ಸಂಪಾದಕೀಯ; ವಿಶ್ವಾಸಾರ್ಹತೆಯ ಪರೀಕ್ಷೆ

Editorial
Editorial
Published on
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್​ಸಿ) ರಾಜ್ಯದ ಅತ್ಯುನ್ನತ ಆಡಳಿತಾತ್ಮಕ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿಯುತ ಸಾಂವಿಧಾನಿಕ ಸಂಸ್ಥೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಸಂಸ್ಥೆ ತನ್ನ ಘನತೆಗೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ ಎಂಬುದು ಪದೇಪದೆ ಸಾಬೀತಾಗುತ್ತಿದೆ. ಇತ್ತೀಚೆಗೆ ನಡೆದ ಗೆಜೆಟೆಡ್ ಪೊ›ಬೇಷನರ್ಸ್ ಪೂರ್ವಭಾವಿ ಪರೀಕ್ಷೆಯಲ್ಲಿ ಉಂಟಾದ ಎಡವಟ್ಟುಗಳು ಆಯೋಗದ ಕಾರ್ಯವೈಖರಿಯನ್ನು ಮತ್ತೊಮ್ಮೆ ಸಾರ್ವಜನಿಕವಾಗಿ ನಗೆಪಾಟಲಿಗೀಡು ಮಾಡಿವೆ. ಸಾವಿರಾರು ಯುವಜನರ ಕನಸು ಮತ್ತು ಭವಿಷ್ಯದೊಂದಿಗೆ ಆಟವಾಡುತ್ತಿರುವ ಆಯೋಗಕ್ಕೆ ಇದು ಒಂದು ತಾಂತ್ರಿಕ ದೋಷವಾಗಿ ಕಂಡಿರಬಹುದು, ಆದರೆ ಇದು ನಿರ್ಲಕ್ಷ್ಯದ ಪರಾಕಾಷ್ಠೆಯಾಗಿದೆ.
ಈ ಬಾರಿಯ ಪರೀಕ್ಷೆಯಲ್ಲಿ ಕನ್ನಡಕ್ಕೆ ಅನುವಾದಿಸಲಾದ ಪ್ರಶ್ನೆಗಳು ಗೊಂದಲದ ಗೂಡಾಗಿದ್ದವು. ಗೂಗಲ್ ಟ್ರಾನ್ಸ್​ಲೇಟ್​ನಂತಹ ತಂತ್ರಜ್ಞಾನವನ್ನು ಅವಲಂಬಿಸಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದಂತೆ ಭಾಸವಾಗುತ್ತಿದ್ದು, ಅನೇಕ ಪ್ರಶ್ನೆಗಳು ಅರ್ಥಹೀನವಾಗಿದ್ದವು. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಇದು ದೊಡ್ಡ ಹೊಡೆತ ನೀಡಿದೆ. ಇಂಗ್ಲಿಷ್​ನಲ್ಲಿರುವ ಪ್ರಶ್ನೆಗಳನ್ನು ಸರಿಯಾಗಿ ಅರ್ಥೈಸಿಕೊಂಡು ಉತ್ತರಿಸುವಷ್ಟರಲ್ಲಿ ಸಮಯ ಮೀರಿಹೋಗುವ ಆತಂಕ ಅಭ್ಯರ್ಥಿಗಳನ್ನು ಕಾಡಿದೆ. ರಾಜ್ಯದ ಆಡಳಿತ ಭಾಷೆಯಲ್ಲೇ ಸರಿಪಡಿಸಲಾಗದಷ್ಟು ದೋಷಗಳಿರುವ ಪ್ರಶ್ನೆಪತ್ರಿಕೆ ಸಿದ್ಧಪಡಿಸಿರುವುದು ಆಯೋಗದ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತದೆ.
