ಗುತ್ತಿಗೆ ಕಾರ್ಮಿಕರ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನ: ಸಚಿವ ಸಂತೋಷ ಲಾಡ್ | Regularize demand

Lad meeting
Published on

ಬೆಂಗಳೂರು: ವೇತನ ಪರಿಷ್ಕರಣೆ, ಸೇವೆ ಕಾಯಂ ಸೇರಿ ಶಾಖೋತ್ಪನ್ನ ಸ್ಥಾವರಗಳ ಗುತ್ತಿಗೆ ಕಾರ್ಮಿಕರ ಸಮಸ್ಯೆ ಬಗ್ಗೆ ಚರ್ಚಿಸಿ, ಸೂಕ್ತ ನಿರ್ಧಾರ ಕೈಗೊಳ್ಳಲು ಶೀಘ್ರವೇ ಮತ್ತೊಂದು ಸಭೆ ಕರೆಯುವುದಾಗಿ ಕಾರ್ಮಿಕ ಸಚಿವ ಸಂತೋಷಲಾಡ್ ಭರವಸೆ ನೀಡಿದರು.

ವಿಕಾಸಸೌಧದಲ್ಲಿ ಆರ್‌ಟಿಪಿಎಸ್, ವೈಟಿಪಿಎಸ್ ಹಾಗೂ ಬಿಟಿಪಿಎಸ್ ಗುತ್ತಿಗೆ ಕಾರ್ಮಿಕರ ಸಮಸ್ಯೆಗಳ ಕುರಿತು ಬುಧವಾರ ಜಂಟಿ ಸಭೆ ನಡೆಸಿದ ಅವರು, ಗುತ್ತಿಗೆ ಕಾರ್ಮಿಕ ಸಂಘಟನೆಗಳ ಪ್ರಮುಖರ ಜತೆ ಚರ್ಚಿಸಿದರು.

ಕರ್ನಾಟಕ ವಿದ್ಯುತ್ ನಿಗಮದಲ್ಲಿ ಒಟ್ಟು 7,500 ಗುತ್ತಿಗೆ ಕಾರ್ಮಿಕರಿದ್ದಾರೆ. ಈ ಪೈಕಿ ಬಿಟಿಪಿಎಸ್‌ನಲ್ಲಿ 2,300, ಆರ್‌ಟಿಪಿಎಸ್ ಹಾಗೂ ವೈಟಿಪಿಎಸ್ ಸೇರಿ 3,218 ಕಾರ್ಮಿಕರಿದ್ದಾರೆ. ಗುತ್ತಿಗೆ ಏಜನ್ಸಿಗಳು ವೇತನ ಪರಿಷ್ಕರಿಸುತ್ತಿಲ್ಲ. ಸೇವಾ ಅನುಭವದ ಪ್ರಕಾರ ವೇತನ ಹೆಚ್ಚಳ ಮಾಡುತ್ತಿಲ್ಲ. ಸುರಕ್ಷತೆ, ಆರೋಗ್ಯ ಸೌಲಭ್ಯಗಳನ್ನು ಸರಿಯಾಗಿ ನೀಡುತ್ತಿಲ್ಲವೆಂದು ಸಂಘಗಳು ದೂರಿದವು.

ಉಲ್ಲಂಘನೆ, ಹೊರೆ

ನಿರಂತರ ಕೆಲಸವಿರುವ ಸ್ಥಳಗಳಲ್ಲಿ ಗುತ್ತಿಗೆ ಕಾರ್ಮಿಕ ಪದ್ಧತಿ ಅನುಸರಣೆ ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ. ಅಲ್ಲದೆ, ಟೆಂಡರ್ ಕರೆದು ನೂರಾರು ಕೋಟಿ ರೂ. ಗುತ್ತಿಗೆ ಏಜನ್ಸಿಗೆ ಖರ್ಚು ಮಾಡುವ ಬದಲು ಸೇವೆ ಕಾಯಂ ಮಾಡಿದರೆ ಸರ್ಕಾರಕ್ಕೂ ಹೊರೆ ಕಡಿಮೆಯಾಗುತ್ತದೆ.

