

‘ಸವೋಪಕಾರ ಕರಣಾಯ ಸದಾರ್ದ್ರ ಚಿತ್ತಾ’ (‘ಸರ್ವಜೀವಿಗಳಿಗೆ ಉಪಕಾರವನ್ನು ಮಾಡಲೋಸುಗವೇ ಸದಾ ದಯಾರ್ದ್ರ ಚಿತ್ತಳಾಗಿರುವ ಪರಮ ವಾತ್ಸಲ್ಯಮಯೀ’) ಎಂಬ ದೇವೀಸ್ತುತಿಯನ್ನು ಸಾಕಾರಗೊಳಿಸಲೆಂದೇ ಅವತರಿಸಿದಂತಿತ್ತು ಮಹಾಮಾತೆ ಶ್ರೀಶಾರದಾದೇವಿಯವರ ಆವಿರ್ಭಾವ. ಪ್ರಸಿದ್ಧವಾದ ಬಂಗಾಳಿ ಕವನವೊಂದು ‘ಕರುಣಾ ಪಾಥಾರ್ ಜನನೀ ಅಮಾರ್ ಏಲೇ ಮಾ ಕರುಣಾ ಕೊರಿತೇ’(‘ಜೀವರಾಶಿಯ ಮೇಲಿನ ಕನಿಕರದಿಂದ ಕಾರುಣ್ಯವನ್ನು ತೋರಲೆಂದೇ ಆವಿರ್ಭವಿಸಿದ ಮಹಾಶಕ್ತಿ ಶ್ರೀಮಾತೆ ಶಾರದಾದೇವಿ’) ಎಂದು ಸ್ತುತಿಸುತ್ತದೆ.
ಪ್ರಪಂಚವೆಂಬ ಗೊಂಡಾರಣ್ಯದಲ್ಲಿ ಸಿಲುಕಿಕೊಂಡು ನರಳುತ್ತಿರುವ ಜೀವಿಗಳಿಗೆ ಭಗವಾನ್ ಶ್ರೀರಾಮಕೃಷ್ಣರು ಭಗವಂತನ ಮಾತೃತ್ವವನ್ನು ಪ್ರಕಟಪಡಿಸಲು ತಮ್ಮ ಬಳುವಳಿಯಾಗಿ ಬಿಟ್ಟುಹೋದವರೇ ಶ್ರೀಮಾತೆ ಶಾರದಾದೇವಿಯವರು. ಶ್ರೀರಾಮಕೃಷ್ಣ ಪರಮಹಂಸರ ಸಹಧರ್ವಿುಣಿಯಾಗಿ ಒಬ್ಬ ಸಾಧಾರಣ ಗೃಹಿಣಿಯಂತೆ ಜೀವನ ನಡೆಸಿದರೂ ಅವರ ಪ್ರೀತಿ, ವಾತ್ಸಲ್ಯ, ಕರುಣೆಗಳಿಗೆ ಎಲ್ಲೆ ಇರಲಿಲ್ಲ; ಪ್ರೀತಿ-ವಾತ್ಸಲ್ಯಗಳ ತೆಕ್ಕೆಯಲ್ಲಿ ಸಮಸ್ತ ವಿಶ್ವವನ್ನೇ ತಮ್ಮ ಕುಟುಂಬವನ್ನಾಗಿರಿಸಿಕೊಂಡಿದ್ದ ವಿಶ್ವಕುಟುಂಬಿಯಾಗಿದ್ದವರು. ಅವರ ಜೀವನದಲ್ಲಿ ಕಣ್ಣುಕುಕ್ಕುವ ಪ್ರಖರವಾದ ಕಾಂತಿ ಇರಲಿಲ್ಲ ನಿಜ, ಆದರೆ ಅವರೊಂದು ಸೌಮ್ಯವಾದ ಕಣ್ಣಿಗೆ ತಂಪೆರೆಯುವ ಅಮೃತಸೇಚನದಂತೆ. ಗಂಗೆಯಂತೆ ಪಾವನವೂ, ಪವಿತ್ರವೂ ಆದ ಅವರ ಸಾನ್ನಿಧ್ಯಕ್ಕೆ ಬಂದ ಜೀವಿಗಳೆಲ್ಲರ ಪಾವಕ ಶಕ್ತಿಯಾಗಿದ್ದರು. ಪ್ರಾಚೀನ ಭಾರತದಲ್ಲಿ ಸೀತೆ ಹೇಗೆ ನಾರೀಕುಲಕ್ಕೆ ಭೂಷಣವಾಗಿದ್ದರೋ ಅಂತೆಯೇ ಆಧುನಿಕ ಭಾರತದ ನಾರೀ ಜೀವನದ ಆದರ್ಶದಲ್ಲಿ ಒಂದು ಹೊಸ ಅಧ್ಯಾಯವನ್ನೇ ಬರೆದಂತಿತ್ತು ಅವರ ಜೀವನ.
