ವಿದ್ಯೆ, ಸಂಸ್ಕಾರ ಬದುಕಿನ ಬೇರುಗಳಿದ್ದಂತೆ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ

Devegowda doctorarate
Published on

ಬೆಂಗಳೂರು ವಿದ್ಯೆ ಮತ್ತು ಸಂಸ್ಕಾರ ಬದುಕಿನ ಬೇರುಗಳಿದ್ದಂತೆ. ಈ ಎರಡೂ ಒಟ್ಟಿಗೆ ಬೆಳೆದಾಗ ಮಾತ್ರ ಬದುಕಿಗೊಂದು ಸಾರ್ಥಕತೆ ಸಿಗಲಿದೆ. ವಿದ್ಯೆ ಕೇವಲ ಕಾಗದದ ಪ್ರಮಾಣಪತ್ರವಾಗದೆ, ಸಂಸ್ಕಾರವನ್ನು ಒಳಗೊಂಡಿರಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.

ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಬೆಂಗಳೂರು ವಿಶ್ವವಿದ್ಯಾಲಯದ 58ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಸ್ವೀಕರಿಸಿ ಅವರು ಮಾತನಾಡಿದರು.

ವಿದ್ಯೆ ಹಣ ಗಳಿಕೆಯ ಸಾಧನವಾಗದೆ ವ್ಯಕ್ತಿತ್ವವನ್ನು ರೂಪಿಸುವ ಸಾಧಾನವಾದಾಗ ಮಾತ್ರ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಸಿಗಲು ಸಾಧ್ಯ. ಶಿಕ್ಷಣ ಅಂದರೆ ಪುಸ್ತಕ, ಜ್ಞಾನ, ಅಕ್ಷರ ಜ್ಞಾನ ಮಾತ್ರವಲ್ಲ, ಮನಸ್ಸಿಗೆ ಸಂಸ್ಕಾರವನ್ನು ಕೊಡುವುದಾಗಿದೆ ಎಂದರು.

ವಿದ್ಯೆ, ವಿನಯ ನೀಡುತ್ತೆ, ವಿನಯದಿಂದ ಮನುಷ್ಯತ್ವ ರೂಪುಗೊಳ್ಳುತ್ತೆ. ಸಂಪಾದನೆಯಾದ ಹಣದಿಂದ ಧರ್ಮಕಾರ್ಯಗಳು ನಡೆದಾಗ ಮನಸ್ಸಿಗೆ ತೃಪ್ತಿ ಸಿಗುತ್ತೆ ಎಂದು ಹೇಳಿದರು.

ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಹಾಗೂ ನೈತಿಕ ಶಿಕ್ಷಣದ ಅಗತ್ಯವಿದೆ. ಅಂತಹ ಶಿಕ್ಷಣವನ್ನು ಬೆಂಗಳೂರು ವಿವಿ ನೀಡುತ್ತಿದೆ. ಎಲ್ಲ ವಿದ್ಯಾರ್ಥಿಗಳು ತಮ್ಮದೇ ಕ್ಷೇತ್ರದಲ್ಲಿ ಚಾಪು ಮೂಡಿಸುವ ಮೂಲಕ ಉತ್ತಮ ಭವಿಷ್ಯ ರೂಢಿಸಿಕೊಳ್ಳುವಂತೆ ಸಲಹೆ ನೀಡಿದರು.

ಸೋಮನಾಥ್‌ಗೆ ಅಭಿನಂದನೆ:

ತಮ್ಮೊಂದಿಗೆ ಗೌರವ ಡಾಕ್ಟರೇಟ್ ಹಂಚಿಕೊಂಡ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಚಂದ್ರಯಾನ-3ರ ಯಶಸ್ಸಿನಿಂದ ಭಾರತ ಭೂಪಟವನ್ನು ಪ್ರಪಂಚಕ್ಕೆ ಪರಿಚಯಿಸಿರುವುದು ಹೆಮ್ಮೆಯ ವಿಷಯ. ಅದಕ್ಕಾಗಿ ವಿಜ್ಞಾನಿಗಳು ಮತ್ತು ಸಿಬ್ಬಂದಿಗೆ ದೇವೇಗೌಡ ಅಭಿನಂದಿಸಿದರು.

