

ತಿ.ನರಸೀಪುರ: ಪಟ್ಟಣದ ಹೊರವಲಯದಲ್ಲಿ ಜಿಲ್ಲಾಡಳಿತ ಮಂಜೂರು ಮಾಡಿರುವ ನಿವೇಶನದಲ್ಲಿ ಪರಿಶಿಷ್ಟ ಜಾತಿ ಅಲೆಮಾರಿ ಕೊರಚ ಸಮುದಾಯದ ಕುಟುಂಬಗಳು ವಾಸಿಸುತ್ತಿರುವ ಶಿವಪಾರ್ವತಿ ನಗರಕ್ಕೆ ಬುಧವಾರ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಗೂ ಕೊರಮ ಜನಾಂಗದ ಮುಖಂಡ ಜಯನಗರ ವೆಂಕಟೇಶ್ ಭೇಟಿ ನೀಡಿ ನಿವಾಸಿಗಳ ಸಮಸ್ಯೆ ಆಲಿಸಿದರು.
ದಲಿತ ಸಂಘರ್ಷ ಸಮಿತಿಯ ಹೋರಾಟದಿಂದ ನೂತನವಾಗಿ ನಿರ್ಮಾಣವಾಗುತ್ತಿರುವ ಬಡಾವಣೆಯಲ್ಲಿ ಯಾರೋ ಕಿಡಿಗೇಡಿಗಳು ರಾತ್ರಿ ವೇಳೆ ಕಲ್ಲುಗಳನ್ನು ತೂರಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ನಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಕುಡಿಯುವ ನೀರು ಇಲ್ಲದೆ ಪಕ್ಕದ ಪಂಪ್‌ಸೆಟ್ ಜಮೀನಿನವರು ನೀಡುವ ನೀರು ನಮ್ಮ ಉಸಿರು ಉಳಿಸಿದೆ. ರಸ್ತೆ, ಚರಂಡಿ, ಶೌಚಗೃಹಗಳು ಇನ್ನೂ ನಿರ್ಮಾಣಗೊಳ್ಳಬೇಕು ಎಂದು ನಿವಾಸಿಗಳು ಅಲವತ್ತುಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ವೆಂಕಟೇಶ್ ಸ್ಥಳದಲ್ಲಿಯೇ ಎಲ್ಲ ಬೀದಿಗಳಿಗೆ ಮತ್ತು ಪ್ರತಿ ಮನೆಗಳಿಗೆ ಸೋಲಾರ್ ದೀಪ ಮತ್ತು ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ವೈಯಕ್ತಿಕವಾಗಿ ನೀಡುವುದಾಗಿ ಭರವಸೆ ನೀಡಿದರು.
ಇನ್ನೆರಡು ದಿನಗಳಲ್ಲಿ ಬಡಾವಣೆಯಲ್ಲಿ ಸೋಲಾರ್ ವಿದ್ಯುತ್ ದೀಪ ಉರಿಯಲಿದೆ. ಉಳಿದಂತೆ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಸ್ಥಳೀಯ ಶಾಸಕರು ಮತ್ತು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ತ್ವರಿತವಾಗಿ ಸೌಲಭ್ಯ ಕಲ್ಪಿಸಲು ಮನವಿ ಮಾಡುವುದಾಗಿ ತಿಳಿಸಿದರು.
ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್, ಮುಖಂಡರಾದ ಬನ್ನಹಳ್ಳಿಹುಂಡಿ ಉಮೇಶ್, ಶಾಂತಕುಮಾರ್, ಸ್ಥಳೀಯ ನಿವಾಸಿಗಳಾದ ಚಿಕ್ಕಮಾರಪ್ಪ, ಪರಶುರಾಮ್, ಯಲ್ಲಪ್ಪ, ನಾಗರಾಜು ಹಾಗೂ ಇತರರು ಇದ್ದರು.