ಸಂಬಂಧದ ವೌಲ್ಯ ತಿಳಿಸುವ ಶಿಕ್ಷಣ ಅಗತ್ಯ

bojegouda
ಚಿಕ್ಕಮಗಳೂರು ಹೊರವಲಯದ ಗ್ರೀನ್ ವ್ಯಾಲಿ ಇಂಟರ್‌ನ್ಯಾಷನಲ್ ಶಾಲಾ ಕಲೋತ್ಸವ ಕಾರ್ಯಕ್ರಮವನ್ನು ಎಂಎಲ್‌ಸಿ ಎಸ್.ಎಲ್.ಬೋಜೇಗೌಡ ಉದ್ಘಾಟಿಸಿದರು. ಬೆಳವಾಡಿ ಮಂಜುನಾಥ್, ವಿವೇಕಾನಂದ ಕನಲ್, ಜಯರಾಮರಾಜ ಅರಸ್, ಸಿದ್ದಲಿಂಗೇಶ್ವರ ಇತರರಿದ್ದರು.
Published on

ಚಿಕ್ಕಮಗಳೂರು: ಆಧುನೀಕರಣದ ಭರದಲ್ಲಿ ಸಂಸ್ಕಾರ ಮತ್ತು ಸಂಬಂಧದ ಶಿಕ್ಷಣವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಬೇಸರ ವ್ಯಕ್ತಪಡಿಸಿದರು.

ನಗರದ ಹೊರವಲಯದಲ್ಲಿರುವ ಗ್ರೀನ್ ವ್ಯಾಲಿ ಇಂಟರ್‌ನ್ಯಾಷನಲ್ ಶಾಲಾ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲ ಮಕ್ಕಳು ಖಾಸಗಿ ಶಾಲೆಗಳಲ್ಲಿ ವಿದ್ಯೆ ಕಲಿಯುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮಕ್ಕಳು ಈ ಹಿಂದೆ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದಂತಹ ಸಂಸ್ಕೃತಿ ಮತ್ತು ಸಂಬಂಧಗಳ ವೌಲ್ಯವನ್ನು ಕಲಿಯಲು ಸಾಧ್ಯವಾಗುತ್ತಿಲ್ಲ. ಪಾಲಕರು ಮಕ್ಕಳಿಗೆ ಸಂಸ್ಕಾರ ಹಾಗೂ ಸಂಬಂಧಗಳ ವೌಲ್ಯ ತಿಳಿಸಿಕೊಡುವ ಅನಿವಾರ್ಯವಿದೆ ಎಂದರು.
ಶಿಕ್ಷಕರಿಲ್ಲದೆ ಶಾಲೆಯಿಲ್ಲ, ಶಾಲೆ ಇಲ್ಲದೆ ಶಿಕ್ಷಣವಿಲ್ಲ ಎಂಬ ವ್ಯವಸ್ಥೆಯಲ್ಲಿ ಅಂದಿನ ಕಾಲದ ವಿದ್ಯಾಭ್ಯಾಸ ಪೂರ್ಣಗೊಳ್ಳುತ್ತಿತ್ತು. ಆದರೆ ಅಂದು ಎಲ್ಲರಲ್ಲೂ ಮಾನವೀಯ ವೌಲ್ಯಗಳು ಕರಗತವಾಗಿದ್ದವು. ಇಂದು ಉತ್ತಮ ಶಿಕ್ಷಕರಿದ್ದರೂ ಸಂಬಂಧಗಳನ್ನು ಗುರುತಿಸುವಲ್ಲಿ ಮತ್ತು ಉಳಿಸುವಲ್ಲಿ ಹಿಂದೆ ಉಳಿದಿದೆ. ಈಗ ಸೃಷ್ಟಿಯಾಗಿರುವ ಸಮಸ್ಯೆಗಳಿಗೆ ನಾವೇ ಪರಿಹಾರ ಹುಡುಕಿಕೊಳ್ಳಬೇಕಿದೆ ಎಂದು ಹೇಳಿದರು.
ಎನ್‌ಇಪಿ ಮತ್ತು ಎಸ್‌ಇಪಿ ಎಂಬ ಪಠ್ಯಾಧಾರಿತ ವಿಷಯಗಳು ಮುಖ್ಯವಲ್ಲ. ಪ್ರಸ್ತುತ ಪೀಳಿಗೆಯ ಮಕ್ಕಳಿಗೆ ವೌಲ್ಯಾಧಾರಿತ ಶಿಕ್ಷಣ, ಉತ್ತಮ ಸೌಕರ್ಯಗಳುಳ್ಳ ಶಾಲೆ, ಅಗತ್ಯ ಪರಿಕರಗಳು ಮತ್ತು ಅವುಗಳ ಸಮರ್ಪಕ ಪೂರೈಕೆ ಇವಷ್ಟೇ ವಿದ್ಯಾರ್ಥಿಗಳ ಉತ್ತಮ ಭವಿಷ್ಯವನ್ನು ರೂಪಿಸಬಲ್ಲವು ಎಂದರು.
ಸಾಹಿತಿ ಬೆಳವಾಡಿ ಮಂಜುನಾಥ್ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಾಲಕರ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಪಾಲಕರು ತಮ್ಮ ಪಾತ್ರವನ್ನು ಅರಿತು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮಕ್ಕಳ ಸಾಧನೆಗೆ ಹೆಚ್ಚಿನ ರೀತಿಯಲ್ಲಿ ಪೂರಕವಾಗಬೇಕು ಎಂದರು.
ತಮ್ಮ ಮಕ್ಕಳ ಭವಿಷ್ಯತ್ತಿನ ಕನಸನ್ನು ಕಾಣುವ ಪಾಲಕರು ಕೇವಲ ಕನಸನ್ನು ಕಾಣದೆ ತಮ್ಮ ಕನಸಿಗೆ ಪೂರಕವಾಗಿರುವ ವ್ಯಕ್ತಿಗಳ ಸಂಪರ್ಕವನ್ನು ತಮ್ಮ ಮಕ್ಕಳ ಜತೆ ಬೆಳೆಸಬೇಕು. ಈ ಮೂಲಕ ಮಕ್ಕಳ ಭವಿಷ್ಯತ್ತಿನ ಕನಸನ್ನು ಸಾಕಾರಗೊಳಿಸಬೇಕು ಎಂದು ಸಲಹೆ ನೀಡಿದರು.
ಕೆನರಾ ಬ್ಯಾಂಕ್ ವ್ಯವಸ್ಥಾಪಕ ವಿವೇಕಾನಂದ ಕನಲ್, ಸಿವಿಲ್ ಇಂಜಿನಿಯರ್ ಎಚ್.ಕೆ.ಜಯರಾಮರಾಜ ಅರಸ್, ಸಿಎ ಸಿದ್ದಲಿಂಗೇಶ್ವರ, ಶಾಲೆ ಆಡಳಿತ ವರ್ಗದ ಎಂ.ಕೆ.ಜಗದೀಶ್, ನವೀನ್, ವೀರೇಶ್, ರೇಖಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net