ಹೈಕೋರ್ಟ್ ಆದೇಶದಂತೆ ರಚಿತ ನ್ಯಾ.ಜಾನ್ ಮೈಕಲ್ ಕುನ್ಹಾ ಅವರು ಶಾಖೋತ್ಪನ್ನ ಸ್ಥಾವರಗಳಲ್ಲಿ ಗುತ್ತಿಗೆ ಕಾರ್ಮಿಕರ ಸ್ಥಿತಿಗತಿ ಅಧ್ಯಯನ ನಡೆಸಿ ವರದಿ ಸಲ್ಲಿಸಿದ್ದಾರೆ. ಇದನ್ನು ಪರಿಶೀಲಿಸಿ ಸರ್ಕಾರಕ್ಕೆ ಶಿಾರಸು ಜವಾಬ್ದಾರಿಯನ್ನು ಕಲಬುರಗಿ ವಿಭಾಗೀಯ ಕಾರ್ಮಿಕ ಆಯುಕ್ತರಿಗೆ ನೀಡಲಾಗಿದೆ.

ಆದಷ್ಟು ಬೇಗ ವರದಿ ತರಿಸಿಕೊಂಡು ಸೇವಾ ಭದ್ರತೆ, ಕಾಯ್ದೆ ಪ್ರಕಾರ ಸವಲತ್ತು, ವೇತನ ಪರಿಷ್ಕರಣೆ ಮಾಡಬೇಕು ಎಂದು ಕಾರ್ಮಿಕರ ಸಂಘಟನೆಗಳ ಮುಖಂಡರು ಸಭೆಯಲ್ಲಿ ಪ್ರಸ್ತಾಪಿಸಿದರು.

ವರದಿ ಸಲ್ಲಿಸಲು ಸೂಚನೆ

ನ್ಯಾ.ಕುನ್ಹಾ ವರದಿ ಕುರಿತು ಕಾರ್ಮಿಕ ಸಂಘಟನೆಗಳ ಜತೆಗೆ ಆ.5ರಂದು ಸಭೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಕಲಬುರಗಿ ವಿಭಾಗೀಯ ಆಯುಕ್ತರಿಗೆ ಸಚಿವ ಸಂತೋಷ್ ಲಾಡ್ ಸೂಚಿಸಿದ್ದಾರೆ.

ಇಂಧನ ಇಲಾಖೆ ಸಚಿವರು, ಉನ್ನತಾಧಿಕಾರಿಗಳ ಸಮಕ್ಷಮ ಮತ್ತೊಂದು ಸಭೆ ಶೀಘ್ರವೇ ಕರೆದು, ಇತಿಮಿತಿಯೊಳಗೆ ಬೇಡಿಕೆಗಳನ್ನು ಈಡೇರಿಸಲು ಪ್ರಮಾಣಿಕವಾಗಿ ಪ್ರಯತ್ನಿಸುವೆ ಎಂದು ಸಚಿವ ಸಂತೋಷ್ ಲಾಡ್ ಆಶ್ವಾಸನೆ ನೀಡಿದ್ದಾರೆ.

ಸೇವೆ ಕಾಯಂ, ವೇತನ ಪರಿಷ್ಕರಣೆ ಸೇರಿ ಹಲವು ಬೇಡಿಕೆಗಳಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸಾಧ್ಯವಾದಷ್ಟು ಬೇಗ ಈಡೇರಿಸಲಿದ್ದಾರೆ ಎಂದು ಎಚ್‌ಎಂಕೆಪಿ ಸಂಘಟನೆಯ ಜೆ.ವಿ.ಎಲ್.ರೆಡ್ಡಿ ಹಾಗೂ ಆರ್‌ಟಿಪಿಎಸ್ ಗುತ್ತಿಗೆ ಕಾರ್ಮಿಕರ ಮಹಾಸಂಘದ ಅಧ್ಯಕ್ಷ ಅಯ್ಯಣ್ಣ ಮಹಾಮನಿ ವಿಶ್ವಾಸ ವ್ಯಕ್ತಪಡಿಸಿದರು.

ಸಭೆಯಲ್ಲಿ ಇಲಾಖೆ ಪ್ರಧಾನ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ಆಯುಕ್ತ ಡಾ.ಎಚ್.ಎನ್.ಗೋಪಾಲಕೃಷ್ಣ, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಕಾರ್ಮಿಕರ ಸಂಘಟನೆಗಳ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net