

ರಾಜ್ಯ ಸರ್ಕಾರದಿಂದ ಹಂಚಿಕೆಯಾಗುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಂದ ಭಾರಿ ಪ್ರಮಾಣದ ಕಮಿಷನ್ ಪಡೆಯಲಾಗುತ್ತಿದೆ ಎಂಬ ಗುತ್ತಿಗೆದಾರರ ಸಂಘದ ಆರೋಪ ಗಂಭೀರ ಸ್ವರೂಪದ್ದಾಗಿದೆ. ಈ ಹಿಂದಿನ ಸರ್ಕಾರದ ಅವಧಿಯಲ್ಲೂ ಅವರ ಆರೋಪಗಳಿದ್ದವು, ಅದು 2023ರ ವಿಧಾನಸಭೆ ಚುನಾವಣೆಯ ಪ್ರಚಾರದ ವಸ್ತುವೂ ಆಗಿತ್ತು. ಈಗ ಪುನಃ ಅದೇ ಸ್ವರೂಪದ ಆರೋಪ ಕೇಳಿಬಂದಿದೆ. ಒಂದು ಜನತಾ ಸರ್ಕಾರವಾಗಿ ಈ ಆರೋಪದ ಹಿಂದಿನ ನಿಜ ತಿರುಳನ್ನು ಹೊರಹಾಕಲೇ ಬೇಕಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ‘10 ಪರ್ಸೆಂಟ್ ಸರ್ಕಾರ್’ ಎಂದು ಆರೋಪಿಸಿದ್ದು ಚುನಾವಣೆಯಲ್ಲಿ ಪರಿಣಾಮ ಬೀರಿತ್ತು. ಬಳಿಕ 2018ರ ವಿಧಾನಸಭೆ ಚುನಾವಣೆಗೆ ಒಂದು ವರ್ಷವಿದ್ದಾಗ ಗುತ್ತಿಗೆದಾರರ ಸಂಘ ‘40 ಪರ್ಸೆಂಟ್’ ಕಮಿಷನ್ ಆರೋಪ ಮಾಡಿ ಪ್ರಧಾನಿಗೇ ದೂರು ಬರೆದಿದ್ದು ನಂತರದ ಚುನಾವಣೆಗೆ ದೊಡ್ಡ ತಿರುವಾಗಿತ್ತು.
ಬಳಿಕ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಾನು ಮಾಡಿದ ಆರೋಪದ ತನಿಖೆಗಾಗಿ ಕಾಂಗ್ರೆಸ್ ಸರ್ಕಾರ ಆಯೋಗ ರಚಿಸಿ, ದೂರಿಗೆ ಸಂಬಂಧಿಸಿದಂತೆ ದಾಖಲೆ ಸಹಿತ ದೂರು ಕೊಡುವುದಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಆರೋಪ ಮಾಡಿದ್ದಕ್ಕೆ ತಕ್ಕುದಾದ ಅಥವಾ ಅದನ್ನು ಚುನಾವಣಾ ವಿಷಯವಾಗಿ ಮಹತ್ವ ನೀಡಿದಷ್ಟು ದಾಖಲೆ ಸಲ್ಲಿಕೆ ಆಗಲೇ ಇಲ್ಲ. ಹಾಗೂ ಹೀಗೂ ತಿಪ್ಪೆ ಸಾರಿಸಲಾಯಿತು. ಈಗ ಪುನಃ ಕಮಿಷನ್ ಭೂತ ರಾಜ್ಯ ಸರ್ಕಾರಕ್ಕೆ ಎದುರಾಗಿದೆ.
