

ಡಿಜಿಟಲ್ ಬಂಧನದ ಹಾವಳಿ ಇತ್ತೀಚಿನ ದಿನಗಳಲ್ಲಿ ಮೇರೆ ಮೀರಿದೆ. ಉತ್ತರಪ್ರದೇಶದ ಆಗ್ರಾದಲ್ಲಿ ಶಿಕ್ಷಕಿಯೊಬ್ಬರಿಗೆ ಕರೆ ಮಾಡಿದ ದುಷ್ಕರ್ವಿುಗಳು, ‘ನಿಮ್ಮ ಮಗಳು ಲೈಂಗಿಕ ಹಗರಣದಲ್ಲಿ ಸಿಕ್ಕಿಬಿದ್ದಿದ್ದಾಳೆ’ ಎಂದು ಹೆದರಿಸಿದ್ದಕ್ಕೆ ಆ ಶಿಕ್ಷಕಿ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಅಪರಿಚಿತರಿಂದ ಅನಪೇಕ್ಷಿತ ಕರೆಗಳು ಬರುವುದು, ಪೊಲೀಸರ ವೇಷದ ದುಷ್ಕರ್ವಿುಗಳ ಬ್ಲ್ಯಾಕ್ವೆುೕಲ್ಗೆ ಹೆದರಿ ಜನರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಳ್ಳುವುದು ನಡೆದೇ ಇದೆ. ‘ನಿಮ್ಮ ಹೆಸರಿನಲ್ಲಿ ಮಾದಕ ವಸ್ತುಗಳ ಕೋರಿಯರ್ ಬಂದಿದೆ’ ಎಂದು ಹೇಳಿ ಹೆದರಿಸುವುದು, ‘ಇನ್ನೆರಡು ಗಂಟೆಗಳಲ್ಲಿ ನಿಮ್ಮ ಮೊಬೈಲ್ನಲ್ಲಿರುವ ಸಿಮ್ಾರ್ಡ್ ಬ್ಲಾಕ್ ಆಗುತ್ತದೆ’ ಎನ್ನುವುದು, ವಿದೇಶಿ ವಿಪಿಎನ್ (ವರ್ಚುವಲ್ ಪ್ರೖೆವೇಟ್ ನೆಟ್ವರ್ಕ್) ಮೂಲಕ ಶಾಲೆಗಳಿಗೆ ಬಾಂಬ್ ಬೆದರಿಕೆಯ ಇಮೇಲ್ ಕಳಿಸುವುದು... ಹೀಗೆ ಸೈಬರ್ ವಂಚಕರು ಹತ್ತು ಹಲವು ರೀತಿಯ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಜನರು ಹಣ-ನೆಮ್ಮದಿ ಕಳೆದುಕೊಳ್ಳುತ್ತಲೇ ಇದ್ದಾರೆ. ವಂಚಕರು ಅಮಾಯಕರನ್ನು ಬಲೆಗೆ ಕೆಡವಲು ಪೊಲೀಸ್, ಆಂಟಿ-ನಾಕೋಟಿಕ್ ಅಥವಾ ಕಸ್ಟಮ್ಸ್ ಅಧಿಕಾರಿಗಳಂಥ ಕಾನೂನು ಜಾರಿ ಅಧಿಕಾರಿಗಳನ್ನು ಅನುಕರಿಸುತ್ತಾರೆ. ಅಮಾಯಕರು ಯೋಚಿಸಲು ಅವಕಾಶ ನೀಡದಂತೆ, ಹಣವನ್ನು ತ್ವರಿತವಾಗಿ ಹಸ್ತಾಂತರಿಸುವಂತೆ ಒತ್ತಡ ಹೇರುತ್ತಾರೆ.
