

ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಯುವಜನರು ಸಾವಿಗೀಡಾಗುತ್ತಿರುವ ಸಂಖ್ಯೆ ಗಣನೀಯವಾಗಿ ಏರುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಒಂದು ಕಾಲದಲ್ಲಿ 60- 70 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಮಾತ್ರ ಕಂಡುಬರುತ್ತಿದ್ದ ಹೃದಯ ಸಂಬಂಧಿ ಸಮಸ್ಯೆಗಳು ಈಗ ಶಾಲಾ-ಕಾಲೇಜುಗಳಿಗೆ ಹೋಗುವ ಮಕ್ಕಳಿಂದ ಹಿಡಿದು 30-40 ವರ್ಷ ವಯಸ್ಸಿನ ಯುವಕರನ್ನೂ ಕಾಡುತ್ತಿವೆ. ಈ ಆಘಾತಕಾರಿ ಪ್ರವೃತ್ತಿಯ ಹಿಂದಿನ ಕಾರಣಗಳನ್ನು ಗಂಭೀರವಾಗಿ ಪರಿಶೀಲಿಸಿ ತುರ್ತು ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ತಜ್ಞರ ಪ್ರಕಾರ, ಯುವಜನರಲ್ಲಿ ಹೃದಯಾಘಾತದ ಸಂಖ್ಯೆ ಏರುತ್ತಿರುವುದಕ್ಕೆ ಹಲವು ಕಾರಣಗಳಿವೆ. ಆಧುನಿಕ ಜೀವನಶೈಲಿಯಿಂದಾಗಿ ದೈಹಿಕ ಚಟುವಟಿಕೆ ಸೀಮಿತವಾಗಿದೆ. ಕಚೇರಿಗಳಲ್ಲಿ ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವುದು, ಲಗುಬಗೆಯಲ್ಲಿ ಊಟ-ತಿಂಡಿ ಸೇವಿಸುವುದು, ಕೆಲಸದ ಒತ್ತಡ ಮಾತ್ರವಲ್ಲದೆ ಧೂಮಪಾನದಂತಹ ಚಟಗಳು ಕೂಡ ಯುವಜನರಲ್ಲಿ ಹೃದಯದ ಸಮಸ್ಯೆಯನ್ನು ಉಲ್ಬಣಗೊಳಿಸುತ್ತಿವೆ.
ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ಹೃದಯಾಘಾತದ ಪ್ರಕರಣಗಳು ಏರಿಕೆಯಾಗಿರುವ ಬಗ್ಗೆಯೂ ಹಲವರಲ್ಲಿ ಬಲವಾದ ಶಂಕೆ ಇದೆ. ಕೆಲವು ಅಧ್ಯಯನಗಳು ಕೋವಿಡ್ ಸೋಂಕಿನಿಂದ ಉಂಟಾಗುವ ಹೃದಯದ ಉರಿಯೂತ (ಮಯೋಕಾರ್ಡಿಟಿಸ್) ಮತ್ತು ರಕ್ತದಲ್ಲಿ ಉಂಟಾಗುವ ಗಂಟುಗಳಂತಹ ರಚನೆಯೂ ಈ ಸಮಸ್ಯೆಗೆ ಕಾರಣವಾಗಿರಬಹುದು ಎನ್ನುತ್ತಿವೆ. ಆದರೆ, ಕೋವಿಡ್-19 ಲಸಿಕೆಗಳು ಹೃದಯಾಘಾತ ಪ್ರಕರಣಗಳ ಏರಿಕೆಗೆ ಕಾರಣವಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯಂತಹ ಪ್ರತಿಷ್ಠಿತ ಸಂಸ್ಥೆಗಳು ಸ್ಪಷ್ಟಪಡಿಸಿವೆ.
