ಸಮಾಜದ ಏಳಿಗೆಗೆ ಶಿಕ್ಷಣವೊಂದೇ ಅಸ್ತ್ರ

ediga sanga pratibha puraskara
ಶಿವಮೊಗ್ಗದಲ್ಲಿ ಆಯೋಜಿಸಿದ್ದ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಆರ್ಯ ಈಡಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಶ್ರೀಧರ್ ಆರ್. ಹುಲ್ತಿಕೊಪ್ಪ, ಡಾ. ಎಚ್.ಎಲ್.ಶಿವಾನಂದ, ಜಿ.ಮಂಜಪ್ಪ, ಪೂರ್ಣೇಶ್, ಪ್ರೊ. ಕಲ್ಲನ, ಸುರೇಶ್ ಬಾಳೆಗುಂಡಿ ಇತರರಿದ್ದರು.
Published on

ಶಿವಮೊಗ್ಗ: ವಿದ್ಯಾರ್ಥಿಗಳು ಸೌಲಭ್ಯಗಳನ್ನು ಸಮರ್ಥವಾಗಿ ಬಳಸಿಕೊಂಡು ಉನ್ನತ ಸ್ಥಾನಕ್ಕೆ ಹೋಗುವಂತೆ ಬೆಂಗಳೂರಿನ ಜೆಪಿ ನಾರಾಯಣಸ್ವಾಮಿ ಪ್ರತಿಷ್ಠಾನದ ಪ್ರಮುಖ ಡಾ. ಎಚ್.ಎಲ್.ಶಿವಾನಂದ ಹೇಳಿದರು.

ಆರ್ಯ ಈಡಿಗರ ಸಮುದಾಯ ಭವನದಲ್ಲಿ ಸೋಮವಾರ ಬೆಂಗಳೂರಿನ ಜೆಪಿ ನಾರಾಯಣಸ್ವಾಮಿ ಪ್ರತಿಷ್ಠಾನದಿಂದ ಜಿಲ್ಲಾ ಆರ್ಯ ಈಡಿಗರ ಸಂಘದ ಸಹಯೋಗದಲ್ಲಿ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಆರ್ಯ ಈಡಿಗ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿಷ್ಠಾನವು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಸಂಘ ಸಂಸ್ಥೆಗಳನ್ನು ಸ್ಥಾಪಿಸಲು, ಕೌಶಲ ತರಬೇತಿ ನೀಡಲು, ಆರ್ಥಿಕ ಹಿಂದುಳಿದವರ ಆರೋಗ್ಯಕ್ಕೂ ನೆರವು ನೀಡುತ್ತಿದೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದೆ. ಏಪ್ರಿಲ್‌ನಲ್ಲಿ ಬ್ಯಾಂಕಿಂಗ್ ಪರೀಕ್ಷೆಗೆ ತರಬೇತಿ ನೀಡುತ್ತಿದ್ದು, ಸಮಾಜದವರು ಆನ್‌ಲೈನ್ ನೋಂದಣಿ ಮಾಡಿಕೊಳ್ಳಬಹುದು. ಓದು ಮುಗಿದ ನಂತರ ಕೂರುವುದಕ್ಕಿಂತ ಯಾವುದಾದರೂ ಕೆಲಸ ಮಾಡಬೇಕು ಎಂದರು.

ಜೀವನದಲ್ಲಿ ಬದ್ಧತೆ, ಧೈರ್ಯ, ಖಚಿತತೆ, ಶಿಸ್ತು, ಸಮರ್ಪಣೆ, ಶ್ರದ್ಧೆ ಹಾಗೂ ನಿರ್ಧಾರ ಕೈಗೊಳ್ಳಬೇಕಿದೆ. ತುಂಡುಭೂಮಿ ಬೇಸಾಯ, ಕೃಷಿ ಕೂಲಿಕಾರ್ಮಿಕರೇ ಹೆಚ್ಚಿರುವ ಈ ಸಮುದಾಯದ ಏಳಿಗೆಗೆ ಶಿಕ್ಷಣ ಪ್ರಮುಖ ಅಸ್ತ್ರವಾಗಬೇಕಿದೆ ಎಂದು ತಿಳಿಸಿದರು.

ಪ್ರತಿಷ್ಠಾನದ ಕಾರ್ಯದರ್ಶಿ ಕುಸುಮಾ ಮಾತನಾಡಿ, ಪ್ರತಿಷ್ಠಾನದಿಂದ ನಿರಂತರವಾಗಿ ಸೇವಾ ಚಟುವಟಿಕೆಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಗೂ ಸಮಾಜದ ಪ್ರಗತಿಗೆ ನೆರವು ನೀಡಲಾಗುತ್ತಿದೆ. ಪ್ರಸಕ್ತ ವರ್ಷ ಸೇವಾ ಕಾರ್ಯಗಳಿಗೆ ಸುಮಾರು 9.80 ಕೋಟಿ ರೂ. ನೀಡಲಾಗಿದೆ ಎಂದರು.

ಶ್ರೀ ವಿಖ್ಯಾತಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಈಡಿಗರ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಪ್ರತಿಷ್ಠಾನದ ಜಿ.ಮಂಜಪ್ಪ, ಪೂರ್ಣೇಶ್, ಸಮಾಜದ ಪ್ರಮುಖರಾದ ಪ್ರೊ. ಕಲ್ಲನ, ಸುರೇಶ್ ಬಾಳೆಗುಂಡಿ, ಎಸ್.ಸಿ.ರಾಮಚಂದ್ರ, ಕೃಷ್ಣಮೂರ್ತಿ ಹಿಳ್ಳೋಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net