ಕೆಪಿಎಸ್​ಸಿಯಲ್ಲಿ ಇಂತಹ ಲೋಪಗಳು ಇದೇ ಮೊದಲಲ್ಲ. ಪ್ರತಿ ಬಾರಿ ಪರೀಕ್ಷೆ ನಡೆದಾಗಲೂ ಪ್ರಶ್ನೆಪತ್ರಿಕೆ ಸೋರಿಕೆ, ಉತ್ತರಗಳಲ್ಲಿನ ತಪ್ಪುಗಳು ಅಥವಾ ನೇಮಕಾತಿ ಪ್ರಕ್ರಿಯೆಯಲ್ಲಿನ ಪಾರದರ್ಶಕತೆಯ ಕೊರತೆಯಿಂದಾಗಿ ನ್ಯಾಯಾಲಯದ ಮೆಟ್ಟಿಲೇರುವುದು ಸಾಮಾನ್ಯವಾಗಿದೆ. ಇದು ಅಭ್ಯರ್ಥಿಗಳಲ್ಲಿ ಆಯೋಗದ ಮೇಲೆ ನಂಬಿಕೆ ಕುಂದಲು ಮುಖ್ಯ ಕಾರಣವಾಗಿದೆ. ಪರೀಕ್ಷೆ ಬರೆಯುವ ಅಭ್ಯರ್ಥಿಗಳು ವರ್ಷಗಟ್ಟಲೆ ಕಷ್ಟಪಟ್ಟು ಸಿದ್ಧತೆ ನಡೆಸಿರುತ್ತಾರೆ. ಆದರೆ ಆಯೋಗದ ಒಂದು ಸಣ್ಣ ನಿರ್ಲಕ್ಷ್ಯ ಅವರ ಇಡೀ ವರ್ಷದ ಪರಿಶ್ರಮವನ್ನು ವ್ಯರ್ಥಗೊಳಿಸುತ್ತದೆ. ಪರೀಕ್ಷಾ ಪ್ರಕ್ರಿಯೆಯಲ್ಲಿನ ಇಂತಹ ಲೋಪದೋಷಗಳು ಕೇವಲ ತಾಂತ್ರಿಕ ತಪ್ಪುಗಳಲ್ಲ, ಬದಲಿಗೆ ಇಡೀ ಆಡಳಿತ ವ್ಯವಸ್ಥೆಯ ವೈಫಲ್ಯದ ಸಂಕೇತವಾಗಿದೆ.
ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್​ಸಿ) ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳಿಗೆ ಅತ್ಯಂತ ಪಾರದರ್ಶಕವಾಗಿ, ನಿಗದಿತ ವೇಳಾಪಟ್ಟಿಯಂತೆ ಪರೀಕ್ಷೆ ನಡೆಸುತ್ತದೆ. ಆ ಮಾದರಿಯನ್ನು ಅನುಸರಿಸುವ ಭರವಸೆಗಳನ್ನು ಕೆಪಿಎಸ್​ಸಿ ನೀಡುತ್ತಲೇ ಬಂದಿದೆಯಾದರೂ, ಕಾರ್ಯರೂಪಕ್ಕೆ ತರುತ್ತಿಲ್ಲ. ಕೆಪಿಎಸ್​ಸಿಯಲ್ಲಿ ಅಮೂಲಾಗ್ರ ಸುಧಾರಣೆ ಅಗತ್ಯವಿದೆ. ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ವಿಷಯ ತಜ್ಞರ ಸಮಿತಿ ಹೆಚ್ಚು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕಿದೆ. ತಪ್ಪು ಎಸಗಿದ ಅಧಿಕಾರಿಗಳು, ತಜ್ಞರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.
ಆಯೋಗ ತನ್ನ ಕಳೆದುಹೋದ ವಿಶ್ವಾಸಾರ್ಹತೆಯನ್ನು ಮರಳಿ ಪಡೆಯಬೇಕಾದರೆ ಪರೀಕ್ಷಾ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ತಾಂತ್ರಿಕವಾಗಿ ಸಮರ್ಥವಾಗಿರುವ ತಂಡವನ್ನು ನೇಮಿಸಿಕೊಳ್ಳುವುದು ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಇಂದಿನ ತುರ್ತು ಅಗತ್ಯ. ಅಭ್ಯರ್ಥಿಗಳ ಹಿತರಕ್ಷಣೆ ಮತ್ತು ಅರ್ಹರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು ಆದ್ಯತೆಯಾಗಲಿ. ಕೆಪಿಎಸ್​ಸಿ ತನ್ನ ಕಾರ್ಯವೈಖರಿ ಸರಿಪಡಿಸಿಕೊಳ್ಳದಿದ್ದರೆ, ರಾಜ್ಯದ ಆಡಳಿತ ಯಂತ್ರಕ್ಕೆ ದಕ್ಷ ಅಧಿಕಾರಿಗಳನ್ನು ಒದಗಿಸುವ ಅದರ ಮೂಲ ಉದ್ದೇಶವೇ ವಿಫಲವಾಗಲಿದೆ. ವಿಳಂಬ ಮಾಡದೆ ತಕ್ಷಣವೇ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಿ, ಯುವಜನರಲ್ಲಿ ಭರವಸೆ ಮೂಡಿಸುವ ಕೆಲಸವಾಗಬೇಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net