ಯುವಜನರ ಸಾವಿನ ಘಟನೆಗಳು ದೇಶಾದ್ಯಂತ ಸಂಭವಿಸುತ್ತಿದ್ದರೂ ನಮ್ಮ ರಾಜ್ಯದ ಹಾಸನ ಜಿಲ್ಲೆಯಲ್ಲಿ ಕಳೆದ ಒಂದೇ ತಿಂಗಳಲ್ಲಿ 18 ಯುವಜೀವಗಳು ಹೃದಯಾಘಾತಕ್ಕೆ ಬಲಿಯಾಗಿರುವ ವರದಿ ಕಳವಳಕಾರಿಯಾಗಿದೆ. ಈ ಪೈಕಿ ಕೆಲವರಂತೂ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟ ಘಟನೆಗಳು ಸಮಾಜದಲ್ಲಿ ಆತಂಕ ಮೂಡಿಸಿವೆ. ಈ ಘಟನೆಗಳ ಹಿಂದಿನ ನಿಖರವಾದ ಕಾರಣವನ್ನು ತಿಳಿಯಲೇಬೇಕಾಗಿದೆ. ಕೆಲವು ತಿಂಗಳುಗಳ ಹಿಂದೆ, ರಾಜ್ಯ ಸರ್ಕಾರವು ತಜ್ಞರ ಸಮಿತಿ ರಚಿಸುವುದಾಗಿ ಹೇಳಿತ್ತು. ಆದರೆ ಸಮಿತಿಯ ರಚನೆ ಆಯಿತೇ, ಅದು ಅಧ್ಯಯನ ನಡೆಸಿತೇ, ವರದಿ ನೀಡಿತೇ ಎಂಬ ಯಾವ ಮಾಹಿತಿಯೂ ಬರಲಿಲ್ಲ. ಈಗಲೂ ಕಾಲ ಮಿಂಚಿಲ್ಲ. ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರೂಪಿಸಬೇಕು. ಸಾಕ್ಷಿ ಆಧಾರಿತ ಸಮಗ್ರ ಅಧ್ಯಯನ ನಡೆಯಬೇಕು. ಸಮಸ್ಯೆಯ ಮೂಲವನ್ನು ಪತ್ತೆ ಹಚ್ಚಿ, ತಡೆಗಟ್ಟುವಿಕೆಗೆ ಸೂಕ್ತ ಕಾರ್ಯತಂತ್ರ ರೂಪುಗೊಳ್ಳಬೇಕು. ಸಾರ್ವಜನಿಕರು, ಅದರಲ್ಲೂ ವಿಶೇಷವಾಗಿ ಯುವಜನರು, ತಮ್ಮ ಪಾಲಿನ ಕರ್ತವ್ಯಗಳನ್ನು ಮರೆಯಬಾರದು. ಆರೋಗ್ಯಕರ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ, ಧೂಮಪಾನ- ಮದ್ಯಪಾನದಿಂದ ದೂರವಿರುವುದು, ಒತ್ತಡದ ಸಮರ್ಪಕ ನಿರ್ವಹಣೆ ಮುಂತಾದ ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು.
ತುರ್ತಕಾಲದಲ್ಲಿ ಪ್ರಯೋಜನಕ್ಕೆ ಬರುವ ಕಾರ್ಡಿಯೋಪಲ್ಮನರಿ ರೀಸಸಿಟೇಷನ್ (ಸಿಪಿಆರ್) ತರಹದ ತರಬೇತಿಗಳನ್ನು ಸರ್ಕಾರವು ಸಾರ್ವಜನಿಕರಿಗೆ ವ್ಯಾಪಕವಾಗಿ ನೀಡಬೇಕು. ಖಾಸಗಿ ಸಂಸ್ಥೆಗಳು ಕೂಡ ತಮ್ಮ ಹೊಣೆಗಾರಿಯನ್ನು ಅರಿತು, ಕೆಲಸದ ಸ್ಥಳದಲ್ಲಿ ಸುಧಾರಣೆಗಳನ್ನು ತರಬೇಕು. ಒತ್ತಡ ನಿರ್ವಹಣೆಗೆ ಗಮನ ಹರಿಸಬೇಕು. ಆರೋಗ್ಯಕರ ವಾತಾವರಣ ಕಲ್ಪಿಸಬೇಕು. ಹೃದಯಾಘಾತದಿಂದ ಯುವಜನರು ಸಾವಿಗೀಡಾಗುವ ಈ ಸಮಸ್ಯೆ ಕರ್ನಾಟಕಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಒಂದು ಎಚ್ಚರಿಕೆಯ ಗಂಟೆಯಾಗಿದೆ. ಯುವಜನರ ಆರೋಗ್ಯವೇ ರಾಷ್ಟ್ರದ ಭವಿಷ್ಯ. ಈಗಲೇ ಕ್ರಮ ಕೈಗೊಂಡರೆ ಮಾತ್ರ ಈ ಆತಂಕಕಾರಿ ಪ್ರವೃತ್ತಿಯನ್ನು ತಡೆಗಟ್ಟಬಹುದು.