ಪಶ್ಚಿಮ ಬಂಗಾಳದ ಜಯರಾಮಬಾಟಿ ಎಂಬ ಚಿಕ್ಕ ಗ್ರಾಮದಲ್ಲಿ ಮುಖ್ಯೋಪಾಧ್ಯಾಯ ದಂಪತಿ ಮನೆಯಲ್ಲಿ ಹುಟ್ಟಿದ ಮುಗ್ಧ ಬಾಲಕಿ ವಯಸ್ಸಿಗೆ ಮೀರಿದ ಗಾಂಭೀರ್ಯ, ಸೇವಾಮನೋಭಾವ, ಸ್ನೇಹಶೀಲತೆಯನ್ನು ಹುಟ್ಟಿನಿಂದಲೇ ಮೈಗೂಡಿಸಿಕೊಂಡಿದ್ದರು. ಕಷ್ಟಸಹಿಷ್ಣುತೆ ಎಂಬುದು ಅವರಿಗೆ ಉಸಿರಾಟದಷ್ಟು ಸಹಜವಾಗಿತ್ತು. ಹಳ್ಳಿಗಳಲ್ಲಿ ಸಾಮಾನ್ಯ ಹೆಣುಮಕ್ಕಳು ಮಾಡುವ ಗದ್ದೆ ಕೆಲಸ, ಅಡಿಗೆ ಮತ್ತು ಸೆಗಣಿ ಸಾರಿಸುವ ಕೆಲಸ, ಚಿಕ್ಕಂದಿನಲ್ಲಿ ಮಾಡುತ್ತಿದ್ದ ಕಾಯಕಗಳಲ್ಲಾಗಲೀ ಮುಂದೆ ಪತಿಯ ಹಾಗೂ ಭಕ್ತಾದಿಗಳ ಊಟೋಪಚಾರಗಳನ್ನು ನೋಡಿಕೊಳ್ಳುತ್ತಿದ್ದ ಸೇವಾಕಾರ್ಯಗಳಲ್ಲಾಗಲೀ ಎದ್ದು ಕಾಣುತ್ತಿದ್ದುದು ಒಂದು ತಪಸ್ವಿನಿಯ ಜೀವನ. ‘ನಿರಂತರವಾದ ಭಗವಂತನ ಸ್ಮೃತಿ ಅಂತರಗಂಗೆಯಂತೆ ಅಂತರಂಗವನ್ನಾವರಿಸುತ್ತಿತ್ತು’ ಎಂದು ಅವರು ಮುಂದೆ ಹೇಳುತ್ತಾರೆ.
