

ಕಾರ್ಗಲ್: ಸಂಸ್ಕೃತಿ ಹಾಗೂ ಸಂಸ್ಕಾರ ಕಲಿಸುವ ಶಿಕ್ಷಣ ಮಕ್ಕಳಿಗೆ ಅಗತ್ಯ ಎಂದು ಕೆಪಿಸಿ ಎಂಪ್ಲಾಯಿಸ್ ಯೂನಿಯನ್ ಕೇಂದ್ರ ಸಮಿತಿ ಅಧ್ಯಕ್ಷ ಕೆ.ವೀರೇಂದ್ರ ಗೌಡ ಹೇಳಿದರು.
ಕೃಷ್ಣ ಜನ್ಮಾಷ್ಟಮಿ ಮತ್ತು ಶಿಕ್ಷಕರ ದಿನಾಚರಣೆ ಪ್ರಯುಕ್ತ ಶರಾವತಿ ವಿದ್ಯಾಕೇಂದ್ರದಿಂದ ಏರ್ಪಡಿಸಿದ್ದ ಕೃಷ್ಣವೇಷ ಸ್ಪರ್ಧೆ ಮತ್ತು ಗುರುನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ಹಬ್ಬಗಳ ಜತೆಗೆ ಪರಂಪರೆ ಕುರಿತ ಕಾರ್ಯಕ್ರಮಗಳನ್ನು 37 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಸಂಸ್ಥೆ ಪ್ರಯತ್ನ ಶ್ಲಾಘನೀಯ ಎಂದು ತಿಳಿಸಿದರು.
60 ಮಕ್ಕಳು ಸ್ಪರ್ಧೆಯಲ್ಲಿ ಕೃಷ್ಣನ ವೇಷಭೂಷಣ ಧರಿಸಿದ್ದರು. ಮಕ್ಕಳಿಗೆ ಬಹುಮಾನದ ಜತೆಗೆ ನೆನಪಿನ ಕಾಣಿಕೆ ನೀಡಲಾಯಿತು. ಶಿಕ್ಷಕರ ದಿನಾಚರಣೆ ಪ್ರಯುಕ್ತ ವಿದ್ಯಾಕೇಂದ್ರದ ಮಾತಾಜಿಗಳಿಗೆ ಸನ್ಮಾನಿಸಲಾಯಿತು. ಕೆಪಿಸಿ ಕಾರ್ಯಪಾಲಕ ಅಭಿಯಂತ ರಂಗನಾಥ್, ತೀರ್ಪುಗಾರರಾಗಿ ಶ್ರೀ ಮಹಾಗಣಪತಿ ದೇವಾಲಯದ ಪ್ರಧಾನ ಅರ್ಚಕ ಮಂಜುನಾಥ್ ಭಟ್, ಶಿಲ್ಪಾ ಶಿವಾನಂದ್, ಮಮತಾ ರಾಜ್‌ಕುಮಾರ್ ಭಾಗವಹಿಸಿದ್ದರು.
ಶರಾವತಿ ವಿದ್ಯಾಕೇಂದ್ರ ಶಾಲಾ ಸಮಿತಿ ಪ್ರಮುಖರಾದ ನಾಗೇಂದ್ರ ರಾಯ್ಕರ್, ಪರಮಾತ್ಮ, ಎನ್.ಎನ್.ಶ್ರೀಧರ್ ಭಟ್, ಅಜಿತ್ ಜೈನ್, ಪ್ರಗತಿ ಪ್ರದೀಪ್, ಜ್ಯೋತಿ ನೇಮಿರಾಜ್, ಸೌಮ್ಯ ವಿಶ್ವನಾಥ್, ಶ್ವೇತಾ ರವೀಂದ್ರ, ಪ್ರಭಾ ರಮೇಶ್, ಶಾಲೆಯ ಮಾತಾಜಿಗಳು ಉಪಸ್ಥಿತರಿದ್ದರು.