ದೇಶ ವಿಭಜನೆ ಎನ್‌ಸಿಇಆರ್‌ಟಿ ಮಾಡ್ಯೂಲ್ ಲಿಂಕ್ ರದ್ದುಪಡಿಸಿದ ಶಿಕ್ಷಣ ಇಲಾಖೆ

ncert
Published on

ಬೆಂಗಳೂರು: ದೇಶ ವಿಭಜನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (ಎನ್‌ಸಿಇಆರ್‌ಟಿ) ಕಳುಹಿಸಿರುವ ಮಾಡ್ಯೂಲ್‌ಗಳ ಲಿಂಕ್‌ಗಳನ್ನು ಶಾಲೆಗಳಿಗೆ ಕಳುಹಿಸಬಾರದು. ಒಂದು ವೇಳೆ ಈಗಾಗಲೇ ಕಳುಹಿಸಿದ್ದಲ್ಲಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಲಿಂಕ್‌ಗಳನ್ನು ಬಳಸದಂತೆ ಶಾಲಾ ಶಿಕ್ಷಣ ಇಲಾಖೆಯು (ಸಮಗ್ರ ಶಿಕ್ಷಣ ಕರ್ನಾಟಕ) ಸೂಚನೆ ನೀಡಿದೆ.

ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ ಎನ್‌ಸಿಇಆರ್‌ಟಿ ಸಿದ್ಧಪಡಿಸಿರುವ ‘ವಿಭಜನೆಯ ಭಯಾನಕತೆ’ಯಗ್ಗೆ ವಿಶೇಷ ಮಾಡ್ಯೂಲ್‌ಗಳನ್ನು ಬಳಸಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸುವಂತೆ ಎನ್‌ಸಿಇಆರ್‌ಟಿ ತಿಳಿಸಿತ್ತು. ಜತೆಗೆ ನೀಡಿರುವ ಮಾಡ್ಯೂಲ್‌ಗಳ ಲಿಂಕ್‌ಗಳನ್ನು ಕಳುಹಿಸಿ ಶಾಲೆಗಳಿಗೆ ಶೇರ್ ಮಾಡಲು ಸೂಚಿಸಲಾಗಿತ್ತು.

ಆದರೆ, ಈ ಸುತ್ತೋಲೆಯನ್ನು ಕೂಡಲೇ ಜಾರಿಗೆ ಬರದಂತೆ ಹಿಂಪಡೆಯಲಾಗಿದೆ. ಈ ಹಿನ್ನೆಲೆಯಲ್ಲಿ ಒದಗಿಸಿದ್ದ ಮಾಡ್ಯೂಲ್‌ಗಳನ್ನು ಶಾಲೆಗಳಿಗೆ ಕಳುಹಿಸಬಾರದೆಂದು ಸಮಗ್ರ ಶಿಕ್ಷಣ ಕರ್ನಾಟಕ ಸೂಚನೆ ನೀಡಿದೆ.

ಮಾಡ್ಯೂಲ್‌ನಲ್ಲಿ ಏನತ್ತು?

ಭಾರತ ವಿಭಜನೆಗೆ ಕಾಂಗ್ರೆಸ್, ಮೊಹಮ್ಮದ್ ಅಲಿ ಜಿಲ್ಲಾ ಮತ್ತು ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಅವರೇ ಕಾರಣ ಎಂದು ಉಲ್ಲೇಖಿಸಿರುವ ‘ದೇಶ ವಿಭಜನೆಯ ಕರಾಳ ದಿನ’ ಎಂಬ ವಿಶೇಷ ಪಠ್ಯಕ್ರಮವನ್ನು ಎನ್‌ಸಿಇಆರ್‌ಟಿ ಇತ್ತೀಚೆಗೆ ಪ್ರಕಟಿಸಿತ್ತು.

ಅಂತಿಮವಾಗಿ ದೇಶ ವಿಭಜನೆಗೆ ಮೂವರು ಕಾರಣ. ಜಿನ್ನಾ ವಿಭಜನೆಗೆ ಆಗ್ರಹಿಸಿದರು, ಕಾಂಗ್ರೆಸ್ ಇದಕ್ಕೆ ಒಪ್ಪಿಗೆ ನೀಡಿತು ಮತ್ತು ಮೌಂಟ್ ಬ್ಯಾಟನ್ ಅದನ್ನು ಅನುಷ್ಠಾನ ಮಾಡಿದರು ಎಂಬ ವಿಷಯವನ್ನು ಇತ್ತೀಚೆಗೆ ಪ್ರಕಟಿಸಿತ್ತು. ಇದು ದೇಶಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೇ ಮಾಡ್ಯೂಲ್ ಅನ್ನು ಎನ್‌ಸಿಇಆರ್‌ಟಿ ಕಳುಹಿಸಿತ್ತು ಎಂದು ಇಲಾಖೆ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net