ಸಂಪಾದಕೀಯ: ಬ್ರಿಟನ್ ಜತೆ ಬಾಂಧವ್ಯ ವೃದ್ಧಿ

ವಿಜಯವಾಣಿ (3)
Published on

ಭಾರತ ಮತ್ತು ಬ್ರಿಟನ್ ನಡುವಿನ ಸ್ನೇಹ, ಬಾಂಧವ್ಯ ಮತ್ತಷ್ಟು ಬಲಗೊಂಡಿದೆ. ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಉದ್ಯಮಿಗಳು, ತಜ್ಞರು ಸೇರಿದಂತೆ 125 ಜನರನ್ನು ಒಳಗೊಂಡ ಬೃಹತ್ ನಿಯೋಗದೊಂದಿಗೆ ಎರಡು ದಿನಗಳ ಭಾರತ ಭೇಟಿಗೆ ಬಂದಿದ್ದರು (ಅಕ್ಟೋಬರ್ 8 ಮತ್ತು 9). ಈ ಭೇಟಿ ಫಲಪ್ರದ ಮಾತ್ರವಲ್ಲ ಹಲವು ಕ್ಷೇತ್ರಗಳಲ್ಲಿ ಸಹಕಾರದ ಹೊಸ ಅಧ್ಯಾಯವನ್ನು ಆರಂಭಿಸಿದೆ ಎಂಬುದು ಗಮನಾರ್ಹ. ವಾಣಿಜ್ಯ ನಗರಿ ಮುಂಬೈಯಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೀರ್ ಸ್ಟಾರ್ಮರ್ ನಡುವೆ ದ್ವಿಪಕ್ಷೀಯ ಮಾತುಕತೆ ನಡೆದಿದ್ದು, ವ್ಯಾಪಾರ, ವಾಣಿಜ್ಯ, ರಕ್ಷಣೆ, ಭದ್ರತೆ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರ ಮತ್ತಷ್ಟು ಗಟ್ಟಿಗೊಳಿಸಲು ಉಭಯ ನಾಯಕರು ಸಮ್ಮತಿಸಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸ್ಥಾನ ಸಿಗಬೇಕು ಎಂದು ಬ್ರಿಟನ್ ಪ್ರತಿಪಾದಿಸಿದ್ದು, ತನ್ನ ಬೆಂಬಲವನ್ನು ಸೂಚಿಸಿದೆ. ‘ಜಗತ್ತು ಅನಿಶ್ಚಿತತೆಯನ್ನು ಎದುರಿಸುತ್ತಿರುವ ವೇಳೆಯಲ್ಲಿ ಭಾರತ ಮತ್ತು ಬ್ರಿಟನ್ ನಡುವಿನ ಪಾಲುದಾರಿಕೆ ಜಾಗತಿಕ ಸ್ಥಿರತೆ ಮತ್ತು ಆರ್ಥಿಕ ಪ್ರಗತಿಯ ಪ್ರಮುಖ ಆಧಾರಸ್ತಂಭವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರುವುದು, ಉಭಯ ದೇಶಗಳ ಬಾಂಧವ್ಯವೃದ್ಧಿಯ ಮಹತ್ವಕ್ಕೆ ಸಾಕ್ಷಿ. ಭಾರತ ವಾಯು ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಲು, ಸೇನಾಪಡೆಗಳ ಪ್ರಸ್ತುತ ಮತ್ತು ಭವಿಷ್ಯದ ಅವಶ್ಯಕತೆಗಳನ್ನು ಪೂರೈಸಲು ಬ್ರಿಟನ್​ನಿಂದ 4153 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಮಾರ್ಟ್ಲೆಟ್ ಮಿಸೈಲ್ ಖರೀದಿ ಮಾಡಲಿದೆ.