ಸ್ವಾಮಿ ವಿವೇಕಾನಂದರೇ ಮೊದಲಾಗಿ ಶ್ರೀರಾಮಕೃಷ್ಣರ ಶಿಷ್ಯರ ಭಕ್ತಿಗೌರವಕ್ಕೆ ಪಾತ್ರರಾಗಿರುವ ಗುರುಪತ್ನಿಯಾಗಿ, ಅವರೆಲ್ಲರ ಆರಾಧ್ಯಮೂರ್ತಿಯಾಗಿ, ಆಧ್ಯಾತ್ಮಿಕ ಮಾರ್ಗದರ್ಶನ ನೀಡುವ ಗುರುವಾಗಿ, ಸಂಸಾರದಲ್ಲಿ ನೊಂದು, ಬೆಂದು ಬಳಲಿ ಬಂದ ಜನರಿಗೆ ಅನುಕಂಪ, ಕರುಣೆಯನ್ನು ತೋರುವ ವಾತ್ಸಲ್ಯಮಯೀ ತಾಯಿಯಾಗಿ ಅವರು ವಹಿಸಿದ ವಿವಿಧ ಪಾತ್ರಗಳು ಎಲ್ಲರಿಗೂ ಗೋಚರವಾಗುತ್ತಿದ್ದರೂ ಇವೆಲ್ಲದರ ನೇಪಥ್ಯದಲ್ಲಿ ಉಜ್ವಲವಾದ ದಿವ್ಯಪ್ರತಿಭೆಯಿಂದ ವಿರಾಜಿಸುತ್ತಿದ್ದ ಒಂದು ಲೋಕೋತ್ತರ ವ್ಯಕ್ತಿತ್ವ ಶ್ರೀಮಾತೆಯದಾಗಿತ್ತು. ಶ್ರೀರಾಮಕೃಷ್ಣರ ಅಸಾಧಾರಣ ಜೀವನ ಉತ್ತುಂಗ ಹಿಮಾಲಯದಂತಿದ್ದರೆ, ಮಾತೆ ಶಾರದಾದೇವಿಯವರ ಜೀವನ ಹಿಮಾಲಯದಲ್ಲಿ ಹುಟ್ಟಿದ ಗಂಗೆಯಂತೆ. ಹಿಮಕರಗಿ ಉಂಟಾದ ತಪೋಜಲವನ್ನು ಜನಸಾಮಾನ್ಯರಿಗೆ ಆಪ್ಯಾಯಮಾನವಾಗಿ ಎಟುಕುವ ರೀತಿಯಲ್ಲಿ ಕೆಳಗಿಳಿದು ಬಯಲಿಗೆ ಬಂದ ಪವಿತ್ರ ಗಂಗೆ, ಮಾತೃವಾತ್ಸಲ್ಯದ ಭಾಗೀರಥಿ. ಎಲ್ಲರಿಗೂ ಅವರು ತಾಯಿಯಾಗಿದ್ದರು. ಪರತನ ಭಾವನೆಯನ್ನು ಮೀರಿನಿಂತ ವ್ಯಕ್ತಿತ್ವ ಅವರದು. ಎಷ್ಟೋ ಬಾರಿ ತಮ್ಮ ಬಳಿ ಬಂದವರಿಗೆ ‘ನಿಮ್ಮ ಜನ್ಮಜನ್ಮಾಂತರದ ತಾಯಿ ನಾನು’ ಎಂಬುದನ್ನು ತಿಳಿಸುತ್ತಿದ್ದರು. ಇನ್ನೊಮ್ಮೆ ಹೇಳಿದರು: ‘ನಾನು ಒಳ್ಳೆಯವರಿಗೆ ಹೇಗೆ ತಾಯಿಯೋ, ಕೆಟ್ಟವರಿಗೂ ಹಾಗೆಯೇ ತಾಯಿ.’ ಅನೈತಿಕ ಜೀವನವನ್ನು ನಡೆಸಿದ್ದಳೆಂಬ ಪಾಪಭೀತಿಯುಳ್ಳ ಒಬ್ಬ ಹೆಂಗಸು, ಒಮ್ಮೆ ಕಲ್ಕತ್ತದಲ್ಲಿ ಶ್ರೀಮಾತೆಯವರನ್ನು ನೋಡಲು ಬಂದಳು. ಆದರೆ ಕೊಠಡಿಯೊಳಗೆ ಪ್ರವೇಶಿಸಲು ಹಿಂಜರಿದು ಬಾಗಿಲ ಹೊರಗೆ ನಿಂತುಕೊಂಡಿದ್ದಳು. ತಾಯಿಗೆ ಎಲ್ಲವೂ ಅರ್ಥವಾಯಿತು. ಅವರೇ ಹೋಗಿ ಅವಳನ್ನು ಕೊಠಡಿಯೊಳಕ್ಕೆ ಕರೆದುಕೊಂಡು ಬಂದರು. ಅವಳಿಗೆ ಮಂತ್ರದೀಕ್ಷೆಯನ್ನೂ ನೀಡಿದರು. ‘ನೀನು ತಪ್ಪು ಮಾಡಿದ್ದರೇನಂತೆ? ಪಶ್ಚಾತ್ತಾಪಪಟ್ಟಿರುವುದರಿಂದ ನಿನ್ನ ಪಾಪವೆಲ್ಲವೂ ತೊಳೆದುಹೋಗಿದೆ’ಎಂದು ಅವಳಿಗೆ ಧೈರ್ಯ ಮತ್ತು ಸಾಂತ್ವನ ಹೇಳಿದರು. ಅನಂತರ ಆ ಮಹಿಳೆಯ ಜೀವನ ಉತ್ತಮವಾಯಿತು.
