

ಬೆಂಗಳೂರು ಸರ್ಕಾರಿ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿರುವ ರಾಜ್ಯ ಸರ್ಕಾರ ಈಗ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಿರಿಯ ವಿದ್ಯಾರ್ಥಿಗಳ ಸಂಘ ಆರಂಭಿಸಲು ಮುಂದಾಗಿದೆ.
‘ನನ್ನ ಶಾಲೆ: ನನ್ನ ಜವಾಬ್ದಾರಿ’ ಎಂಬ ಯೋಜನೆಯನ್ನು ಆರಂಭಿಸುತ್ತಿದೆ. ಯೋಜನೆಯಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಿರಿಯ ವಿದ್ಯಾರ್ಥಿಗಳಿಗೆ ಜವಾಬ್ದಾರಿ ನೀಡುವುದಾಗಿದೆ.
ಈ ಕುರಿತು ಮಾತನಾಡಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ, ಶಾಲಾಭಿವೃದ್ಧಿಗೆ ಇದೊಂದು ವಿನೂತನ ಚಿಂತನೆಯಾಗಿದೆ. ‘ನನ್ನ ಶಾಲೆ: ನನ್ನ ಜವಾಬ್ದಾರಿ’ ಹೆಸರಿನ ವಿದ್ಯಾರ್ಥಿಗಳ ಸಂಘ ರಚನೆ, ವಾಟ್ಸಾಪ್ ಗ್ರೂಪ್‌ಗಳ ಮೂಲಕ ಒಗ್ಗೂಡಿಸಲು ಸಲಹೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಕಲಿತಿರುವ ಲಕ್ಷಾಂತರ ವಿದ್ಯಾರ್ಥಿಗಳು ಇಂದು ಉತ್ತಮ ಉದ್ಯೋಗದಲ್ಲಿದ್ದು, ದೇಶ-ವಿದೇಶಗಳಲ್ಲಿ ನೆಲೆಸಿದ್ದಾರೆ. ತಾವು ಕಲಿತ ಶಾಲೆಗೆ ಏನನ್ನಾದರೂ ಕೊಡುಗೆ ಕೊಡಬೇಕು ಎನ್ನುವ ಆಸಕ್ತಿ ಇದ್ದರೂ ಯಾವ ರೀತಿಯಲ್ಲಿ ಸಹಾಯ ಮಾಡಬೇಕು ಎಂಬುದು ತಿಳಿದಿರುವುದಿಲ್ಲ. ಹೀಗಾಗಿ, ಹಿರಿಯ ವಿದ್ಯಾರ್ಥಿಗಳ ಸಂಘವನ್ನು ರಚಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.