

ಕರೊನಾ ನಿಯಂತ್ರಣಕ್ಕಾಗಿ ದೇಶವ್ಯಾಪಿ ವಿಧಿಸಲಾದ ದಿಗ್ಬಂಧನ ಈ ಮಾಸಾಂತ್ಯದವರೆಗೆ ಮುಂದುವರಿಯಲಿದೆ ಎಂಬುದು ಗೊತ್ತಿರುವಂಥದೇ. ಆದರೆ ಮೆಟ್ರೊ, ವಿಮಾನ ಮತ್ತು ಹೋಟೆಲ್, ರೆಸ್ಟೊರೆಂಟ್ಗಳಂತಹ ಕೆಲ ವಲಯ ಹೊರತುಪಡಿಸಿ ಉಳಿದೆಲ್ಲ ವಲಯಗಳು ಈಗ ನಿರ್ಬಂಧದಿಂದ ಮುಕ್ತವಾಗಿವೆ; ಜನಜೀವನ ನಿಧಾನಕ್ಕೆ ಚಟುವಟಿಕೆಗೆ ಮರಳುತ್ತಿದೆ. ಇದರಿಂದಾಗಿ ಕರೊನಾ ಸೋಂಕಿತರ ಸಂಖ್ಯೆಯಲ್ಲಿಯೂ ಹೆಚ್ಚಳ ಕಾಣುತ್ತಿದೆ. ಹೊರರಾಜ್ಯ ಮತ್ತು ಹೊರದೇಶಗಳಿಂದಲೂ ಜನರು ಬರುತ್ತಿರುವುದರಿಂದ ಪ್ರಕರಣಗಳ ಪ್ರಮಾಣ ಹೆಚ್ಚುತ್ತಿದೆ. ಆರೋಗ್ಯ ವಲಯದ ತಜ್ಞರು ಈ ಬೆಳವಣಿಗೆಯನ್ನು ಮೊದಲೇ ಊಹಿಸಿದ್ದರು. ಕರ್ನಾಟಕವನ್ನೇ ತೆಗೆದುಕೊಂಡರೆ, ಜೂನ್ ಅಂತ್ಯದ ವೇಳೆಗೆ ಕರೊನಾ ಪ್ರಕರಣಗಳು 12 ಸಾವಿರಕ್ಕೆ ಏರಬಹುದು ಎಂಬ ಅಂದಾಜೂ ಇದೆ.
ಹಾಗಂತ, ಲಾಕ್ಡೌನ್ ಅನ್ನು ಬಹಳ ದಿನಗಳ ಕಾಲ ಮುಂದುವರಿಸುವುದು ಅಸಾಧ್ಯ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಆಧಾರವಾದ ವಲಯಗಳನ್ನು ಬಹುಕಾಲ ನಿಷ್ಕ್ರಿಯ ಸ್ಥಿತಿಯಲ್ಲಿಡುವುದೂ ಕಾರ್ಯಸಾಧ್ಯ ವಿಚಾರವಲ್ಲ. ಹೀಗಾಗಿ, ಕರೊನಾ ಪ್ರಕರಣಗಳು ಹೆಚ್ಚುವುದನ್ನು ಮುನ್ನಂದಾಜಿಸಿ ಅದನ್ನು ಎದುರಿಸಲು ತಕ್ಕ ಸಿದ್ಧತೆ ಮಾಡಿಕೊಳ್ಳುವುದು ಅನಿವಾರ್ಯ. ಈ ನಿಟ್ಟಿನಲ್ಲಿ, ರಾಜ್ಯಗಳು ಪೂರ್ವತಯಾರಿ ಮಾಡಿಕೊಂಡಿದ್ದು, ವ್ಯವಸ್ಥೆಯನ್ನು ಇನ್ನಷ್ಟು ದಕ್ಷ ಮತ್ತು ಸಜ್ಜುಗೊಳಿಸಬೇಕು. ಇಷ್ಟು ದಿನಗಳ ಅನುಭವದ ಹಿನ್ನೆಲೆಯಲ್ಲಿ ಏನಾದರೂ ಕುಂದುಕೊರತೆಗಳಿದ್ದರೆ ಸರಿಪಡಿಸುವತ್ತ ತುರ್ತು ಗಮನ ನೀಡಬೇಕು.