ಸಜ್ಜನ ಹಾಗೂ ದುರ್ಜನ ಎಂಬ ಯಾವುದೇ ತಾರತಮ್ಯವಿಲ್ಲದ ಅವರ ಪ್ರೀತಿ-ವಾತ್ಸಲ್ಯಗಳಿಗೆ ತಮ್ಮ ಸೇವೆಯಲ್ಲೇ ಜೀವನವನ್ನು ಸವೆಸುತ್ತಿದ್ದ ಶಾರದಾನಂದರ ಮೇಲೆ ಅವರಿಗೆ ಎಷ್ಟು ಪ್ರೀತಿಯೋ, ಅಷ್ಟೇ ಪ್ರೀತಿ ವಾತ್ಸಲ್ಯ ಕಳ್ಳತನ, ದರೋಡೆಗಳಿಗೆ ಕುಖ್ಯಾತನಾಗಿದ್ದ ಅಮ್ದ್ ಮೇಲೂ ಇತ್ತು. ‘ನನ್ನ ಮಗುವೊಂದು ಕೆಸರಿನಲ್ಲಿ ಹೊಲಸು ಮಾಡಿಕೊಂಡಿದ್ದರೆ ನಾನೇ ಅದನ್ನು ತೊಳೆದು ಶುದ್ಧ ಮಾಡಬೇಕಲ್ಲವೆ’ ಎನ್ನುವ ಮಾತೃಭಾವದಿಂದಲೇ ಅವರು ಎಲ್ಲರನ್ನೂ ಕಾಣುತ್ತಿದ್ದರು. ಶ್ರೀಮಾತೆಯವರು ಧರೆಗಿಳಿದ ಪತಿತ ಪಾವನೆ, ಕರುಣಾಗಂಗೆಯಾಗಿ ಅನೇಕ ತಪ್ಪಿತಸ್ಥರನ್ನು ಕರುಣೆ ಎಂಬ ಮಾತೃಶಕ್ತಿಯಿಂದ ರಕ್ಷಿಸಿ, ಮೇಲೆತ್ತಿ ಪರಿವರ್ತನೆಗೊಳಿಸಿದ್ದಾರೆ.
