

ತುಮಕೂರು: ಪರಸ್ಪರ ಸಂಸ್ಕೃತಿ ಪರಿಚಯಿಸಿಕೊಳ್ಳಲು ಎಬಿವಿಪಿ ಆಯೋಜಿಸಿರುವ ರಾಷ್ಟ್ರೀಯ ಏಕಾತ್ಮತಾ ಯಾತ್ರೆ ಪೂರಕವಾಗಿದೆ ಎಂದು ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ವಿವಿಯಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಏಕಾತ್ಮತಾ ಯಾತ್ರೆ-2023ರ ವಿದ್ಯಾರ್ಥಿಗಳ ಅಂತಾರಾಜ್ಯ ಬಾಂಧವ್ಯದ ಅನುಭವ (ಎಸ್‌ಇಐಎಲ್), ಕಾರ್ಯಕ್ರಮದಲ್ಲಿ ಮಾತನಾಡಿದರು.
ಈಶಾನ್ಯದ ಏಳು ರಾಜ್ಯಗಳ ವಿದ್ಯಾರ್ಥಿ ಪ್ರತಿನಿಧಿಗಳು ಮತ್ತು ಗಣ್ಯರನ್ನು ತುಮಕೂರು ವಿವಿ ಆತ್ಮೀಯವಾಗಿ ಸ್ವಾಗತಿಸುತ್ತಿದೆ, ವೈವಿಧ್ಯತೆಯ ನಡುವೆಯೂ ಏಕತೆ ಮತ್ತು ಸಾಮರಸ್ಯದಿಂದ ಕೂಡಿ ಬಾಳುತ್ತಿರುವುದು ಭಾರತೀಯರೆಲ್ಲರಿಗೂ ಹೆಮ್ಮೆ ಎಂದರು.
ಉದ್ಯಮಿ ಎಸ್.ಪಿ.ಚಿದಾನಂದ್ ಮಾತನಾಡಿ, ಯಾವುದೇ ಜಾತಿ-ಧರ್ಮವಿರಲಿ, ಭಾರತೀಯರಾದ ನಾವೆಲ್ಲರೂ ಒಂದು ಎನ್ನುವ ತತ್ವ ಸಿದ್ಧಾಂತವನ್ನು ರಾಷ್ಟ್ರೀಯ ಏಕಾತ್ಮತಾ ಯಾತ್ರೆಯು ಹೊಂದಿದೆ. ಸ್ವಯಂ ಉದ್ಯೋಗದ ಮೂಲಕ ವಿದ್ಯಾರ್ಥಿಗಳೆಲ್ಲರೂ ಸಬಲರಾಗಿ ಹೊರಹೊಮ್ಮಬೇಕು ಎಂದರು.
ಮೇಘಾಲಯದ ಎಬಿವಿಪಿ ಪ್ರತಿನಿಧಿ ಕಮಲೇಶ್ ಸಿಂಗ್ ಮಾತನಾಡಿ, ತುಮಕೂರಿನ ಸಂಸ್ಕೃತಿ ಮತ್ತು ಆಚರಣೆಗಳು ಬಹಳಷ್ಟು ವೈಶಿಷ್ಟ್ಯತೆ ಮತ್ತು ಸಿರಿಯಿಂದ ಕೂಡಿ ಸಮೃದ್ಧವಾಗಿವೆ ಎಂದರು. ತಿಪಟೂರಿನ ವೈದ್ಯ ಡಾ.ಶ್ರೀಧರ್ ಮಾತನಾಡಿ, ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳು ಮನೆಗಳಲ್ಲಿ ವಾಸ್ತವ್ಯ ಹೂಡಿ ಮನೆ ಮಕ್ಕಳಂತೆ ಬಾಳುವ ಈ ವಿಶೇಷ ಕಾರ್ಯಕ್ರಮವು ಏಕತೆ ಮತ್ತು ಭಾರತೀಯತೆಯನ್ನು ಪ್ರತಿನಿಧಿಸುತ್ತದೆ ಎಂದರು.
ಕೈಗಾರಿಕೋದ್ಯಮಿ ಆರ್.ಎಲ್.ರಮೇಶ್‌ಬಾಬು ಮಾತನಾಡಿ, ಪ್ರತಿಯೊಬ್ಬರಿಗೂ ದೊಡ್ಡ ಆಲೋಚನೆ, ಬಲಿಷ್ಠ ಗುರಿ ಇರಬೇಕು. ಸರ್ವೇ ಜನಃ ಸುಖಿನೋಭವಂತು ಎನ್ನುವ ಮಾತನ್ನು ನಿತ್ಯವೂ ಸತ್ಯವಾಗಿಸುವತ್ತ ನಮ್ಮ ಚಿತ್ತವಿರಬೇಕು ಎಂದರು.