ಸಂಪಾದಕೀಯ|ಶೈಕ್ಷಣಿಕ ರಂಗದಲ್ಲಿ ಮಹತ್ವದ ಬದಲಾವಣೆ

education
Published on
ತಂತ್ರಜ್ಞಾನದ ಮೂಲಕ ಸುಧಾರಣೆಯ ಸ್ಪರ್ಶ ಬಹುತೇಕ ರಂಗಗಳಿಗೆ ಸಿಕ್ಕಿದೆ. ಶೈಕ್ಷಣಿಕ ರಂಗದಲ್ಲೂ ಹಂತಹಂತವಾಗಿ ಇದು ಸಾಧ್ಯವಾಗುತ್ತಿದೆಯಾದರೂ, ಉನ್ನತ ಶಿಕ್ಷಣ ವ್ಯವಸ್ಥೆ ಮಾತ್ರ ಮಹತ್ವದ ಸುಧಾರಣೆಗಳಿಂದ ದೂರವಿತ್ತು. ಈ ಕೊರತೆಯನ್ನು ನಿವಾರಿಸಲು ಮುಂದಡಿ ಇಟ್ಟಿರುವ ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೂ, ಅಧ್ಯಾಪಕರಿಗೂ ಅನುಕೂಲವಾಗುವಂಥ ಮತ್ತು ಅಪಸವ್ಯಗಳನ್ನು ನಿವಾರಿಸುವಂಥ ಸುಧಾರಣೆಗೆ ಮುಂದಾಗಿದೆ. ಮುಖ್ಯವಾಗಿ, ಸರ್ಕಾರಿ ಕಾಲೇಜುಗಳಲ್ಲಿ ಸಮರ್ಪಕ ಬೋಧನೆ ನಡೆಯುವುದಿಲ್ಲ. ಕೆಲ ಅಧ್ಯಾಪಕರು ವಾರದ ಎರಡು-ಮೂರು ದಿನ ಮಾತ್ರ ತರಗತಿ ತೆಗೆದುಕೊಳ್ಳುತ್ತಾರೆ. ಇದರಿಂದ ವಿದ್ಯಾರ್ಥಿಗಳು ವಿಷಯಗಳನ್ನು ಸರಿಯಾಗಿ ಗ್ರಹಿಸಲು ಆಗದೆ, ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುವಂತಾಗುತ್ತದೆ ಎಂಬ ದೂರುಗಳು ಇಂದು-ನಿನ್ನೆಯದೇನಲ್ಲ. ಆದರೆ, ಈ ಹಳೆ ಸಮಸ್ಯೆಗೆ ಮದ್ದೆರೆಯುವುದು ಹೇಗೆ? ಬೋಧನೆ, ಕಲಿಕೆ, ಅದರ ಪರಿಣಾಮ ಈ ಎಲ್ಲದರಲ್ಲಿ ಪಾರದರ್ಶಕ ವ್ಯವಸ್ಥೆಯನ್ನು ರೂಪಿಸುವುದು ಹೇಗೆ ಎಂಬ ಪ್ರಶ್ನೆಗೆ ಪರಿಹಾರಸೂತ್ರವನ್ನು ಸರ್ಕಾರ ಕಂಡುಕೊಂಡಿದೆ.

ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಹಾಗೂ ಉಪನ್ಯಾಸಕರಿಗೂ ಉತ್ತರದಾಯಿತ್ವ ನಿಗದಿ ಆಗುವ ‘ಕಲಿಕಾ ನಿರ್ವಹಣಾ ವ್ಯವಸ್ಥೆ’ (ಎಲ್​ಎಂಎಸ್)ಯನ್ನು ಶೀಘ್ರದಲ್ಲೇ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಉಪನ್ಯಾಸಕರ ಬೋಧನೆ ಹಾಗೂ ವಿದ್ಯಾರ್ಥಿಗಳಲ್ಲಿ ಕಲಿಕೆಯ ವ್ಯವಸ್ಥೆಯನ್ನು ಇಂದಿನ ಅಗತ್ಯಕ್ಕೆ ತಕ್ಕಂತೆ ಪರಿವರ್ತನೆ ಮಾಡುವುದು ಇದರ ಉದ್ದೇಶ. ರಾಜ್ಯದಲ್ಲಿ 10 ಸಾವಿರ ಕಾಲೇಜು ಅಧ್ಯಾಪಕರು ಹಾಗೂ 5 ಲಕ್ಷ ವಿದ್ಯಾರ್ಥಿಗಳಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಸಮಗ್ರ ಬದಲಾವಣೆಗೆ ಎಲ್​ಎಂಎಸ್ ಪೂರಕವಾಗಲಿದೆ ಎಂಬುದು ತಜ್ಞರ ಅಭಿಪ್ರಾಯ. ಎಲ್​ಎಂಎಸ್ ಪಠ್ಯಕ್ಕೆ ಸಂಬಂಧಿಸಿದ ವಿಡಿಯೋ, ಪಿಪಿಟಿ, ಅಭ್ಯಾಸಕ್ಕೆ ಅಗತ್ಯವಾದ ಬೋಧನಾ ವಸ್ತುಗಳು, ವಾರಕ್ಕೊಮ್ಮೆ ಪರೀಕ್ಷೆ ನಡೆಸಲು ಬೇಕಾದ ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿದೆ. ವಿದ್ಯಾರ್ಥಿ ಲಾಗಿನ್ ಆಗಿ ವಿಡಿಯೋ ಪಾಠಗಳನ್ನು ಕೇಳಬಹುದು. ಪಾಠಗಳನ್ನು ವಿಡಿಯೋ ಮಾಡಿ ಅಳವಡಿಸುವ ಅಧ್ಯಾಪಕರಿಗೆ ವಿದ್ಯಾರ್ಥಿಗಳೇ ರೇಟಿಂಗ್ ನೀಡಲಿರುವುದು ವಿಶೇಷ. ಈ ಮೂಲಕ ಅಧ್ಯಾಪಕರ ನಡುವೆ ಆರೋಗ್ಯಕರ ಸ್ಪರ್ಧೆ ಏರ್ಪಟ್ಟು, ಗುಣಮಟ್ಟ ಹೆಚ್ಚುವ ನಿರೀಕ್ಷೆ ಇದೆ.

ಅಲ್ಲದೆ, ಅಧ್ಯಾಪಕರು ಅವರ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ, ಹೊಸ ವ್ಯವಸ್ಥೆಗೆ ಬದಲಾಗಬೇಕಾಗುತ್ತದೆ. ಆರಂಭಿಕ ಹಂತದಲ್ಲಿ ಪದವಿ, ಇಂಜಿನಿಯರಿಂಗ್ ಹಾಗೂ ಡಿಪ್ಲೊಮಾಕ್ಕೆ ಎಲ್​ಎಂಎಸ್ ವ್ಯವಸ್ಥೆ ಬರಲಿದ್ದು, ಸಾಧಕ-ಬಾಧಕ ಪರಿಶೀಲನೆ ಮಾಡಿದ ನಂತರ ಸ್ನಾತಕೋತ್ತರಕ್ಕೂ ವಿಸ್ತರಿಸಲಾಗುತ್ತದೆ. ಆ ಮುನ್ನ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಏಕರೂಪ ಪಠ್ಯ ಬರುವುದು ಅವಶ್ಯ. ಅದೇನಿದ್ದರೂ, ಈ ಬಗೆಯ ಹೊಸ ಪ್ರಯೋಗ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವ ಯತ್ನಗಳು ಅನಿವಾರ್ಯವಾಗಿತ್ತು. ಯಾವುದೇ ತಾಂತ್ರಿಕ ತೊಡಕುಗಳು ಉದ್ಭವಿಸದಂತೆ, ಹೊಸ ಸಮಸ್ಯೆಗಳು ಸೃಷ್ಟಿಯಾಗದಂತೆ ಎಲ್​ಎಂಎಸ್​ನ್ನು ಸಮರ್ಪಕವಾಗಿ ಜಾರಿಗೆ ತರುವ ಹೊಣೆಗಾರಿಕೆ ಸರ್ಕಾರದ ಮೇಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net