ಅಂದ ಹಾಗೆ, ಗುತ್ತಿಗೆದಾರರು ಸುಖಾಸುಮ್ಮನೆ ಆರೋಪ ಮಾಡುವುದಕ್ಕೆ ಬರುವುದಿಲ್ಲ. ಹಾಗೆಂದು ಅವರು ಸರ್ಕಾರಕ್ಕೆ ದಾಖಲೆ ಕೊಡುವುದಕ್ಕೂ ಅಸಾಧ್ಯದ ವಾತಾವರಣ ಆಡಳಿತ ಯಂತ್ರದಲ್ಲಿದೆ ಎಂಬುದು ಗುಟ್ಟಿನ ವಿಚಾರವೇನಲ್ಲ. ಹಾಗಿದ್ದ ಮೇಲೆ ಸರ್ಕಾರ ‘ದಾಖಲೆ ಕೊಡಲಿ ನೋಡೋಣ’ ಎಂದು ಸುಮ್ಮನೆ ಕೂರುವುದು ಸರ್ವಥಾ ಸಾಧುವಲ್ಲ. ಗುತ್ತಿಗೆ ವ್ಯವಸ್ಥೆಯಲ್ಲಿ ಕಮಿಷನ್ ಹಾವಳಿ ಯಾವ ಮಟ್ಟಿಗಿದೆ ಎಂಬುದರ ಅರಿವಿರುವ ಸರ್ಕಾರ, ಅದನ್ನು ಮಟ್ಟ ಹಾಕಲು ವ್ಯವಸ್ಥೆ ರೂಪಿಸಲು ಮುಕ್ತ ಅವಕಾಶವಿದೆ. ಗುತ್ತಿಗೆದಾರರು ರಾಜಕಾರಣಿಗಳನ್ನು- ರಾಜಕಾರಣಿಗಳು ಗುತ್ತಿಗೆದಾರರನ್ನು ಪರಸ್ಪರ ನಿಯಂತ್ರಿಸುವುದು ಸರ್ವೆ ಸಾಮಾನ್ಯ. ಇಲ್ಲಿಂದಲೇ ಕಮೀಷನ್ ಬ್ರಹ್ಮರಾಕ್ಷಸ ಚಿಗುರೊಡೆಯುತ್ತದೆ, ಇದನ್ನು ಚೆನ್ನಾಗಿಯೇ ಅರ್ಥ ಮಾಡಿಕೊಂಡ ಅಧಿಕಾರಿಗಳ ವರ್ಗ ಬೆಣ್ಣೆಯಲ್ಲಿ ಕೂದಲು ತೆಗೆದಂತೆ ‘ಕಮಿಷನ್ ನಮ್ಮ ಹಕ್ಕು’ ಎಂಬ ರೀತಿ ಬಲೆ ಹಾಕಿ ಕುಳಿತುಕೊಳ್ಳುತ್ತಾರೆ.
ಹೀಗಾಗಿ ಪಾರದರ್ಶಕತೆ ಆಡಳಿತ ಎಂಬುದು ಬಾಯಿ ಮಾತಲ್ಲಿ ಉಳಿಯದೆ ಜನತಾ ಜನಾರ್ದನನ ದೃಷ್ಟಿಯಲ್ಲಿಟ್ಟುಕೊಂಡು ಅಚ್ಚುಕಟ್ಟಾದ ವ್ಯವಸ್ಥೆ ರೂಪಿಸಬೇಕಾಗಿರುವುದು ಇಂದಿನ ಅಗತ್ಯ. ಒಂದು ಸರಿಯಾದ ಪಥ ನಿರ್ವಿುಸಿದರೆ ನಾಡಿಗೂ ಹಿತ, ಜನರಿಗೂ ಹಿತ. ಕಮಿಷನ್ ದಂಧೆಯಿಂದ ಕಾಮಗಾರಿಗಳ ಗುಣಮಟ್ಟದ ಮೇಲೆ ನೇರ ಪರಿಣಾಮ ಆಗುತ್ತದೆ. ಇದನ್ನು ಜನರೇ ಅನುಭವಿಸುವುದು. ಈ ಹಿನ್ನೆಲೆಯಲ್ಲಿ ಇದರ ಬಗ್ಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಸೂಕ್ತ ಶಿಸ್ತುಕ್ರಮ ಜರುಗಿಸಬೇಕು. ಮುಂದೆ ಈ ರೀತಿ ನಡೆಯದಂತೆ ನೋಡಿಕೊಳ್ಳಬೇಕು.