ಅವರ ಜೀವನ ಮೇಲ್ನೋಟಕ್ಕೆ ಅತ್ಯಂತ ಸರಳ ಎಂದು ಕಂಡರೂ, ಅವರ ವ್ಯಾವಹಾರಿಕ ಬದುಕು ಸುಖಮಯವೇನೂ ಆಗಿರಲಿಲ್ಲ. ವಿಶೇಷವಾಗಿ ಶ್ರೀರಾಮಕೃಷ್ಣರ ನಿರ್ಯಾಣಾನಂತರದ ಅವರ ಬದುಕು ಸಂಕಷ್ಟಗಳಿಂದಲೇ ಕೂಡಿತ್ತು. ಕೆಲಕಾಲ ಅನ್ನಕ್ಕೆ ಉಪ್ಪೂ ಇರದಂಥ ಬಡತನ. ಮುಂದೆ ಶ್ರೀರಾಮಕೃಷ್ಣರ ಶಿಷ್ಯಂದಿರು ಅವರ ಕನಿಷ್ಠ ಸೌಕರ್ಯಗಳಿಗಾಗಿ ವ್ಯವಸ್ಥೆಯನ್ನು ಮಾಡಿದರೂ, ಬಂಧುವರ್ಗದವರು ಜೀವನೋಪಾಯಕ್ಕಾಗಿ ಅವರನ್ನೇ ಅವಲಂಬಿಸಿರುತ್ತಿದ್ದರು. ಇದೆಲ್ಲ ಸಾಲದೆಂಬಂತೆ ಮನೋವೈಕಲ್ಯದಿಂದ ನರಳುತ್ತಿದ್ದ ಅವರ ಸೋದರಸೊಸೆ ಕೊಡುತ್ತಿದ್ದ ಕಿರುಕುಳ. ಸಾಲದೆಂಬಂತೆ ಹುಚ್ಚಿಯ ಮಗಳಾದ ರಾಧುವಿನ ಲಾಲನೆ ಪಾಲನೆ. ಇಷ್ಟೆಲ್ಲ ದೈನಂದಿನ ಗೃಹಕೃತ್ಯ ಜಂಜಾಟಗಳ ಮಧ್ಯದಲ್ಲಿ ಸಿಕ್ಕಿದ್ದರೂ ಅಸಾಧಾರಣ ತಾಳ್ಮೆ, ಸರಳತೆ, ಎಲ್ಲರೊಡನೆ ಜೊತೆಗೂಡಿ ಬಾಳಿಬದುಕುವ ಸಹಜೀವನದ ಪಾಠ, ಅಸಾಧಾರಣ ತಪಸ್ಸು, ಆಧ್ಯಾತ್ಮಿಕ ಸಾಧನೆ, ಪೂಜೆ ಮತ್ತು ದಿನನಿತ್ಯದ ಕೃತ್ಯಗಳನ್ನು ದಿನಚರಿಯಲ್ಲಿ ಮೈಗೂಡಿಸಿಕೊಂಡಿದ್ದನ್ನು ಕಾಣಬಹುದು.
ಶ್ರೀಮಾತೆಯವರು ಎಷ್ಟೋ ಸಲ ಉರಿಬಿಸಿಲಿನಲ್ಲಿ ಬಂದು ಪ್ರಸಾದ ಸ್ವೀಕರಿಸುತ್ತಿದ್ದ ಭಕ್ತರಿಗೆ ಬೀಸಣಿಕೆ ಬೀಸಿ ಉಪಚಾರ ಮಾಡುತ್ತಿದ್ದುದುಂಟು. ಅಷ್ಟೇ ಅಲ್ಲ ಅವರ ಊಟದ ತಟ್ಟೆಗಳನ್ನು ಹಾಗೂ ಊಟ ಮಾಡಿದ ಸ್ಥಳವನ್ನು ಸ್ಚಚ್ಛಗೊಳಿಸುತ್ತಿದ್ದರು. ಒಮ್ಮೊಮ್ಮೆ ತಮ್ಮ ಆರೋಗ್ಯ ಸರಿಯಾಗಿಲ್ಲದಿದ್ದರೂ ಭಕ್ತರ ಪ್ರಾರ್ಥನೆಗೆ ಮಣಿದು ಅವರಿಗೆ ಮಂತ್ರೋಪದೇಶ ನೀಡುತ್ತಿದ್ದುದುಂಟು.
