

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ದಾಳಿಯು 26 ಜನರನ್ನು ಬಲಿ ಪಡೆದು, ಭಾರತ-ಪಾಕಿಸ್ತಾನ ನಡುವಿನ ಸಂಬಂಧಗಳನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸಿದೆ. ಈ ದಾಳಿಯ ಹೊಣೆಯನ್ನು ದಿ ರೆಸಿಸ್ಟೆನ್ಸ್ ಫ್ರಂಟ್ ಎಂಬ ಉಗ್ರ ಸಂಘಟನೆ ಹೊತ್ತುಕೊಂಡಿದ್ದು, ಇದರ ಹಿಂದೆ ಪಾಕಿಸ್ತಾನದ ಕೈವಾಡವಿರುವುದು ಸ್ಪಷ್ಟವಾಗಿದೆ.
ಇದಕ್ಕೆ ಪ್ರತೀಕಾರವಾಗಿ, ಭಾರತವು ಸಿಂಧೂ ಜಲ ಹಂಚಿಕೆ ಒಪ್ಪಂದವನ್ನು ಅಮಾನತುಗೊಳಿಸುವುದು, ಸಾರ್ಕ್ ವೀಸಾ ರಿಯಾಯಿತಿ ಯೋಜನೆ ರದ್ದುಗೊಳಿಸುವುದು, ರಾಜತಾಂತ್ರಿಕ ಸಿಬ್ಬಂದಿಯನ್ನು ಕಡಿಮೆಗೊಳಿಸುವುದು, ಅಟಾರಿ-ವಾಘಾ ಗಡಿ ಚೆಕ್ಪೋಸ್ಟ್ ಮುಚ್ಚುವುದು ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಈ ಕ್ರಮಗಳು ಪಾಕಿಸ್ತಾನದ ಆರ್ಥಿಕ, ರಾಜತಾಂತ್ರಿಕ ಮತ್ತು ರಾಜಕೀಯ ಶಕ್ತಿಯನ್ನು ಗಣನೀಯವಾಗಿ ದುರ್ಬಲಗೊಳಿಸಿವೆ.
ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಪಾಕಿಸ್ತಾನ ಈಗ ಅಂತಾರಾಷ್ಟ್ರೀಯ ಸಮುದಾಯದ, ವಿಶೇಷವಾಗಿ ವಿಶ್ವಸಂಸ್ಥೆ ಮತ್ತು ವಿಶ್ವ ಬ್ಯಾಂಕ್ನಂತಹ ಸಂಸ್ಥೆಗಳ ಬೆಂಬಲವನ್ನು ಕೋರಲು ಪ್ರಯತ್ನಿಸುತ್ತಿದೆ. ಜೊತೆಗೆ, ಕಾಶ್ಮೀರ ವಿವಾದವನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮುನ್ನೆಲೆಗೆ ತರಲು ಮುಂದಾಗಿದೆ. ಈ ಸಂದರ್ಭದಲ್ಲಿ, ಭಾರತವು ಕಾಶ್ಮೀರ ವಿಷಯ ಅಂತಾರಾಷ್ಟ್ರೀಕರಣಗೊಳ್ಳದಂತೆ ಎಚ್ಚರ ವಹಿಸಬೇಕಾಗಿದೆ. ಇದಕ್ಕಾಗಿ, ಪ್ರಬಲ ರಾಷ್ಟ್ರಗಳ ಬೆಂಬಲ ಕ್ರೋಡೀಕರಿಸುವ ತಂತ್ರಗಾರಿಕೆಯನ್ನು ಭಾರತ ರೂಪಿಸುವ ಅವಶ್ಯಕತೆ ಇದೆ.