ಬ್ರಿಟನಿನ 9 ವಿಶ್ವವಿದ್ಯಾಲಯಗಳು ಭಾರತದಲ್ಲಿ ಕ್ಯಾಂಪಸ್ ತೆರೆಯಲಿವೆ. ಬಹುನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಇದೇ ವರ್ಷದ ಜುಲೈನಲ್ಲಿ ಸಹಿ ಹಾಕಿದ್ದು, ಬ್ರಿಟನ್ ಉದ್ಯಮಿಗಳು ಭಾರತದಲ್ಲಿ ಹೂಡಿಕೆಗೆ ಆಸಕ್ತಿ ತೋರಿದ್ದಾರೆ. ಬ್ರಿಟನ್ ಜತೆಗಿನ ಮುಕ್ತ ವ್ಯಾಪಾರ ಒಪ್ಪಂದದಿಂದಾಗಿ ಭಾರತದ ಜವಳಿ ಕ್ಷೇತ್ರದಿಂದ ಹಿಡಿದು ಇಂಜಿನಿಯರಿಂಗ್, ವೈದ್ಯಕೀಯ, ಖಾದ್ಯ ಪದಾರ್ಥ, ಸಮುದ್ರ ಉತ್ಪನ್ನಗಳ ಕ್ಷೇತ್ರಗಳಿಗೆ ಲಾಭವಾಗಲಿದೆ. ಯುಕೆಯಲ್ಲಿ ಭಾರತದ ಟೆಕ್ಸ್​ಟೈಲ್​ಗಳ ಮೇಲೆ ಶೇಕಡ 8ರಿಂದ 12ರವರೆಗೆ ಸುಂಕ ವಿಧಿಸಲಾಗುತ್ತಿತ್ತು. ಹೊಸ ಒಪ್ಪಂದದ ಮೂಲಕ ಇದು ಶೂನ್ಯಕ್ಕೆ ಬರಲಿರುವುದರಿಂದ, ಟೆಕ್ಸ್​ಟೈಲ್ ವಲಯಕ್ಕೆ ಶುಕ್ರದೆಸೆ. ಬಾಂಗ್ಲಾದೇಶ ಮತ್ತು ವಿಯೆಟ್ನಾಂಗಿಂತ ಕಡಿಮೆ ಬೆಲೆಗೆ ಗುಣಮಟ್ಟದ ಟೆಕ್ಸ್​ಟೈಲ್ ಒದಗಿಸುವುದರಿಂದ ಭಾರತ ಈ ರಂಗದಲ್ಲಿ ಇತರ ರಾಷ್ಟ್ರಗಳಿಗೆ ಪ್ರಬಲ ಸ್ಪರ್ಧೆವೊಡ್ಡಲಿದೆ.

ಸೂರತ್, ಲೂಧಿಯಾನದಂಥ ಎಕ್ಸ್​ಪೋರ್ಟ್ ಹಬ್​ಗಳು ಮುಂದಿನ ಮೂರು ವರ್ಷಗಳಲ್ಲಿ ಶೇಕಡ 40ರಷ್ಟು ಬೆಳವಣಿಗೆ ಕಾಣುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ಬಾಸ್ಮತಿ ಅಕ್ಕಿ, ಪ್ರೀಮಿಯಂ ಚಹಾ ಪುಡಿ, ಸಮುದ್ರೋತ್ಪನ್ನ ಸೇರಿದಂತೆ ವಿವಿಧ ಆಹಾರೋತ್ಪನ್ನಗಳಿಗೆ ಇನ್ಮುಂದೆ ಬ್ರಿಟನ್​ನ ಸುಂಕ ಇರುವುದಿಲ್ಲ. ಇದರಿಂದ ಅಸ್ಸಾಂ, ಗುಜರಾತ್, ಕೇರಳ ಮತ್ತು ಪಶ್ಚಿಮ ಬಂಗಾಳದಂಥ ರಾಜ್ಯಗಳ ರಫ್ತು ವಲಯ ಭಾರಿ ಬೆಳವಣಿಗೆಗೆ ಸಾಕ್ಷಿಯಾಗಲಿದೆ. ಉಭಯ ದೇಶಗಳ ನಡುವಿನ ಬಾಂಧವ್ಯವೃದ್ಧಿಯಿಂದ ಹೂಡಿಕೆ, ಉದ್ಯೋಗಸೃಷ್ಟಿಗೆ ಅನುಕೂಲವಾಗಲಿದೆ. ರಕ್ಷಣೆಯಿಂದ ಹಿಡಿದು ಶಿಕ್ಷಣ ಕ್ಷೇತ್ರದವರೆಗೆ ಮಹತ್ವದ ಒಪ್ಪಂದಗಳು ಏರ್ಪಟ್ಟಿದ್ದು, ಬ್ರಿಟನ್​ನಿಂದ ಇಷ್ಟು ದೊಡ್ಡ ನಿಯೋಗ ಭೇಟಿ ನೀಡಿದ್ದು ಇದೇ ಮೊದಲು. ಇಲ್ಲಿನ ಸಂಸ್ಕೃತಿ, ವೈವಿಧ್ಯತೆಗೆ ಮನಸೋತಿರುವ ಕೀರ್ ಸ್ಟಾರ್ಮರ್ ಈ ಸಹಕಾರ ಯುಗವನ್ನು ಮುಂದೆ ಕೊಂಡೊಯ್ಯುವ ಸಂಕಲ್ಪ ಮಾಡಿದ್ದಾರೆ. ಈ ಬೆಳವಣಿಗೆ ಉಭಯ ದೇಶಗಳ ಪಾಲಿಗೂ ಅಭಿವೃದ್ಧಿಯ ಹೊಸ ಅವಕಾಶವನ್ನು ಕಲ್ಪಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net