‘ಮಹಾತ್ಮರ ಬದುಕೇ ಅವರ ಸಂದೇಶ’ ಎಂಬ ಮಾತಿದೆ. ‘ನಿನಗೆ ಜೀವನದಲ್ಲಿ ಶಾಂತಿ ಬೇಕಾದರೆ ಇತರರ ದೋಷಗಳನ್ನು ನೋಡಬೇಡ. ಎಲ್ಲರನ್ನೂ ನಿನ್ನವರಂತೆಯೇ ಕಾಣು’ ಎಂಬುದು ಅವರ ಬದುಕಿನ ಜೀವನಾದರ್ಶ ಹಾಗೂ ಜಗತ್ತಿಗೆ ಅವರು ನೀಡಿದ ಕೊನೆಯ ಸಂದೇಶವೂ ಆಗಿತ್ತು. ಇನ್ನೊಬ್ಬರಲ್ಲಿ ಯಾವಾಗಲೂ ತಪ್ಪು ಕಂಡುಹಿಡಿಯುವ, ಪರನಿಂದೆಯಲ್ಲೇ ನಿರತವಾದ ಮನಸ್ಸು ತನ್ನ ಶಕ್ತಿಯನ್ನು ಕಳೆದುಕೊಂಡು ರಚನಾತ್ಮಕ ಅಥವಾ ಸಕಾರಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗದೆ ಮನೋದೌರ್ಬಲ್ಯಕ್ಕೆ ಒಳಗಾಗಿರುತ್ತದೆ. ಇಂತಹ ನೇತ್ಯಾತ್ಮಕ ಮನೋಭಾವ ತ್ಯಜಿಸಿ ನಮ್ಮ ಮನೋವ್ಯಾಪಾರಗಳನ್ನು ಸೂಕ್ಷ್ಮವಾಗಿ ಗಮನಿಸುವ ಪ್ರಜ್ಞೆ ಬೆಳೆಸಿಕೊಂಡಾಗ ಮಾತ್ರವೇ ಬದುಕು ಸಾರ್ಥಕತೆ ಪಡೆಯಲು ಸಾಧ್ಯ.
ಮಹಾಮಾತೆಯವರ ಬದುಕನ್ನು ಕುರಿತು ಅವಲೋಕನ ಮಾಡಿದಷ್ಟೂ ತಂದೆತಾಯಿಯರ ಸೇವೆ ಮಾಡುತ್ತಿದ್ದ ಆದರ್ಶ ಮಗಳಾಗಿ, ಸಂಸಾರದ ಹೊಣೆ ನಿಭಾಯಿಸುತ್ತಿದ್ದ ಆದರ್ಶಗೃಹಿಣಿಯಾಗಿ, ಪತಿಯ ಅವತಾರದ ಉದ್ದೇಶವನ್ನು ಪೂರ್ತಿಮಾಡಲು ಹೆಗಲು ಕೊಟ್ಟ ಸಹಧರ್ವಿುಣಿಯಾಗಿ, ಬಂಧುವರ್ಗದವರಿಗೆ ಆಸರೆಯಾಗಿ, ಸಾಧಕವರ್ಗಕ್ಕೆ ಆದರ್ಶಗುರುವಾಗಿ, ಎಲ್ಲರಿಗೂ ಪ್ರೀತಿ ವಾತ್ಸಲ್ಯಗಳನ್ನು ಹಂಚಿದ ಕರುಣಾಮಯಿಯಾಗಿ, ಆಧ್ಯಾತ್ಮಿಕ ಜಗತ್ತಿನ ವಿಸ್ಮಯಕಾರಿಯಾದ ಒಂದು ಅಪೂರ್ವ ಶಕ್ತಿಯಾಗಿ ಕಂಗೊಳಿಸುತ್ತಾರೆ.
ಆಧುನಿಕ ನಾರಿಗೆ ಬೇಕಾದ ಒಂದು ಪ್ರಾಯೋಗಿಕ, ಸನಾತನ ಆದರ್ಶದ ಅವಶ್ಯಕತೆಯನ್ನು ಶ್ರೀಶಾರದಾದೇವಿಯವರು ತಮ್ಮ ಸರಳ, ಸುಂದರ ಕರ್ತವ್ಯಪ್ರಜ್ಞೆಯಿಂದ ಒಡಗೂಡಿದ ಆಧ್ಯಾತ್ಮಿಕ ನೆಲೆಯಿರುವ ಜೀವನದ ಮೂಲಕ ಇಟ್ಟಿದ್ದಾರೆ ಎನ್ನಬಹುದು. ಅವರು ದೈವೋನ್ಮಾದದಿಂದ ತುಂಬಿದ ಅವತಾರಪುರುಷರೆನಿಸಿಕೊಂಡ ಶ್ರೀರಾಮಕೃಷ್ಣ ಪರಮಹಂಸರ ಸಹಧರ್ವಿುಣಿಯಾಗಿ ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದರು. ರಾಮಕೃಷ್ಣ ಮಹಾಸಂಘದ ಆಧಾರಶಕ್ತಿಯಾಗಿ, ಕಷ್ಟ-ಸಂಕಷ್ಟಗಳಿಗೊಳಗಾದವರಿಗೆ ಅನುಕಂಪದ ಕಂಪನ್ನು ಸೂಸುವ ಗುರುಮಾತೆಯಾಗಿ ಎಲ್ಲರ ಮೇಲೆ ಪ್ರೀತಿಯ ಕೃಪೆಯನ್ನು ಹರಿಸಿದರು. ಅವರ ಜೀವನದ ಆಯಾಮಗಳನ್ನು ಕಂಡು, ಗುರುತಿಸಿ ಅನುಸರಿಸಿದರೆ ಇಂದಿನ ನಾರಿಯರು ಗೃಹತಪಸ್ವಿನಿಯಾಗಿ ಸಾರ್ಥಕವಾದ ಆನಂದಮಯ ಜೀವನವನ್ನು ನಡೆಸಬಹುದು.
