ಸಂಪಾದಕೀಯ; ಸಂತ್ರಸ್ತರ ನೆರವಿಗೆ ಧಾವಿಸಿ

Untitled design
Published on

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕಳೆದ ಹಲವಾರು ದಿನಗಳಿಂದ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಮಳೆಯಾಗುತ್ತಿದೆ. ಇದರಿಂದಾಗಿ, ಬೆಳೆದು ನಿಂತ ಬೆಳೆಗಳು ನೀರಲ್ಲಿ ಮುಳುಗಿ ಹಾಳಾಗುತ್ತಿವೆ. ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ದಿಕ್ಕುಕಾಣದಂತಾಗಿದ್ದಾರೆ. ಬಳ್ಳಾರಿ, ಕಲಬುರಗಿ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಧಾರವಾಡ, ಹಾವೇರಿ ಮುಂತಾದ ಜಿಲ್ಲೆಗಳು ಅತಿವೃಷ್ಟಿಯ ಸಮಸ್ಯೆಯನ್ನು ತೀವ್ರವಾಗಿ ಎದುರಿಸುತ್ತಿವೆ. ಬೆಳ್ಳುಳ್ಳಿ, ಈರುಳ್ಳಿ, ಕಾಫಿ, ತೊಗರಿ, ಉದ್ದು, ಸೋಯಾಬೀನ್, ಮೆಣಸಿನಕಾಯಿ, ಕಬ್ಬು, ಜೋಳ, ಗೋಧಿ ಮುಂತಾದ ಬೆಳೆಗಳು ಹಾನಿಗೀಡಾಗಿವೆ. ಮುಂಗಾರು ಆರಂಭದಿಂದಲೇ ಮಳೆ ಸಂಬಂಧಿ ಅನಾಹುತಗಳಿಂದ ಕೆಲವಡೆ ಜೀವಹಾನಿ ಸಂಭವಿಸಿದ್ದರೆ, ಹಲವು ಜಿಲ್ಲೆಗಳಲ್ಲಿ ಆಸ್ತಿಪಾಸ್ತಿ ಹಾನಿಯಾಗಿದೆ. ಈಗ ಮತ್ತೆ ಮಳೆ ಅಬ್ಬರ ಜಾಸ್ತಿಯಾಗಿರುವುದರಿಂದ ಹಾನಿಯ ಪ್ರಮಾಣ ಹೆಚ್ಚಿದೆ. ಬೆಳೆ ಕೈಗೆ ಸಿಗುವ ಮೊದಲೇ ರೈತರಿಗೆ ಆಘಾತವಾಗಿದೆ. ಬೆಳೆಗಳು ನೀರಿನಲ್ಲಿ ಮುಳುಗಿದ್ದು, ಮುಂದಿನ ಹಲವಾರು ದಿನಗಳ ಕಾಲ ಕೃಷಿ ಚಟುವಟಿಕೆಗಳು ನಡೆಸದಂಥ ಸ್ಥಿತಿ ಸೃಷ್ಟಿಯಾಗಿದೆ. ಪ್ರಮುಖ ಬೆಳೆಗಳೇ ನಷ್ಟವಾಗಿರುವುದರಿಂದ ರೈತರ ಸ್ಥಿತಿ ಶೋಚನೀಯವಾಗಿದೆ. ಸಾಲ ಮಾಡಿ ಬೀಜ, ರಸಗೊಬ್ಬರ, ಕ್ರಿಮಿನಾಶಕ ಖರೀದಿಸಿ ಬಿತ್ತನೆ ಮಾಡಿದ್ದ ರೈತರು ಆರ್ಥಿಕ ಸಂಕಷ್ಟದಿಂದ ತತ್ತರಿಸಿ ಹೋಗಿದ್ದಾರೆ.

