

ಶಿವಮೊಗ್ಗ: ಹೋರಾಟಕ್ಕೆ ಕೊಡುಗೆ ನೀಡಿದ 400 ಸ್ಥಳಗಳನ್ನು ಕೇಂದ್ರ ಸರ್ಕಾರ ಗುರುತಿಸಿದೆ. ಈ ಸ್ಥಳಗಳಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಕೇಂದ್ರ ಸರ್ಕಾರ ಗುರುತಿಸಿದ ಸ್ಥಳಗಳಲ್ಲಿ ಶಿಕಾರಿಪುರ ತಾಲೂಕು ಈಸೂರು ಕೂಡಾ ಒಂದು. ಇಲ್ಲಿ ಆ.14ರ ಮಧ್ಯಾಹ್ನ 2ಕ್ಕೆ ನಮ್ಮ ನಡಿಗೆ ಈಸೂರು ಕಡೆಗೆ ಎಂಬ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಈಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ, ಸಚಿವರಾದ ಆರಗ ಜ್ಞಾನೇಂದ್ರ, ಡಾ.ಸಿ.ಎನ್.ಅಶ್ವತ್ಥನಾರಾಯಣ, ಬಿ.ಎ.ಬಸವರಾಜ, ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಜಿಲ್ಲಾದ್ಯಂತ ಬೈಕ್ ರ‌್ಯಾಲಿ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಂದ ನಡಿಗೆ, ಈಸೂರಿನ ಹುತಾತ್ಮರ ಸ್ಮಾರಕಕ್ಕೆ ಪುಷ್ಪಾರ್ಚನೆ, ಈಸೂರು ಹೋರಾಟ ಕುರಿತು ರಂಗಾಯಣದಿಂದ ನಾಟಕ, ದೇಶಭಕ್ತಿ ಗೀತೆಗಳ ಗಾಯನ, ವಿದ್ಯಾರ್ಥಿಗಳಿಂದ ಯೋಗ ನೃತ್ಯ ಮುಂತಾದ ಕಾರ್ಯಕ್ರಮಗಳು ನಡೆಯಲಿದೆ ಎಂದು ಹೇಳಿದರು.
ಈಸೂರು ಕೇಂದ್ರ ಸರ್ಕಾರ ಗುರುತಿಸಿರುವ ವಿಶೇಷ ಸ್ಥಳಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ಈಸೂರು ಈಗಾಗಲೇ ಸಮಗ್ರ ಅಭಿವೃದ್ಧಿಯಾಗಿದೆ. ಸ್ಮಾರಕದ ಅಭಿವೃದ್ಧಿಗೆ ಸುಮಾರು ಆರು ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಹರ್ ಘರ್ ತಿರಂಗಾ ಅಭಿಯಾನ ಜಿಲ್ಲೆಯಲ್ಲಿ ಯಶಸ್ವಿಯಾಗುತ್ತಿದೆ. ನಾಲ್ಕು ಲಕ್ಷ ಮನೆಗಳಿಗೆ ರಾಷ್ಟ್ರಧ್ವಜ ವಿತರಣೆ ಮಾಡಲಾಗಿದೆ. ಎಲ್ಲೆಡೆ ಹರ್ಷದ ವಾತಾವರಣವಿದೆ. ರಾಜಕೀಯ ಪಕ್ಷವಾಗಿ ದೇಶದ ಒಳಿತಿಗೆ ಚಿಂತನೆ ಮಾಡುತ್ತಿರುವುದು ಬಿಜೆಪಿ. ಧ್ವಜವನ್ನು ಸಿದ್ಧಪಡಿಸಿದವರ ಶ್ರಮಕ್ಕೆ ಪೂರಕವಾಗಿ ಧ್ವಜಕ್ಕೆ ಅಲ್ಪ ಪ್ರಮಾಣದ ಹಣ ಪಡೆಯಲಾಗುತ್ತಿದೆ. ದೇಶಭಕ್ತಿ ಕಾರ್ಯಕ್ಕೆ ಶಕ್ತಿ ತುಂಬಬೇಕೇ ಹೊರತು ಟೀಕೆ ಸಲ್ಲದು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.