ಈದುಲ್ ಫಿತ್ರ್: ಉಪವಾಸಿಗನಿಗೆ ದೇವನ ಉಡುಗೊರೆ

Eid
Published on
ಮುಸ್ಲಿಮರಿಗೆ ಪವಿತ್ರವಾದ ಮಾಸ ರಂಜಾನ್. ಈ ಒಂದು ತಿಂಗಳು ಮುಂಜಾನೆಯಿಂದ ಸೂರ್ಯಾಸ್ತದತನಕ ಹನಿ ನೀರನ್ನೂ ಸೇವಿಸದೆ ಅನ್ನಾಹಾರ ಪಾನೀಯವನ್ನು ತೊರೆದು ಉಪವಾಸ ಕೈಗೊಳ್ಳಲಾಗುತ್ತದೆ. ಬಡವರು, ಅನಾಥರ ನೋವು, ಸಂಕಷ್ಟ ಅರಿತು ಅನುಕಂಪದಿಂದ ವರ್ತಿಸಬೇಕೆಂಬ ಸದುದ್ದೇಶ ಇದರಲ್ಲಿದೆ. ಈದುಲ್ ಫಿತ್› ಹಬ್ಬದ ಸಂದರ್ಭದಲ್ಲಿ ಪ್ರತಿಯೊಬ್ಬರು ದಾನ ಕಾರ್ಯ ಕೈಗೊಳ್ಳುವುದು ಕೂಡ ಕಡ್ಡಾಯವಾಗಿದೆ.
| ಸಲೀಮ್ ಬೋಳಂಗಡಿ, ಮಂಗಳೂರು

ರಂಜಾನಿನಲ್ಲಿ ಒಂದು ತಿಂಗಳ ಕಾಲ ಮುಂಜಾನೆಯಿಂದ ಸೂರ್ಯಾಸ್ತದ ತನಕ ಹನಿ ನೀರನ್ನೂ ಸೇವಿಸದೆ ಅನ್ನಾಹಾರ ಪಾನೀಯವನ್ನು ತೊರೆದು ದೇವನ ಆದೇಶ ಪಾಲಿಸಿದ ಉಪವಾಸಿಗರಿಗಾಗಿ ದೇವನು ಉಡುಗೊರೆಯ ರೂಪದಲ್ಲಿ ನೀಡಿದ ಈದುಲ್ ಫಿತ್ರ್ ಹಬ್ಬವನ್ನು ಮುಸ್ಲಿಮರು ಆಚರಿಸುತ್ತಾರೆ. ಈ ಬಾರಿಯ ರಂಜಾನ್ ಮಾಸವು ಬಿಸಿಲ ಧಗೆಯಲ್ಲಿಯೇ ಹಾದು ಹೋಯಿತು. ಈ ಹಸಿವು-ದಾಹ ಅನುಭವಿಸುವುದರಲ್ಲಿ ಧಾರಾಳ ಸಂದೇಶವಿದೆ. ಬಡವನ ಹಸಿವನ್ನು ಸ್ವತಃ ಅನುಭವಿಸುವ ವಿಶೇಷ ತರಬೇತಿಯನ್ನು ಇದು ನೀಡುತ್ತದೆ. ಆ ಮೂಲಕ ಬಡ ನಿರ್ಗತಿಕರ, ಅನಾಥರ ನೋವು, ಸಂಕಷ್ಟ ಅರಿತು ಅವರಲ್ಲಿ ಸಹಾನುಭೂತಿ ಅನುಕಂಪ ತೋರಬೇಕೆಂಬ ಭಾವ ಉಪವಾಸಿಗನ ಮನದಲ್ಲಿ ಸುಳಿದಾಡುತ್ತದೆ. ಅದನ್ನು ಬದುಕಿನಲ್ಲಿ ಸ್ಥಿರವಾಗಿರಿಸಲು ಆತ ಶ್ರಮಿಸಬೇಕಾಗುತ್ತದೆ. ಇಂತಹ ಒಂದು ವಿಶೇಷ ತರಬೇತಿಗೆ ದೇವನು ವ್ಯವಸ್ಥೆ ಮಾಡಿದ್ದಾನೆ ಎನ್ನಬಹುದು. ಜನರಲ್ಲಿ ಸಹನೆಯ ಪಾಠವನ್ನು ಇದು ಕಲಿಸುತ್ತದೆ. ಹಗಲು ಹೊತ್ತಿನಲ್ಲಿ ಕಣ್ಣ ಮುಂದೆ ಅನ್ನಾಹಾರವಿದ್ದರೂ ದೇವನ ಮೇಲಿನ ಭಯದಿಂದ ಅದನ್ನು ಸಂಪೂರ್ಣ ತೊರೆಯುತ್ತಾರೆ. ರಾತ್ರಿ ಹೊತ್ತಿನಲ್ಲಿ ವಿಶೇಷ ರೀತಿಯ ಪ್ರಾರ್ಥನೆಗಳಲ್ಲಿ ನಿರತರಾಗುತ್ತಾರೆ. ಈ ಪ್ರಾರ್ಥನೆಗೆ ‘ತರಾವೀಹ್’ ಎನ್ನುತ್ತಾರೆ.