ಅವರ ಜೀವನ ಅನನ್ಯ, ಸ್ವಾರಸ್ಯಕರ, ಹೃನ್ಮನಕ್ಕೆ ಶಾಂತಿ, ಸಮಾಧಾನ ಮತ್ತು ಪ್ರೀತಿಯ ತಂಪನ್ನು ಬೀರುವ ಮಾತೃತ್ವದ ದಿವ್ಯ ಆಗರ. ಅವತಾರಪುರುಷರಾದ ಶ್ರೀರಾಮಕೃಷ್ಣ ಪರಮಹಂಸರ ಧರ್ಮಪತ್ನಿಯಾಗಿ ಅವರಿಂದ ದೇವಿಸ್ವರೂಪಿಣಿ ಎಂದು ಪೂಜಿಸಲ್ಪಟ್ಟವರು. ಅತ್ಯಂತ ಸರಳವಾದ ಜೀವನ ನಡೆಸುತ್ತಿದ್ದ ಶ್ರೀಮಾತೆ ಶಾರದಾದೇವಿಯವರ ಜೀವನದಲ್ಲಿ ಅವರ ಹಿರಿಮೆ, ಗರಿಮೆ, ದೈವತ್ವ ಮೇಲ್ನೋಟಕ್ಕೆ ಕಂಡುಬರದಿದ್ದರೂ, ಸರಿಯಾಗಿ ಪರಿಶೀಲಿಸಿದರೆ, ಅವರ ದೈವಿ ಸ್ವರೂಪವನ್ನು, ಆಧ್ಯಾತ್ಮಿಕ ಸಾಧನೆ ಹಾಗೂ ಅದರಿಂದ ಪರಿಪಕ್ವವಾದ ಸದೃಢ ಶಾಂತ ಮನಸ್ಸನ್ನು ಕಾಣಬಹುದು.
ಇಂದು ಶ್ರೀಮಾತೆಯವರ ಜನ್ಮದಿನದಂದು ಅವರ ಕೃಪೆಗಾಗಿ ಕಾತರತೆಯಿಂದ ಪ್ರಾರ್ಥನೆ ಸಲ್ಲಿಸುವ ಭಕ್ತರ ಅಂತರಾಳದ ಪ್ರಾರ್ಥನೆಯ ದನಿಯನ್ನು ದುರ್ಗಾಸಪ್ತಶತಿಯಲ್ಲಿ ಈ ರೀತಿ ಕಾಣಬಹುದು: ದೇವಿ ಪ್ರಪನ್ನಾರ್ತಿ ಹರೇ ಪ್ರಸೀದ ಪ್ರಸೀದ ಮಾತರ್ಜಗತೋ ಖಿಲಸ್ಯ ಪ್ರಸೀದ ವಿಶ್ವೇಶ್ವರಿ ಪಾಹಿ ವಿಶ್ವಂ ತ್ವಮೀಶ್ವರೀ ದೇವಿ ಚರಾಚರಸ್ಯ (ದುರ್ಗಾ ಸಪ್ತಶತಿ 11ನೇ ಅಧ್ಯಾಯ)
(ಲೇಖಕರು ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರು)