಸ್ಥಳೀಯ ಸಂಸ್ಥೆಗಳಿಗೆ ಚುನಾಯಿತ ಜನ ಪ್ರತಿನಿಧಿಗಳು ಇಲ್ಲದೇ ಇರುವುದು ಸಾರ್ವಜನಿಕರಿಗೆ ಕಷ್ಟವಾಗಿದೆ. ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ನಗರಸಭೆಗಳಿಗೆ ಹೋದರೂ ಅಲ್ಲಿ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ, ಹಿಂದಿನ ಜನಪ್ರತಿನಿಧಿಗಳಿಗೆ ಹೇಳಿದರೂ ಕೆಲಸವಾಗುತ್ತಿಲ್ಲ ಎನ್ನುವ ದೂರುಗಳು ವ್ಯಾಪಕವಾಗಿದ್ದವು. ಆದರೆ ಇದೀಗ ಜನಪ್ರತಿನಿಧಿಗಳ ಆಯ್ಕೆಗೆ ಚುನಾವಣಾ ಆಯೋಗ ಮುಂದಾಗಿರುವುದು ಸಾರ್ವಜನಿಕವಾಗಿ ಸಂತಸಕ್ಕೆ ಕಾರಣವಾಗಿದೆ.

ಜೆಡಿಎಸ್‌ನಲ್ಲಿ ಬಿರುಸು : ನಗರಸಭೆ ಚುನಾವಣೆ ದಿನಾಂಕ ೋಷಣೆ ವಾಸನೆ ಪಡೆದಿದ್ದ ಜೆಡಿಎಸ್ ಈಗಾಗಲೇ ಹಲವಾರು ಸುತ್ತಿನ ಮಾತುಕತೆ ಹೊರತಾಗಿಯೂ ಕಳೆದ ಎರಡು ದಿನಗಳ ಹಿಂದೆ ಮತ್ತೊಮ್ಮೆ ಸ್ಥಳೀಯ ಮುಖಂಡರ ಸಭೆ ನಡೆಸಿತ್ತು. ಬಿಡದಿ ಕೇತಿಗಾನಹಳ್ಳಿಯ ತೋಟದ ಮನೆಯಲ್ಲಿ ಬೀಡುಬಿಟ್ಟಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಆಕಾಂಕ್ಷಿಗಳು, ಹಿಂದಿನ ಅವಧಿಯ ಸದಸ್ಯರ ಸಭೆಗಳನ್ನು ವಾರ್ಡ್‌ವಾರು ನಡೆಸುವ ಮೂಲಕ ವಾರ್ಡ್‌ನಲ್ಲಿ ಪಕ್ಷದ ಪರಿಸ್ಥಿತಿ ಹಾಗೂ ಯಾರನ್ನು ಕಣಕ್ಕೆ ಇಳಿಸಿದರೆ ಗೆಲುವು ಸಾಧ್ಯ ಎನ್ನುವ ಬಗ್ಗೆ ಚರ್ಚೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net