

ಬೆಂಗಳೂರು: ರಸ್ತೆಬದಿ ನಿಂತಿದ್ದ ನೇಪಾಳಿಗಳ ಮೇಲೆ ಹಲ್ಲೆ ನಡೆಸಿ ಸುಲಿಗೆ ಮಾಡಿ ಓರ್ವನ ಕೊಲೆ ಮಾಡಿದ್ದ ಎಂಟು ಆರೋಪಿಗಳನ್ನು ಆರ್.ಎಂ.ಸಿ. ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.
ದೊಡ್ಡಬಿದರಕಲ್ಲು ಸುತ್ತಮುತ್ತಲ ನಿವಾಸಿಗಳಾದ ಟಿ. ಚಂದ್ರು(23),ಸಚಿನ್ (19), ಕಿರಣ್‌ಕುಮಾರ್ (19), ನಿಖಿಲ್ (21), ಎಚ್. ಮುನೇಶ್ (22), ಜೀವನ್ (19), ಕಾರ್ತಿಕ್ (19) ಮತ್ತು ಟಿ.ಪಿ. ಮದನ್ (20) ಬಂಧಿತರು. ಆರೋಪಿಗಳಿಂದ 8 ಮೊಬೈಲ್, 5,200 ರೂ., ಗೂಡ್ಸ್ ವಾಹನ ಜಪ್ತಿ ಮಾಡಲಾಗಿದೆ. ನೇಪಾಳ ಮೂಲದ ಬಹದೂರ್, ವಿಜಯ್ ಮತ್ತು ಅನಿಲ್ ಬೋರಾ(32) ಎಂಬುವರ ಮೇಲೆ ಹಲ್ಲೆ ನಡೆಸಿ ಸುಲಿಗೆ ಮಾಡಿದ್ದರು. ಗಾಯಾಳು ಅನಿಲ್ ಬೋರಾ ಎಂಬಾತ ಅಸುನೀಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೇಪಾಳ ಮೂಲದ ಬಹದೂರ್, ವಿಜಯ್ ಮತ್ತು ಅನಿಲ್ ನೌಕರಿ ಅರಸಿಕೊಂಡು ಬೆಂಗಳೂರಿಗೆ ಬಂದು ಶಾಂತಿನಗರ ಸಮೀಪದಲ್ಲಿ ನೆಲೆಸಿದ್ದರು. ಶ್ರೀರಾಂಪುರದಲ್ಲಿ ಗಾಜಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ನವೆಂಬರ್ 13ರ ಬೆಳಗಿನ ಜಾವ 3 ಗಂಟೆಯಲ್ಲಿ ಊಟ ಮಾಡಿಕೊಂಡು ಮನೆಗೆ ವಾಪಸ್ ಹೋಗಲು ನಡೆದುಕೊಂಡು ಮೂವರು ಸ್ನೇಹಿತರು ತುಮಕೂರು ರಸ್ತೆ ಎಪಿಎಸ್‌ಸಿ ಯಾರ್ಡ್ 1ನೇ ಗೇಟ್ ರಸ್ತೆಯ ಕಾಶಿವಿಶ್ವನಾಥ ದೇವಸ್ಥಾನ ಸಮೀಪ ಬಂದಿದ್ದರು. ಅಲ್ಲಿಂದ ಕ್ಯಾಬ್ ಬುಕ್ ಮಾಡಿಕೊಂಡು ಕಾರು ಬರುವುದನ್ನು ಕಾಯುತ್ತಿದ್ದರು. ಅಷ್ಟೊತ್ತಿಗೆ ಕೆಟಿಎಂ ಬೈಕ್ ಮತ್ತು ಗೂಡ್ಸ್ ವಾಹನದಲ್ಲಿ ಪಟಾಕಿ ತರಲು ಹೋಗುತ್ತಿದ್ದ 8 ಜನ ಸ್ನೇಹಿತರು, ಏಕಾಏಕಿ ನಿಲ್ಲಿಸಿ ನೇಪಾಳಿ ಯುವಕರ ಮೇಲೆ ಮಾರಕಾಸಗಳಿಂದ ಹಲ್ಲೆ ನಡೆಸಿ 2 ಮೊಬೈಲ್ ಮತ್ತು 5,200 ರೂ. ನಗದು ದೋಚಿದ್ದರು. ಅನಿಲ್ ತಲೆಗೆ ಗಂಭೀರ ಗಾಯವಾಗಿತ್ತು.
ತಕ್ಷಣ ಸ್ನೇಹಿತರೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ನವೆಂಬರ್ 22ರ ಮಧ್ಯಾಹ್ನ ಚಿಕಿತ್ಸೆ ಲಿಸದೆ ಅನಿಲ್ ಅಸುನೀಗಿದ್ದಾನೆ. ಈ ಸಂಬಂಧ ಗಾಯಾಳು ಕೊಟ್ಟ ದೂರಿನ ಮೇರೆಗೆ ತನಿಖೆ ಕೈಗೊಂಡ ಇನ್‌ಸ್ಪೆಕ್ಟರ್ ಪಿ.ಸುರೇಶ್ ನೇತೃತ್ವದ ತಂಡ ಕೃತ್ಯ ನಡೆದ ಸ್ಥಳದ ಸುತ್ತಮುತ್ತಲ ಸಿಸಿ ಕ್ಯಾಮರಾ ಮತ್ತು ಮೊಬೈಲ್ ಸಿಗ್ನಲ್‌ಗಳ ಆಧಾರದ ಮೇಲೆ ಆರೋಪಿಗಳಿಗೆ ಬಲೆಬೀಸಿದ್ದರು. ಮೊದಲು ಐವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮತ್ತೆ ಮೂವರು ಸೆರೆಯಾಗಿದ್ದಾರೆ. ಬಂಧಿತರ ವಿರುದ್ಧ ದರೋಡೆ ಪ್ರಕರಣದ ಜೊತೆಗೆ ಇದೀಗ ಕೊಲೆ ಪ್ರಕರಣ ಸಹ ದಾಖಲು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.