ಸಂಪಾದಕೀಯ | ರೆಪೊ ದರ ಯಥಾಸ್ಥಿತಿಗೆ; ಸಾಲ ಗ್ರಾಹಕರಿಗೆ ನಿರಾಳ

RBI
Published on

ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಹಣಕಾಸು ನೀತಿ ಸಮಿತಿಯು ತನ್ನ ತ್ರೈಮಾಸಿಕ ವಿತ್ತೀಯ ನೀತಿಯನ್ನು ಪ್ರಕಟಿಸಿದ್ದು, ರೆಪೊ ದರವನ್ನು ಶೇಕಡಾ 6.5ರ ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಿರುವುದು ಸಮಾಧಾನಕರ ಸಂಗತಿಯಾಗಿದೆ. ಕಳೆದ ಏಪ್ರಿಲ್​ನಲ್ಲಿ ಚಿಲ್ಲರೆ ಹಣದುಬ್ಬರ ಇಳಿಕೆ ಮತ್ತು ಭವಿಷ್ಯದಲ್ಲಿ ಇನ್ನಷ್ಟು ಇಳಿಕೆಯ ಸಾಧ್ಯತೆಯ ಹಿನ್ನೆಲೆಯಲ್ಲಿ ಮಾರುಕಟ್ಟೆ ಕೂಡ ರೆಪೊ ದರ ಯಥಾಸ್ಥಿತಿಯನ್ನು ನಿರೀಕ್ಷಿಸಿತ್ತು. ಸತತ ಮೂರನೇ ಬಾರಿಗೆ ರೆಪೊ ದರವನ್ನು ಯಥಾಸ್ಥಿತಿಯಲ್ಲಿಯೇ ಉಳಿಸಿಕೊಂಡಿರುವುದು ಕೋವಿಡ್ ಸಾಂಕ್ರಾಮಿಕ ಹಾವಳಿಯ ನಂತರ ಹಿನ್ನಡೆ ಅನುಭವಿಸಿದ್ದ ದೇಶದ ಆರ್ಥಿಕತೆಯು ಸ್ಥಿರತೆಯತ್ತ ಹೆಜ್ಜೆ ಹಾಕುತ್ತಿದೆ ಎಂಬುದರ ಸೂಚಕ ಕೂಡ ಆಗಿದೆ. ಕಳೆದೊಂದು ವರ್ಷದಿಂದ ಬಡ್ಡಿ ದರ ಹೆಚ್ಚಳವನ್ನೇ ಕಾಣುತ್ತ ಬಂದಿರುವ ಸಾಲ ಗ್ರಾಹಕರು ಆರ್​ಬಿಐನ ಪ್ರಸ್ತುತ ನಿರ್ಧಾರದಿಂದ ಒಂದಿಷ್ಟು ನಿರಾಳತೆ ಅನುಭವಿಸುವಂತಾಗಿದೆ.

ಬ್ಯಾಂಕ್​ಗಳಿಗೆ ತಾನು ಕೊಡುವ ಸಾಲದ ಹಣದ ಮೇಲೆ ವಿಧಿಸುವ ನಿಶ್ಚಿತ ಬಡ್ಡಿ ದರವೇ ರೆಪೊ ದರವಾಗಿದೆ. ಹಣದುಬ್ಬರವನ್ನು ಅಂದರೆ ಬೆಲೆ ಏರಿಕೆಯನ್ನು ನಿಯಂತ್ರಿಸುವ ಅಸ್ತ್ರವಾಗಿ ಆರ್​ಬಿಐ ಇದನ್ನು ಬಳಸುವುದು ವಾಡಿಕೆಯಾಗಿದೆ. ಹಣದುಬ್ಬರದ ಸಂದರ್ಭದಲ್ಲಿ ಕೇಂದ್ರ ಬ್ಯಾಂಕು ರೆಪೊ ದರವನ್ನು ಹೆಚ್ಚಿಸುತ್ತದೆ. ಬಡ್ಡಿ ದರ ಏರಿಕೆಯಿಂದಾಗಿ ಬ್ಯಾಂಕುಗಳು ಆರ್​ಬಿಐನಿಂದ ಸಾಲ ಪಡೆದು ಗ್ರಾಹಕರಿಗೆ ಸಾಲ ನೀಡುವ ಪ್ರಮಾಣ ತಗ್ಗುತ್ತದೆ. ಈ ರೀತಿ ಹಣದ ಹರಿವನ್ನು ಮಾರುಕಟ್ಟೆಯಲ್ಲಿ ತಗ್ಗಿಸುವ ಮೂಲಕ ಬೆಲೆಗಳನ್ನು ನಿಯಂತ್ರಿಸಲು ಕೇಂದ್ರ ಬ್ಯಾಂಕ್ ಮುಂದಾಗುತ್ತದೆ. ಅಲ್ಲದೆ, ಬಡ್ಡಿ ದರ ಹೆಚ್ಚಾದಾಗ ಬ್ಯಾಂಕ್​ಗಳಲ್ಲಿ ಠೇವಣಿ ಪ್ರಮಾಣವೂ ಹೆಚ್ಚಿ ಮಾರುಕಟ್ಟೆಯಲ್ಲಿ ಹಣದ ಹರಿವು ಇಳಿಕೆಯಾಗುತ್ತದೆ. ಇದಕ್ಕೆ ವಿರುದ್ಧವಾಗಿ ಬೆಲೆಗಳು ತಗ್ಗಿದ ಸಂದರ್ಭದಲ್ಲಿ ಉತ್ಪನ್ನಗಳಿಗೆ ಬೇಡಿಕೆ ಸೃಷ್ಟಿಸಲು ಮಾರುಕಟ್ಟೆಯಲ್ಲಿ ಹಣದ ಹರಿವು ಹೆಚ್ಚಿಸುವ ನಿಟ್ಟಿನಲ್ಲಿ ರೆಪೊ ದರವನ್ನು ಆರ್​ಬಿಐ ಕಡಿತಗೊಳಿಸುವ ನಿರ್ಧಾರವನ್ನು ಕೈಗೊಳ್ಳುವ ನೀತಿಯನ್ನು ಅನುಸರಿಸುತ್ತದೆ.