ಅಮೆರಿಕ, ರಷ್ಯಾ, ಚೀನಾ ಮತ್ತು ಯುರೋಪಿಯನ್ ಒಕ್ಕೂಟ ಸೇರಿದಂತೆ ಪ್ರಮುಖ ರಾಷ್ಟ್ರಗಳು ಪಹಲ್ಗಾಮ್ ದಾಳಿಯನ್ನು ಖಂಡಿಸಿವೆ. ಇದು ಭಾರತಕ್ಕೆ ರಾಜತಾಂತ್ರಿಕವಾಗಿ ಒಂದು ಪ್ರಬಲ ಸ್ಥಾನವನ್ನು ಒದಗಿಸಿದೆ. ಆದರೆ, ಜಲ ಒಪ್ಪಂದ ಅಮಾನತು ಮಾಡಿರುವುದನ್ನು ‘ಯುದ್ಧ ಕೃತ್ಯ’ ಎಂದು ಪಾಕಿಸ್ತಾನ ಬಿಂಬಿಸುತ್ತಿದೆ. ಈ ಸಂಬಂಧ ವಿಶ್ವ ಬ್ಯಾಂಕ್ ಮತ್ತು ಇತರ ಸಂಸ್ಥೆಗಳ ಮೂಲಕ ಭಾರತದ ಮೇಲೆ ಒತ್ತಡ ಹೇರುವ ಸಾಧ್ಯತೆ ಇದೆ. ಇದರ ಜೊತೆಗೆ, ಕಾಶ್ಮೀರ ವಿವಾದವನ್ನು ವಿಶ್ವಸಂಸ್ಥೆಯಂತಹ ವೇದಿಕೆಗಳಲ್ಲಿ ಮತ್ತೆ ಪ್ರಸ್ತಾಪಿಸಲು ಪಾಕಿಸ್ತಾನ ಪ್ರಯತ್ನಿಸಬಹುದು.
ಇದು ಭಾರತಕ್ಕೆ ಅನಿರೀಕ್ಷಿತವಾದ ಸಂಕೀರ್ಣ ಸವಾಲುಗಳನ್ನು ಒಡ್ಡಬಹುದು.ಈ ಸವಾಲನ್ನು ಎದುರಿಸಲು, ಭಾರತ ತನ್ನ ರಾಜತಾಂತ್ರಿಕ ತಂತ್ರವನ್ನು ಈಗಿನಿಂದಲೇ ಚುರುಕುಗೊಳಿಸಬೇಕು. ಈ ವಿಷಯದಲ್ಲಿ ಅಂತಾರಾಷ್ಟ್ರೀಯ ಸಮುದಾಯದ ಬೆಂಬಲವನ್ನು ಕ್ರೋಡೀಕರಿಸುವುದು ಭಾರತಕ್ಕೆ ಕೇವಲ ಆಯ್ಕೆಯಲ್ಲ, ಬದಲಿಗೆ ಅನಿವಾರ್ಯ.
ಈ ಹಿನ್ನೆಲೆಯಲ್ಲಿ ಭಾರತವು ದಿ ರೆಸಿಸ್ಟೆನ್ಸ್ ಫ್ರಂಟ್ ಸಂಘಟನೆಯೊಂದಿಗೆ ಪಾಕಿಸ್ತಾನ ಹೊದಿರುವ ಸಂಬಂಧಗಳ ಬಗ್ಗೆ ತಾಂತ್ರಿಕ ಮತ್ತು ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಿ, ಅಮೆರಿಕ, ಬ್ರಿಟನ್, ಫ್ರಾನ್ಸ್, ರಷ್ಯಾ ಮುಂತಾದ ಪ್ರಮುಖ ದೇಶಗಳೊಂದಿಗೆ ಹಂಚಿಕೊಳ್ಳಬೇಕು. ದಾಳಿಯಲ್ಲಿ ಭಾಗಿಯಾದ ಕಾಶ್ಮೀರಿ ಯುವಕ ಅದಿಲ್ನ ಪಾಕಿಸ್ತಾನದ ತರಬೇತಿಯ ದೃಢವಾದ ಸಾಕ್ಷ್ಯಗಳನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮಂಡಿಸಿದರೆ ಅದು ಭಾರತದ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ.
ಪಾಕಿಸ್ತಾನದ ವಾದವನ್ನು ದುರ್ಬಲಗೊಳಿಸಲು ಸಹಾಯಕವಾಗುತ್ತದೆ. ಸಿಂಧೂ ಜಲ ಒಪ್ಪಂದವು ವಿಶ್ವ ಬ್ಯಾಂಕ್ನ ಮಧ್ಯಸ್ಥಿಕೆಗೆ ಸಂಬಂಧಿಸಿದ್ದು. ಹಾಗಾಗಿ ಭಾರತ ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳಲು ವಿಶ್ವ ಬ್ಯಾಂಕ್ಜತೆಗೂ ಸಕ್ರಿಯವಾಗಿ ಸಂವಾದ ನಡೆಸಬೇಕು. ಈ ಕ್ರಮವನ್ನು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಒತ್ತಾಯದ ಕ್ರಮವೆಂದು ವಿವರಿಸಬೇಕು. ಇದೇ ರೀತಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಂತಹ ವೇದಿಕೆಗಳಲ್ಲಿ ಕಾಶ್ಮೀರವನ್ನು ದ್ವಿಪಕ್ಷೀಯ ವಿಷಯವೆಂದು ಒತ್ತಿಹೇಳಬೇಕು.