ರಂಜಾನ್ ತಿಂಗಳಲ್ಲಿ ಅಲ್ಲಾಹನು ಅನೇಕ ರೀತಿಯ ಪುಣ್ಯಗಳ ಪ್ರತಿಫಲದ ವಾಗ್ದಾನ ನೀಡಿರುತ್ತಾನೆ. ಇದರಿಂದ ಬದುಕಿಗೆ ಹೊಸ ಮೌಲ್ಯ ದೊರೆಯುತ್ತದೆ. ಹೀಗೆ ಈ ತಿಂಗಳಲ್ಲಿ ಪುಣ್ಯ ಗಳಿಸಲು ಮುಸ್ಲಿಮರು ಹಾತೊರೆಯುತ್ತಾರೆ. ವಿಪರೀತ ದಾನ ಧರ್ಮಗಳಲ್ಲಿ ನಿರತರಾಗುತ್ತಾರೆ. ಹೀಗೆ ಹಾದು ಹೋದಂತಹ ರಂಜಾನ್ ತಿಂಗಳ ಮುಕ್ತಾಯ ಶವ್ವಾಲ್ ತಿಂಗಳ ಬಾಲ ಚಂದ್ರೋದಯವಾದೊಡನೆ ಮುಕ್ತಾಯವಾಗುತ್ತದೆ. ರಂಜಾನ್​ನ ವಿದಾಯದೊಂದಿಗೆ ಈದುಲ್ ಫಿತ್ರ್ ಹಬ್ಬದ ಸಂಭ್ರಮ ಪ್ರಾರಂಭವಾಗುತ್ತದೆ. ಮನೆ ಮನಗಳಲ್ಲಿ ಹಬ್ಬದ ವಾತಾವರಣ ನಿರ್ವಣವಾಗುತ್ತದೆ. ಮಕ್ಕಳು ಮದರಂಗಿ ಹಚ್ಚುವಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಮನೆ ಮಹಿಳೆಯರು ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಲು ಪ್ರಾರಂಭಿಸುತ್ತಾರೆ. ಹೀಗೆ ಹಬ್ಬದ ಸಂಭ್ರಮ ಅಲ್ಲಿ ಮನೆ ಮಾಡುತ್ತದೆ.