2022ರ ಮೇ ತಿಂಗಳಿನಿಂದ ಇದುವರೆಗೆ ಆರು ಬಾರಿ ರೆಪೋ ದರವನ್ನು ಏರಿಕೆ ಮಾಡಲಾಗಿದ್ದು, ಒಟ್ಟಾರೆಯಾಗಿ ಶೇ. 2.5ರಷ್ಟು ಬಡ್ಡಿ ದರ ಹೆಚ್ಚಳ ಮಾಡಲಾಗಿದೆ. 2022ರ ಮೇ 4ರಂದು 40 ಮೂಲ ಅಂಕಗಳಷ್ಟು ಬಡ್ಡಿ ದರವನ್ನು ಹೆಚ್ಚಳ ಮಾಡಲಾಗಿತ್ತು. ನಂತರ 2022ರ ಜೂನ್, ಆಗಸ್ಟ್ ಮತ್ತು ಸೆಪ್ಟೆಂಬರ್​ನಲ್ಲಿ ಮೂರು ಬಾರಿ ತಲಾ 50 ಮೂಲ ಅಂಕಗಳಷ್ಟು ಏರಿಸಲಾಗಿತ್ತು. ಕಳೆದ ಡಿ. 6ರಂದು 35 ಅಂಕ ಹೆಚ್ಚಳ ಮಾಡಲಾಗಿತ್ತು. ನಿರಂತರವಾಗಿ ರೆಪೊ ದರ ಹೆಚ್ಚಳ ಮಾಡಿದ ಪರಿಣಾಮದ ಹೊರೆಯನ್ನು ಸಾಲಗಾರರು ಅನುಭವಿಸುತ್ತ ಬಂದಿದ್ದರು. ಸಾಲ ಪಡೆದುಕೊಂಡ ಗ್ರಾಹಕರು ಸಾಲ ಮರುವಪಾವತಿಯ ಕಂತುಗಳ ಮೊತ್ತ ಅಥವಾ ಸಾಲ ಮರುಪಾವತಿ ಅವಧಿ ಸಾಕಷ್ಟು ಹೆಚ್ಚಳವನ್ನು ಕಂಡಿತ್ತು. ಇದೇ ವೇಳೆ ಬ್ಯಾಂಕ್​ಗಳಲ್ಲಿನ ಇಡುವ ಠೇವಣಿಗಳ ಮೇಲಿನ ಬಡ್ಡಿ ದರವೂ ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿತ್ತು.

2023-24ನೇ ಹಣಕಾಸು ವರ್ಷದಲ್ಲಿ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ಬೆಳವಣಿಗೆಯು ಶೇ. 6.5ರಷ್ಟು ಇರಲಿದ್ದು, ಹಣದುಬ್ಬರವು ಶೇಕಡಾ 5.1ರಷ್ಟಿರಲಿದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಇದೇ ಸಂದರ್ಭದಲ್ಲಿ ಹೇಳಿರುವುದು ಕೂಡ ನೆಮ್ಮದಿ ತರುವ ಅಂಶವೇ ಆಗಿದೆ. ಹಣದುಬ್ಬರ ದರವನ್ನು ಶೇ. 6ರ ಒಳಗೆ ತರುವ ಉದ್ದೇಶವನ್ನು ಆರ್​ಬಿಐ ಹೊಂದಿತ್ತು. ಪ್ರಸ್ತುತ ಹಣದುಬ್ಬರುವ ಈ ಸಹಿಷ್ಣುತೆಯ ಮಿತಿಯೊಳಗೆ ಇರುವುದು ಆರ್ಥಿಕ ಚೇತರಿಕೆಯ ದ್ಯೋತಕವೇ ಆಗಿದೆ. ಈ ಕಾರಣದಿಂದಲೇ ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧಾರ ಕೈಗೊಂಡಿರಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net