ಈ ಬಗ್ಗೆ ಪೊಲೀಸ್ ಇಲಾಖೆ ತುರ್ತು ಗಮನ ಹರಿಸಬೇಕಾಗಿದೆ. ದುರುಳರ ಬಂಧನಕ್ಕೆ ಬಲೆ ಬೀಸುವುದು ಮಾತ್ರವಲ್ಲದೆ, ಮತ್ತಷ್ಟು ಅಮಾಯಕರು ಇದಕ್ಕೆ ಬಲಿಯಾಗದಂತೆ ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸಲು ಅವಶ್ಯಕ ಕ್ರಮ ಕೈಗೊಳ್ಳಬೇಕಾಗಿದೆ. ಅಪರಿಚಿತರಿಂದ, ವಂಚಕರಿಂದ ಇಂಥ ಬೆದರಿಕೆ ಕರೆಗಳು ಬಂದಾಗ ಜನರು ಕೂಡ ಆತಂಕಕ್ಕೆ ಒಳಗಾಗದೆ, ಮಾಹಿತಿಯನ್ನು ಪರಾಮಶಿಸಬೇಕು. ಬಲವಂತವಾಗಿ ಅಥವಾ ಒತ್ತಡದಲ್ಲಿ ಹಣವನ್ನು ವರ್ಗಾಯಿಸಬಾರದು. ಅಪರಾಧ ಪ್ರಕರಣದ ಬಗ್ಗೆ ತನಿಖೆ ಮಾಡುವಾಗ ಯಾವುದೇ ಕಾನೂನು ಜಾರಿ ಅಧಿಕಾರಿ ಹಣವನ್ನು ವರ್ಗಾಯಿಸಲು ಅಥವಾ ಠೇವಣಿ ಮಾಡಲು ಕೇಳುವುದಿಲ್ಲ ಎಂಬ ಸಾಮಾನ್ಯ ಸಂಗತಿಯನ್ನು ಅರ್ಥ ಮಾಡಿಕೊಳ್ಳಬೇಕು. ಬ್ಯಾಂಕ್ಗಳು ಮೊಬೈಲ್ ಫೋನ್ಗಳ ಮೂಲಕ ಕೆವೈಸಿ ಅಥವಾ ವೈಯಕ್ತಿಕ ಮಾಹಿತಿಯನ್ನು ಪಡೆಯುವುದಿಲ್ಲ. ಯಾವುದೇ ಡಿಜಿಟಲ್ ವಂಚನೆಯಾದಾಗ ಸೈಬರ್ ಕ್ರೖೆಮ್ ವಿಭಾಗದ ಸಹಾಯವಾಣಿ (1930) ಮತ್ತು ಸ್ಥಳೀಯ ಪೊಲೀಸರಿಗೆ ಮಾಹಿತಿ ತಿಳಿಸಬೇಕು. ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಎಚ್ಚರ ವಹಿಸಬೇಕು. ವೈಯಕ್ತಿಕ ವಿವರಗಳು, ಫೋಟೋಗಳು ಮತ್ತು ವಿಡಿಯೋಗಳಿಗೆ ಸಾರ್ವಜನಿಕ ಪ್ರವೇಶವನ್ನು ತಡೆಯಲು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಗೌಪ್ಯತೆಯ ಸೆಟ್ಟಿಂಗ್ಗಳನ್ನು ಸಕ್ರಿಯಗೊಳಿಸುವುದು ಅಗತ್ಯ. ಅದೇನಿದ್ದರೂ, ಈ ಹೊಸ ಮತ್ತು ಘಾತಕ ಸವಾಲಿನ ವಿರುದ್ಧ ಹೋರಾಡುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಮಹತ್ವದ್ದು. ಹಾಗಾಗಿ, ಡಿಜಿಟಲ್ ಬಂಧನದ ಪ್ರಕರಣಗಳನ್ನು ಹಾಗೂ ಈ ಬಗೆಯ ಯಾವುದೇ ಬೆದರಿಕೆಗಳನ್ನು ಎದುರಿಸಲು ರಾಷ್ಟ್ರವ್ಯಾಪಿ ಪೊಲೀಸ್ ವ್ಯವಸ್ಥೆ ಸಜ್ಜುಗೊಳ್ಳಬೇಕಿದೆ. ಅಪರಾಧಿಗಳು ಬಳಸುವ ತಂತ್ರಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ, ಜನರು ವಂಚನೆಗಳಿಗೆ ಬಲಿಯಾಗುವುದನ್ನು ತಪ್ಪಿಸಬಹುದು.