ಈ ಹಬ್ಬದ ವಿಶೇಷತೆಯೆಂದರೆ ಫಿತ್ರ್ ಝುಕಾತ್ ಆಗಿದೆ. ಫಿತ್ರ್ ಝುಕಾತ್ ಎಂಬುದು ಬಡವನಿರಲಿ ಬಲ್ಲಿದನಿರಲಿ ಪ್ರತಿ ಮುಸ್ಲಿಮರಿಗೂ ಕಡ್ಡಾಯವಾಗಿದೆ. ಶವ್ವಾಲ್ ನವಚಂದ್ರೋದಯದ ಬಳಿಕ ಮರುದಿನ ಈದ್ ನಮಾಝå್ಗಿಂತ ಮುಂಚಿತವಾಗಿ ಈ ದಾನ ಮಾಡಬೇಕು. ಇದರ ಉದ್ದೇಶ ಯಾವ ಮುಸ್ಲಿಮರೂ ಹಬ್ಬದ ಸಂಭ್ರಮದಿಂದ ವಂಚಿತನಾಗಬಾರದು ಎಂದಾಗಿದೆ. ಫಿತ್ರ್ ಝುಕಾತ್ ಎಂದರೆ ಎರಡೂವರೆ ಕಿಲೋಗ್ರಾಮ್ಷ್ಟು ಆಯಾ ಪ್ರದೇಶದ ಪ್ರಮುಖ ಆಹಾರ ಧಾನ್ಯವನ್ನು ದಾನವಾಗಿ ನೀಡಬೇಕು. ಇದರಲ್ಲಿ ಅಕ್ಕಿ, ಬೇಳೆ, ಗೋಧಿ ಇತ್ಯಾದಿ ಯಾವುದಾದರೊಂದು ಆಹಾರಧಾನ್ಯವನ್ನು ನೀಡಬಹುದು. ಅದು ತನ್ನ ದೈನಂದಿನ ಖರ್ಚಿನಿಂದ ಉಳಿದ ಮೊತ್ತದಿಂದ ನೀಡುವುದು ಪ್ರತಿಯೊಬ್ಬನಿಗೂ ಕಡ್ಡಾಯವಾಗಿದೆ. ಗಂಡಿರಲಿ ಹೆಣ್ಣಿರಲಿ ಆಗ ಹಸುಗೂಸಾದರೂ ಸರಿ ಅದು ಕಡ್ಡಾಯವಾಗಿದೆ. ಆಯಾ ಪೋಷಕರು ಅದನ್ನು ನೀಡಬೇಕು. ಬಡವರ ಮನೆಯನ್ನು ಹುಡುಕಿ ಫಿತ್ರ್ ಝುಕಾತ್ ಹಂಚುತ್ತಾರೆ. ಇದು ಈದುಲ್ ಫಿತ್ರ್ ಹಬ್ಬದ ವಿಶೇಷತೆಯಾಗಿದೆ. ಇದು ಉಪವಾಸದ ಸಂದರ್ಭದಲ್ಲಿ ಸಂಭವಿಸಿರಬಹುದಾದ ನ್ಯೂನತೆಗಳ ನಿವಾರಣೆ ಮತ್ತು ಅಂದು ಯಾರೂ ಹಸಿವಿನಿಂದ ಬಳಲಬಾರದು ಎಂಬ ಎರಡು ಉದ್ದೇಶದಿಂದ ನಿಶ್ಚಯಿಸಿದ ದಾನವಾಗಿದೆ, ಸಾಮರ್ಥ್ಯವಿದ್ದೂ ಈ (ಫಿತ್ರ್ ಝುಕಾತ್) ದಾನ ಮಾಡದೆ ಇದ್ದರೆ ಅವನಿಗೆ ಈ ಹಬ್ಬ ಆಚರಿಸಲು ನೈತಿಕ ಹಕ್ಕು ಇರುವುದಿಲ್ಲ. ಸಾಲದ ನೆಪ ಹೇಳಿ ಜಾರಿಕೊಳ್ಳುವಂತೆಯೂ ಇಲ್ಲ. ಇದಕ್ಕೆ ಇಸ್ಲಾಮ್ ಧರ್ಮದಲ್ಲಿ ಅಷ್ಟು ಪ್ರಾಧಾನ್ಯತೆ ನೀಡಲಾಗಿದೆ. ಈ ಹಬ್ಬಕ್ಕೆ ಈದುಲ್ ಫಿತ್ರ್ ಎಂದು ಅದೇ ಹೆಸರನ್ನು ನೀಡಲಾಗಿದೆ.

