

ಬೆಂಗಳೂರು ರಾಜ್ಯಪಠ್ಯಕ್ರಮ ಅನುಸರಿಸುತ್ತಿರುವ ಖಾಸಗಿ ಮತ್ತು ಅನುದಾನಿತ ಶಾಲೆಗಳು ಕಡ್ಡಾಯವಾಗಿ ರಾಜ್ಯ ಪಠ್ಯಕ್ರಮ ಹಾಗೂ ಪಠ್ಯಪುಸ್ತಕಗಳನ್ನು ಅನುಸರಿಸಬೇಕು. ಒಂದು ವೇಳೆ ಷರತ್ತು ಉಲ್ಲಂಸಿದ್ದಲ್ಲಿ ಸಂಬಂಧಪಟ್ಟ ಶಾಲೆಗಳ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸುವಂತೆ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಕೆಲವು ಶಾಲೆಗಳು ರಾಜ್ಯ ಪಠ್ಯಕ್ರಮಕ್ಕೆ ಅನುಮತಿ ಪಡೆದು ಕೇಂದ್ರ ಪಠ್ಯಕ್ರಮ ಬೋಧನೆ ಮಾಡುತ್ತಿರುತ್ತಾರೆ. ಪ್ರತಿ ವರ್ಷ ಪರೀಕ್ಷೆಗಳು ಸಮೀಪಿಸುತ್ತಿದ್ದಂತೆ ಇವರ ಸಮಸ್ಯೆಗಳು ಬಯಲಾಗುತ್ತವೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿ ಕ್ರಮ ವಹಿಸುವಂತೆ ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಶಿಕ್ಷಣ ಸಂಸ್ಥೆಗಳ ಸಂಬಂಧದಲ್ಲಿ ಪಾಠಕ್ರಮ, ಪಠ್ಯವಸ್ತು ಹಾಗೂ ಪಠ್ಯಪುಸ್ತಕಗಳನ್ನು ನಿಗದಿಪಡಿಸಬಹುದಾಗಿದೆ. ಕರ್ನಾಟಕ ಶಿಕ್ಷಣ ಸಂಸ್ಥೆಗಳು (ಪಠ್ಯಕ್ರಮದ ವರ್ಗೀಕರಣ, ನಿಯಂತ್ರಣ ಮತ್ತು ಇತರೆ) ನಿಯಮಗಳು-1995ರ ನಿಯಮ-19ರ ಉಪನಿಯಮ-3ರಂತೆ ರಾಜ್ಯ ಪಠ್ಯಕ್ರಮವನ್ನು ಅನುಸರಿಸುತ್ತಿರುವ ಎಲ್ಲ ಶಿಕ್ಷಣ ಸಂಸ್ಥೆಗಳು ರಾಜ್ಯ ಸರ್ಕಾರ ನಿಗದಿಪಡಿಸಿರುವ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳನ್ನೇ ಕಡ್ಡಾಯವಾಗಿ ಅನುಸರಿಸುತ್ರಿರುವುದು. ಹೆಚ್ಚುವರಿಯಾಗಿ ಯಾವುದೇ ಇತರೆ ಪಠ್ಯಕ್ರಮ ಅಥವಾ ಪಠ್ಯಪುಸ್ತಕಗಳನ್ನು ಅನುಸರಿಸುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.
ಕರ್ನಾಟಕ ಶಿಕ್ಷಣ ಕಾಯ್ದೆ-1983ರ ಸೆಕ್ಷನ್ 36ರಂತೆ ರಾಜ್ಯ ಪಠ್ಯಕ್ರಮದ ಶಾಲೆಗಳಿಗೆ ಮಾನ್ಯತೆ, ಮಾನ್ಯತೆ ನವೀಕರಣ ನೀಡುವಾಗ ಮಾನ್ಯತೆ ಪ್ರಮಾಣ ಪತ್ರದಲ್ಲಿ ‘ಶಾಲೆಯು ಸಂಯೋಜಿತವಾಗಿರುವ ಶೈಕ್ಷಣಿಕ ರಾಜ್ಯ ಪಠ್ಯಕ್ರಮ ಹಾಗೂ ರಾಜ್ಯ ಪಠ್ಯಪುಸ್ತಕಗಳನ್ನು ಅನುಸರಿಸಬೇಕು’ ಎಂಬ ಷರತ್ತು ವಿಧಿಸಲಾಗಿದೆ.
2010-11ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮದಂತೆ ಪಠ್ಯಪುಸ್ತಕಗಳ ರಚನೆ, ಮುದ್ರಣ ಮತ್ತು ವಿತರಣೆಗೆ ಸಂಬಂಧಿಸಿದ ಸಂಪೂರ್ಣ ಕಾರ್ಯವನ್ನು ಕರ್ನಾಟಕ ಪಠ್ಯಪುಸ್ತಕ ಸಂಘವು ನಿರ್ವಹಿಸಲು ಸರ್ಕಾರವು ಆದೇಶಿಸಿದೆ.
ಈ ಅಂಶಗಳ ಹಿನ್ನೆಲೆಯಲ್ಲಿ ಇಲಾಖೆ ಅನುಮತಿಯೊಂದಿಗೆ ರಾಜ್ಯದಲ್ಲಿ ನಡೆಯುತ್ತಿರುವ ರಾಜ್ಯ ಪಠ್ಯಕ್ರಮದ ಎಲ್ಲ ಖಾಸಗಿ ಮತ್ತು ಅನುದಾನಿತ ಶಾಲೆಗಳು 1ರಿಂದ 10ನೇ ತರಗತಿಯ ಸ್ಯಾಟ್ಸ್‌ನಲ್ಲಿ ವಿದ್ಯಾರ್ಥಿಗಳ ದಾಖಲಾತಿಯಂತೆ ತಂತ್ರಾಂಶದ ಮೂಲಕ ಬೇಡಿಕೆಯನ್ನು ದಾಖಲಿಸಬೇಕು. ಖಾಸಗಿ ಅನುದಾನರಹಿತ ಶಾಲೆಗಳು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪಠ್ಯಪುಸ್ತಕಗಳನ್ನು ಖರೀದಿಸಿ ರಾಜ್ಯ ಪಠ್ಯಪುಸ್ತಕಗಳನ್ನೇ ಅನುಸರಿಸಲು ತಮ್ಮ ವ್ಯಾಪ್ತಿಯ ಎಲ್ಲ ಖಾಸಗಿ ಶಾಲಾ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಲು ತಿಳಿಸಿದೆ.
ಇತರೆ ಪಠ್ಯಕ್ರಮ ಅನುಸರಿಸುವ ಶಾಲೆಗಳು ಕೂಡ ಕನ್ನಡ ಭಾಷಾ ಪಠ್ಯಪುಸ್ತಕಗಳ ಬೇಡಿಕೆ ದಾಖಲಿಸುವಂತೆಯೂ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.