ಈ ಸಂಕಷ್ಟದ ಸಮಯದಲ್ಲಿ ರೈತರ ನೆರವಿಗೆ ಧಾವಿಸಬೇಕಾದದ್ದು ರಾಜ್ಯ ಸರ್ಕಾರದ ಕರ್ತವ್ಯ. ಕೆಲವೆಡೆ ಮನೆಗಳು ಬಿದ್ದು, ನೂರಾರು ಜನ ನಿರ್ವಸಿತರಾಗಿದ್ದಾರೆ. ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ. ಮಳೆ ಸಂಬಂಧಿತ ಹಾನಿಯನ್ನು ತಡೆಗಟ್ಟಲು ಸರ್ಕಾರದ ಇಚ್ಛಾಶಕ್ತಿ ತುಂಬ ಅವಶ್ಯ ಎಂಬುದನ್ನು ಮರೆಯುವಂತಿಲ್ಲ. ಅಧಿಕಾರಿಗಳು ಜಡತ್ವವನ್ನು ತೊರೆದು ಜನರ ಸಂಕಷ್ಟವನ್ನು ಅರಿಯುವ, ಸಂವೇದನೆಗೆ ಮಿಡಿಯುವ ರೀತಿಯಲ್ಲಿ ಕೆಲಸ ಮಾಡಬೇಕು. ಜಿಲ್ಲಾಡಳಿತಗಳು ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು. ಮಳೆಸಂಬಂಧಿ ಅನಾಹುತಗಳ ನಿರ್ವಹಣೆಗೆ ಜಿಲ್ಲಾವರು ಸಹಾಯವಾಣಿ ಆರಂಭಿಸುವುದು ಸೂಕ್ತ. ಕೆಲವೆಡೆ ಆರಂಭಿಸಿದ್ದರೂ, ಅವು ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರು ಇದೆ. ಅದನ್ನು ಸರಿಪಡಿಸುವ ಹೊಣೆಗಾರಿಕೆ ಜಿಲ್ಲಾಡಳಿತಗಳ ಮೇಲಿದೆ.

ಇನ್ನು ಕೆಲ ದಿನ ಮಳೆ ಮುಂದುವರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಆದ್ದರಿಂದ, ಮುಂದಿನ ದಿನಗಳ ಮಳೆ ಹಾನಿಯ ಪ್ರಮಾಣವನ್ನು ತಗ್ಗಿಸಲು, ಜನರಿಗೆ ಸೂಕ್ತ ನೆರವು ಒದಗಿಸಲು ಶ್ರಮಿಸಬೇಕು, ಈ ನಿಟ್ಟಿನಲ್ಲಿ ಸೂಕ್ತ ಯೋಜನೆ ರೂಪಿಸಿಕೊಳ್ಳಬೇಕು. ಮುಖ್ಯವಾಗಿ, ರೈತರಲ್ಲಿ ಆತ್ಮಸ್ಥೈರ್ಯ ತುಂಬಿ, ‘ನಿಮ್ಮೊಂದಿಗೆ ನಾವು ಇದ್ದೇವೆ’ ಎಂಬ ಭರವಸೆಯನ್ನು ಸರ್ಕಾರ ನೀಡಿ, ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ. ಸಹಾಯಹಸ್ತ ಚಾಚಬೇಕಿದೆ. ಈ ನಿಟ್ಟಿನಲ್ಲಿ ಹಾನಿಗೊಳಗಾದ ಪ್ರದೇಶಗಳಿಗೆ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಯದರ್ಶಿಗಳು ಭೇಟಿ ನೀಡಬೇಕು. ಹಾನಿಯ ಕುರಿತಂತೆ ತ್ವರಿತ ಸಮೀಕ್ಷೆ ನಡೆಸಿ ತಕ್ಷಣವೇ ರೈತರಿಗೆ, ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸಬೇಕು. ಆಸ್ತಿಪಾಸ್ತಿ ಹಾನಿಯ ಕುರಿತಂತೆಯೂ ಸೂಕ್ತ ಸಮೀಕ್ಷೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಬೇಕು. ಈ ವಿಷಯದಲ್ಲಿ ವಿಳಂಬ ಧೋರಣೆಯನ್ನು ತ್ಯಜಿಸಬೇಕು. ತಾಂತ್ರಿಕ ಅಡಚಣೆಗಳ ಸಬೂಬನ್ನು ಹೇಳದೆ ಪ್ರಾಮಾಣಿಕ ನೆಲೆಯಲ್ಲಿ ಕಾರ್ಯನಿರ್ವಹಿಸಿ ಜನರ ಕಣ್ಣೀರನ್ನು ಒರೆಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net