ಮುಂಜಾನೆ ಎದ್ದು ಸ್ನಾನ ಮುಗಿಸಿ ಸುಗಂಧ ಪೂಸಿ ಹೊಸ ಬಟ್ಟೆ ಧರಿಸಿ ಈದ್ಗಾಹ್​ಗೆ ಪ್ರಾರ್ಥನೆಗೆ ತೆರಳುತ್ತಾರೆ. ಈದ್ ನಮಾಝå್ ನಿರ್ವಹಿಸಿ ನಂತರ ಖತೀಬರಿಂದ ಪ್ರವಚನ ಆಲಿಸುತ್ತಾರೆ, ಅಲ್ಲಿ ಸಹನೆ ಸದುಪದೇಶದ ಮೂಲಕ ಹಬ್ಬದ ಮಹತ್ವವನ್ನು ಗುರುಗಳು ಸಾರುತ್ತಾರೆ. ನಂತರ ಅಲ್ಲಿಂದ ತೆರಳುವಾಗ ಪರಸ್ಪರ ಆಲಂಗಿಸಿ ಶುಭ ಹಾರೈಸುತ್ತಾರೆ. ಸಾರ್ವತ್ರಿಕವಾಗಿ ಸ್ನೇಹ ಪ್ರೀತಿ ಭಾವೈಕ್ಯದ ಸಂದೇಶವನ್ನು ಈದ್ ನೀಡುತ್ತದೆ. ತಮ್ಮಲ್ಲಿ ಏನೇ ಮನಸ್ತಾಪಗಳಿದ್ದರೂ ಅವೆಲ್ಲವನ್ನೂ ಬದಿಗಿಟ್ಟು ಪರಸ್ಪರ ಕ್ಷಮಿಸಿದರೆ ಮಾತ್ರ ಈದುಲ್ ಫಿತ್ರ್ ಹಬ್ಬಕ್ಕೆ ಒಂದು ಹೊಸ ಅರ್ಥ ಬರುತ್ತದೆ. ನಂತರ ಆಪ್ತೇಷ್ಟ ಬಂಧುಗಳ ಮನೆಗೆ ಭೇಟಿ ನೀಡಿ ಪರಸ್ಪರ ಶುಭ ಹಾರೈಸುತ್ತಾರೆ. ವಿವಿಧ ಬಗೆಯ ಆಹಾರ ಖಾದ್ಯಗಳನ್ನು ತಯಾರಿಸಿ ಈ ಹಬ್ಬದ ಸವಿ ಅನುಭವಿಸುತ್ತಾರೆ. ನೆರೆಹೊರೆಯ ಸಂಬಂಧಿಕರು ಮತ್ತು ಸಹಧರ್ವಿುಯರಿಗೂ ಹಬ್ಬದ ಸವಿಯನ್ನು ಹಂಚುತ್ತಾರೆ. ಇದು ಪರಸ್ಪರ ಭ್ರಾತೃತ್ವ ಉಂಟು ಮಾಡುತ್ತದೆ. ಸಹಧರ್ವಿುಯರ ಜತೆ ಸೇರಿ ಸೌಹಾರ್ದ ಈದ್ ಕೂಟದಂತಹ ಕಾರ್ಯಕ್ರಮ ಸಂಘಟಿಸುತ್ತಾರೆ. ಇಂತಹ ಕೂಟಗಳನ್ನು ಸಹಧರ್ವಿುಯರ ಹಬ್ಬಗಳ ಸಂದರ್ಭಗಳಲ್ಲೂ ಸರ್ವ ಧರ್ವಿುಯರೂ ಸೇರಿ ಮಾಡಬೇಕು. ಅದು ಕಾಲದ ಬೇಡಿಕೆಯೂ ಆಗಿದೆ. ಒಂದು ತಿಂಗಳ ಕಾಲ ತಾನು ಪಡೆದ ಹಸಿವಿನ ತರಬೇತಿಯನ್ನು ಮನದಲ್ಲಿ ಕಾಪಾಡಿಕೊಂಡು ಸಮಾಜದ ಬಡ ಜನರ ಆಶೋತ್ತರಗಳಿಗೆ ಸ್ಪಂದಿಸುವ ಮೂಲಕ ಈದ್ ಹಬ್ಬವನ್ನು ಸಾರ್ಥಕಗೊಳಿಸಬೇಕು. ಆಗ ಒಂದು ತಿಂಗಳ ಕಾಲ ದೇವನಿಗಾಗಿ ಸಹಿಸಿದ ತ್ಯಾಗ ಪರಿಶ್ರಮಗಳಿಗೆ ಅರ್ಥ ಬರುತ್ತದೆ. ಪ್ರತಿಯೊಂದು ಹಬ್ಬ ಕೂಡ ಸಮಾಜದಲ್ಲಿ ಸೌಹಾರ್ದ, ಭಾವೈಕ್ಯತೆಗೆ ಪ್ರೇರಕವಾಗಬೇಕು.

(ಲೇಖಕರು ಸಾಹಿತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net