ಕರ್ನಾಟಕದಲ್ಲಿ ಈಗಾಗಲೇ ಕರೊನಾ ಸೋಂಕಿತರ ಚಿಕಿತ್ಸೆಗೆಂದು 8 ಸಾವಿರ ಹಾಸಿಗೆಗಳನ್ನು ಸಜ್ಜಾಗಿಸಿದ್ದು, ಈ ಸಾಮರ್ಥ್ಯವನ್ನು 16 ಸಾವಿರಕ್ಕೆ ಏರಿಸುವ ಗುರಿ ಹೊಂದಲಾಗಿದೆ. ಕರೊನಾ ನಿಗ್ರಹ ಕಾರ್ಯದಲ್ಲಿ ತೊಡಗಿಕೊಂಡಿರುವ ಆರೋಗ್ಯ ಕಾರ್ಯಕರ್ತರಿಗೆ ಮೂಲಸೌಕರ್ಯ ಸಮಸ್ಯೆಯಿಲ್ಲ ಎಂದು ಸರ್ಕಾರ ಹೇಳಿಕೊಂಡಿದೆ. ಆದರೆ, ಹೊರರಾಜ್ಯ ಮತ್ತು ಹೊರದೇಶಗಳಿಂದ ಬಂದು ಕ್ವಾರಂಟೈನ್ ಆದವರಿಗೆ ಊಟ ಮತ್ತಿತರ ವ್ಯವಸ್ಥೆಗಳು ಸರಿಯಾಗಿ ಆಗುತ್ತಿಲ್ಲ ಎಂಬ ಅಸಮಾಧಾನ ಕೆಲವೆಡೆಗಳಿಂದ ವ್ಯಕ್ತವಾಗುತ್ತಿದೆ. ಈ ಕುರಿತು ಕೆಲವರು ವೀಡಿಯೊ ಮಾಡಿ ಅಳಲು ಹಂಚಿಕೊಂಡಿದ್ದಾರೆ. ಸರ್ಕಾರ ಈ ಬಗ್ಗೆ ತುರ್ತು ಗಮನಹರಿಸಿ ಸಮಸ್ಯೆಗಳಿದ್ದರೆ ಸರಿಪಡಿಸುವ ಕೆಲಸ ಆಗಬೇಕಾಗಿದೆ. ಏಕೆಂದರೆ, ಕರೊನಾಪೀಡಿತರು ಮತ್ತು ಶಂಕಿತರು ಮಾನಸಿಕ ತುಮುಲ ಎದುರಿಸುತ್ತಿದ್ದು, ಸೂಕ್ಷ್ಮರೀತಿಯಲ್ಲಿ ಅವರ ಕಾಳಜಿವಹಿಸಬೇಕಿದೆ. ಒಟ್ಟಾರೆ ಕರೊನಾ ಪರಿಸ್ಥಿತಿಯ ನಿರ್ವಹಣೆಯ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಂಡಿದ್ದು, ಈ ಕಾರ್ಯಕ್ಕೆ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ. ಕರೊನಾ ವಾರಿಯರ್ಗಳು ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲೋ ಸಣ್ಣಪುಟ್ಟ ನ್ಯೂನತೆಗಳು ದೊಡ್ಡದಾಗಿ ಬಿಂಬಿತವಾಗದಂತೆ ಸರ್ಕಾರ ಎಚ್ಚರವಹಿಸಬೇಕಿದೆ.
ಇದನ್ನೂ ಓದಿ: ಸಂಪಾದಕೀಯ: ನೆರವಿನ ಅನುಷ್ಠಾನ ಮುಖ್ಯ
ಕರೊನಾ ನಿರ್ವಹಣೆಯಲ್ಲಿ ಸರ್ಕಾರದಷ್ಟೇ ಹೊಣೆಗಾರಿಕೆ ಸಾರ್ವಜನಿಕರ ಮೇಲೂ ಇದೆ ಎಂಬುದನ್ನು ಮರೆಯಬಾರದು. ಏಕೆಂದರೆ ಸರ್ಕಾರದ ಕ್ರಮಗಳು ಯಶಸ್ವಿಯಾಗುವಲ್ಲಿ ಜನರ ಪಾತ್ರವೇ ಮಹತ್ವದ್ದು; ಎಲ್ಲವನ್ನೂ ಬಲವಂತದಿಂದ ಮಾಡಿಸಲಾಗದು. ಅದರ ಜತೆಗೆ, ಕರೊನಾ ದಿಗ್ಬಂಧನದಿಂದಾಗಿ ಮನೆಯಲ್ಲೇ ಉಳಿಯಬೇಕಾಗಿ ಬಂದಿದ್ದರಿಂದ ಜನರು ಆರೋಗ್ಯಕ್ಕೆ ಸಂಬಂಧಿಸಿ ಕೆಲ ಹೆಜ್ಜೆಗಳನ್ನು ರೂಢಿಸಿಕೊಂಡಿದ್ದಾರೆ. ಇಂಥ ಕ್ರಮವನ್ನು ಮುಂದುವರಿಸಬೇಕು. ಏಕೆಂದರೆ, ಈ ಕರೊನಾ ಸುಲಭದಲ್ಲಿ ಹೋಗುವಂಥದಲ್ಲ. ಈ ಕಾಯಿಲೆಗೆ ಔಷಧ ಕಂಡುಹಿಡಿದ ಮೇಲೂ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸ ಬೇಕಾಗುತ್ತದೆ. ಇದರಿಂದ ಕಾಯಿಲೆ ಪಸರಿಸುವಿಕೆಯನ್ನು ನಿಯಂತ್ರಿಸಬಹುದು.