ಪದವಿಗಿಂತ ಕೌಶಲಕ್ಕೆ ಬೇಡಿಕೆ:

ಘಟಿಕೋತ್ಸವ ಭಾಷಣ ಮಾಡಿದ ಝಿರೊಧಾದ ಸಹ ಸಂಸ್ಥಾಪಕ ನಿಖಿಲ್ ಕಾಮತ್, ಪ್ರಸ್ತುತ ಜಗತ್ತಿನಲ್ಲಿರುವ ಕೌಶಲಗಳು ಶೈಕ್ಷಣಿಕ ಪದವಿಗಿಂತ ಹೆಚ್ಚಿನ ಬೇಡಿಕೆಯುಳ್ಳವಾಗಿವೆ. ನಾನು ಹೆಚ್ಚಿನ ಸಾಂಪ್ರದಾಯಿಕ ಶಿಕ್ಷಣವನ್ನು ಪಡೆದಿಲ್ಲ. ಇಂದು ಶಿಕ್ಷಣ ಕ್ಷೇತ್ರ ಕ್ಲಾಸ್ ರೂಮ್‌ಗಳಿಂದ ಹೊರಬಂದಿದ್ದು ಆನ್‌ಲೈನ್‌ನಲ್ಲಿ ವಿವಿಧ ರೀತಿಯ ಶಿಕ್ಷಣ ಪಡೆಯುವ ಅವಕಾಶ ಸೃಷ್ಟಿಸಿದೆ ಎಂದು ಹೇಳಿದರು.

ವಿದ್ಯಾರ್ಥಿಗಳಲ್ಲಿ ಕುತೂಹಲ ಅಥವಾ ಆಸಕ್ತಿಯ ಪ್ರಜ್ಞೆ ಅತಿ ಅಗತ್ಯ. ತಮ್ಮ ಸುತ್ತಲಿನ ಪರಿಸರದ ಜತೆಗೆ ಜಗತ್ತಿನ ತಂತ್ರಜ್ಞಾನ ಸೇರಿ ವಿವಿಧ ವಲಯಗಳಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಕುತೂಹಲ ಇರಬೇಕು. ನಮ್ಮಲ್ಲಿ ಕುತೂಹಲದ ಪ್ರಜ್ಞೆಯಿದ್ದು, ಕುತೂಹಲವನ್ನು ತಣಿಸುವ ಪ್ರಯತ್ನ ನಡೆಸಿದಾಗ ಔದ್ಯೋಗಿಕ ಸವಾಲುಗಳನ್ನು ಎದುರಿಸಲು ಹೆಚ್ಚು ಸನ್ನದ್ಧಗೊಳ್ಳುತ್ತೇವೆ ಎಂದು ತಿಳಿಸಿದರು.

28,871 ವಿದ್ಯಾರ್ಥಿಗಳಿಗೆ ಪದವಿ:

ಇದೇ ವೇಳೆ 13,707 ಪುರುಷ ಮತ್ತು 15,164 ಮಹಿಳಾ ಅಭ್ಯರ್ಥಿಗಳಿಗೆ 299 ಚಿನ್ನದ ಪದಕ, 204 ಪಿಎಚ್.ಡಿ., ಪದವಿ ಸೇರಿ 28,871 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಬೆಂ.ವಿವಿ ಕುಲಪತಿ ಡಾ. ಎಸ್.ಎಂ. ಜಯಕರ್, ಕುಲಸಚಿವ ಶೇಖ್ ಲತ್ೀ, ಮೌಲ್ಯಮಾಪನ ಕುಲಸಚಿವ ಪ್ರೊ. ಸಿ. ಶ್ರೀನಿವಾಸ್ ಉಪಸ್ಥಿತರಿದ್ದರು.

2047ಕ್ಕೆ ಭಾರತವನ್ನು ವಿಕಸಿತ ದೇಶವನ್ನಾಗಿ ರೂಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ರೂಪಿಸಿದೆ. ಜನರು ಸಹ ಈ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಸ್ವಾತಂತ್ರ್ಯೋತ್ಸವದ ಶತಮಾನಕ್ಕೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ರೂಪಿಸಬೇಕು ಎಂಬುದು ನಮ್ಮ ಗುರಿಯಾಗಬೇಕು. - ಥಾವರ್‌ಚಂದ್ ಗೆಹಲೋತ್, ರಾಜ್ಯಪಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net